ಭೋಪಾಲ್: ಮದುವೆಯಾಗಬೇಕು, ಸುಂದರ ಸಂಸಾರ ಕಟ್ಟಿಕೊಳ್ಳಬೇಕು ಎಂದು ಕನಸು ಕಾಣುತ್ತಿದ್ದ ಮುಗ್ಧ ಪುರುಷರನ್ನೇ ಗುರಿಯಾಗಿಸಿಕೊಂಡು ಮದುವೆ ವಂಚನೆ ನಡೆಸುತ್ತಿದ್ದ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿರುವ ರೋಚಕ ಘಟನೆ ಬೆಳಕಿಗೆ ಬಂದಿದೆ.
ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಅನುರಾಧಾ ಪಾಸ್ವಾನ್ ಎಂಬ ಮಹಿಳೆಯನ್ನು ರಾಜಸ್ಥಾನ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಈಕೆ ಕೇವಲ ಏಳು ತಿಂಗಳ ಅಂತರದಲ್ಲಿ ಬರೋಬ್ಬರಿ 25 ಪುರುಷರನ್ನು ಮದುವೆಯಾಗಿದ್ದಾಳೆ! ಮದುವೆಯಾದ ಕೆಲವೇ ದಿನಗಳಲ್ಲಿ ಪತಿ ಮನೆಯಿಂದ ನಗದು ಹಣ, ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗುತ್ತಿದ್ದಳು ಎಂಬ ಗಂಭೀರ ಆರೋಪ ಈಕೆಯ ಮೇಲಿದೆ.
ಪ್ರಕರಣ ಬೆಳಕಿಗೆ ಬಂದದ್ದು ಹೇಗೆ: ಸವಾಯಿ ಮಾಧೋಪುರದ ವ್ಯಕ್ತಿಯೊಬ್ಬರು ಮದುವೆಯಾದ ಕೆಲವೇ ದಿನಗಳಲ್ಲಿ ನವವಿವಾಹಿತೆ ಬೆಲೆಬಾಳುವ ವಸ್ತುಗಳೊಂದಿಗೆ ನಾಪತ್ತೆಯಾಗಿದ್ದಾಳೆ ಎಂದು ನೀಡಿದ ದೂರಿನ ಮೇರೆಗೆ ಈ ದರೋಡೆಕೋರ ವಧುವಿನ ಅಸಲಿಯತ್ತು ಬಯಲಾಗಿದೆ.
ಪೊಲೀಸರ ವಿನೂತನ ಕಾರ್ಯಾಚರಣೆ: ಆರೋಪಿಯನ್ನು ಪತ್ತೆಹಚ್ಚಲು ರಾಜಸ್ಥಾನ ಪೊಲೀಸರು ವರನಂತೆ ನಟಿಸುವ ರಹಸ್ಯ ತಂತ್ರ ರೂಪಿಸಿದರು. ಪೊಲೀಸ್ ಸಿಬ್ಬಂದಿಯೊಬ್ಬರು ವಧುವಿನ ಹುಡುಕಾಟದಲ್ಲಿದ್ದ ವ್ಯಕ್ತಿಯಂತೆ ನಟಿಸಿ ಖೆಡ್ಡಾ ತೋಡಿ ಈಕೆಯನ್ನು ಸೆರೆಹಿಡಿದಿದ್ದಾರೆ.
ದೊಡ್ಡ ಜಾಲದ ಶಂಕೆ: ಕೇವಲ ಏಳು ತಿಂಗಳಲ್ಲಿ 25 ಮದುವೆಗಳಾಗಿರುವುದು ಹಾಗೂ ಈಕೆಯ ಹಿಂದೆ ದೊಡ್ಡ ವಂಚಕರ ಜಾಲವೇ ಕಾರ್ಯನಿರ್ವಹಿಸುತ್ತಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಪವಿತ್ರ ಮದುವೆ ಬಂಧವನ್ನೇ ಹಣ ಸಂಪಾದನೆಯ ದಾರಿಯನ್ನಾಗಿ ಮಾಡಿಕೊಂಡಿರುವ ಈಕೆಯ ಕೃತ್ಯ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮದುವೆಯ ವಿಚಾರದಲ್ಲಿ ಯುವಕರು ಆತುರಪಡಬಾರದು ಮತ್ತು ಸಂಬಂಧ ಬೆಳೆಸುವ ಮುನ್ನ ವ್ಯಕ್ತಿಯ ಹಿನ್ನೆಲೆ ಹಾಗೂ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.





Leave a comment