ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಕುಕ್ಕುವಾಡ ಕಾರ್ಖಾನೆಯಿಂದ ನಿಲ್ಲದ ತೊಂದರೆ: ಜಿಲ್ಲಾಡಳಿತ ವಿರುದ್ಧ ರೈತ ಒಕ್ಕೂಟ ಆಕ್ರೋಶ

On: March 9, 2023 11:22 AM
Follow Us:
---Advertisement---

 

ದಾವಣಗೆರೆ: ಕುಕ್ಕುವಾಡದ ಸಕ್ಕರೆ ಕಾರ್ಖಾನೆಯಿಂದ 12 ಗ್ರಾಮಗಳಿಗೆ ತೊಂದರೆಯಾಗುತ್ತಿದೆ. ಜಿಲ್ಲಾಡಳಿತಕ್ಕೆ ನಾಲ್ಕು ತಿಂಗಳ ಹಿಂದೆಯೇ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ರಸ್ತೆ ತಡೆ, ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗಿದೆ. ಆದರೂ ಕಾರ್ಖಾನೆಯಿಂದ ಆಗುತ್ತಿರುವ ತೊಂದರೆ ನಿವಾರಿಸಲುಜಿಲ್ಲಾಡಳಿತ ನೀಡಿದ್ದ ಭರವಸೆ ಈಡೇರುವ ಲಕ್ಷಣ ಗೋಚರಿಸುತ್ತಿಲ್ಲ. ಎಲ್ಲಾ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು. ಇಲ್ಲದಿದ್ದರೆ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಬೇಕಾಗುತ್ತದೆ ಎಂದು ರೈತ ಒಕ್ಕೂಟದ ಮುಖಂಡ ಬಿ.ಎಂ.ಸತೀಶ್ ಕೊಳೇನಹಳ್ಳಿ ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತವು ಮಾರ್ಚ್ 13ರಂದು ಮಧ್ಯಾಹ್ನ 3. 30ಕ್ಕೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕುಕ್ಕವಾಡ ಸಕ್ಕರೆ ಕಾರ್ಖಾನೆ ಸುತ್ತಮುತ್ತಲಿನ ಗ್ರಾಮಗಳಾದ ಕೊಳೇನಹಳ್ಳಿ, ಕನಗೊಂಡನಹಳ್ಳಿ, ಬಲ್ಲೂರು, ಶಿರಗಾನಹಳ್ಳಿ, ಜಡಗನಹಳ್ಳಿ, ನಾಗರಸನಹಳ್ಳಿ, ಕುಕ್ಕುವಾಡ, ವಡೆಯರಹಳ್ಳಿ, ಮುದ ಹದಡಿ, ಬಟ್ಲಕಟ್ಟೆ, ಹದಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಕುಕ್ಕವಾಡ ಸಕ್ಕರೆ ಕಾರ್ಖಾನೆ ಚೇರ್ಮನ್, ವ್ಯವಸ್ಥಾಪಕ ನಿರ್ದೇಶಕರ ಸಮ್ಮುಖದಲ್ಲಿ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು.

ಕಾರ್ಖಾನೆ ಮಾಲೀಕರು, ಜಿಲ್ಲಾಧಿಕಾರಿಗಳು ಜಿಲ್ಲಾಡಳಿತದ ಸಭಾಂಗಣದಲ್ಲಿ ಸಭೆ ನಡೆಸಬೇಕು. ಕಾರ್ಖಾನೆ ಆವರಣದಲ್ಲಿ ನಡೆಸುವುದು ಬೇಡ ಎಂದ ಅವರು, ರೈತರ ಸಮಸ್ಯೆಗಳ ಬಗ್ಗೆ ಕುಲಂಕುಶವಾಗಿ ಚರ್ಚಿಸಿ ಸೂಕ್ತ ಪರಿಹಾರ ಮಾರ್ಗಗಳನ್ನು
ತೀರ್ಮಾನ ಮಾಡಬೇಕೆಂದು ಆಗ್ರಹಿಸಿದರು.

ಈ ಹಿಂದೆ ನಾವು 2022ರ ಡಿಸೆಂಬರ್ ನಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಕುಕ್ಕುವಾಡ ಸಕ್ಕರೆ ಕಾರ್ಖಾನೆಗಳಿಂದ ಆಗುವ ಸಮಸ್ಯೆಗಳನ್ನು ತಿಳಿಸಿ, ಪರಿಹಾರ ಮಾಡುವಂತೆ ಮನವಿ ನೀಡಿದ್ದೆವು. ಅಗ ಜಿಲ್ಲಾಧಿಕಾರಿಗಳು ಸಕ್ಕರೆ ಕಾರ್ಖಾನೆ ಆಡಳಿತ
ಮಂಡಳಿಗೆ ರೈತರ ಸಮಸ್ಯೆ ಕುರಿತು ಕಾರಣ ಕೇಳಿ ನೋಟಿಸ್ ನೀಡಲಾಗುವುದು ಎಂದು ಹೇಳಿದ್ದರು. ಆದರೆ ಒಂದು ತಿಂಗಳಾದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಜನವರಿ 19ರಂದು ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ಅಂದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರರು ಮನವಿ ಸ್ವೀಕರಿಸಿ ಶೀಘ್ರವೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಒಂದು ತಿಂಗಳಾದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಮತ್ತೆ ಮಾರ್ಚ್ 6ರಂದು ಕುಕ್ಕವಾಡ ಗ್ರಾಮದ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಮಧ್ಯಾಹ್ನವಾದರೂ ಸ್ಥಳಕ್ಕೆ ಯಾವುದೇ ಅಧಿಕಾರಿಗಳು ನಮ್ಮ ಸಮಸ್ಯೆಗಳನ್ನು ಕೇಳದ ಕಾರಣ ದಾವಣಗೆರೆಗೆ ಬಂದು ಡಿಸಿ ಕಚೇರಿಗೆ ಬಂದು ಮುತ್ತಿಗೆ ಹಾಕಲಾಗಿತ್ತು. ಈ ವೇಳೆ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರಲಿಲ್ಲ. ಅಪರ ಜಿಲ್ಲಾಧಿಕಾರಿಗಳನ್ನು ಕಳುಹಿಸಿ ನಮ್ಮನ್ನು ಸುಮ್ಮನೆ ಮಾಡಲು ಪ್ರಯತ್ನಿಸಿದರು ಎಂದು ಮಾಹಿತಿ ನೀಡಿದರು.

ನಾವು ಸುಮ್ಮನಾಗದ ಕಾರಣ ಇದೇ ಮಾರ್ಚ್ 13ರಂದು ಸಭೆ ಕರೆಯಲಾಗುವುದೆಂದು ಭರವಸೆ ನೀಡಿದ್ದ ಕಾರಣ ನಾವು ಹಿಂತೆಗೆದುಕೊಂಡಿದ್ದು ಕಾರಣ ಈಗಲಾದರೂ ಜಿಲ್ಲಾಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕಾರ್ಖಾನೆ ಮಾಲೀಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಕಳುಹಿಸಬೇಕು. ಇಲ್ಲವಾದರೆ ಅಂದಿನ ಸಭೆಯನ್ನು ಬಹಿಷ್ಕರಿಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಅವರಿಗೆ ರೈತರ ಹಿತಾಸಕ್ತಿಗಿಂತ ರಾಜಕಾರಣಿಗಳಾದ ಶಾಮನೂರು ಶಿವಶಂಕರಪ್ಪ ಅವರ ಹಿತಾಸಕ್ತಿಯೇ ಹೆಚ್ಚೆಂದು ಕಾಣುತ್ತದೆ. ಡಿಸಿಯವರು ಜಿಲ್ಲೆಯ ರೈತರ ಪರವಾಗಿ ಮಾತನಾಡದೆ ಕೇವಲ ರಾಜಕಾರಣಿಗಳು, ಸಕ್ಕರೆ ಕಾರ್ಖಾನೆಗಳ ಮಾಲೀಕರ ಪರವಾಗಿ ಮಾತನಾಡುತ್ತಿದ್ದಾರೆ. ಅವರಿಗೆ ರೈತರ ನೋವು ಕಾಣಿಸುತ್ತಿಲ್ಲ ಎಂದು ಕಿಡಿಕಾರಿದರು.

ಗೋಷ್ಠಿಯಲ್ಲಿ ರೈತ ಮುಖಂಡರಾದ ಬಲ್ಲೂರು ಬಸವರಾಜ್, ಕುಕ್ಕುವಾಡದ ಜಿ ಎಂ ರುದ್ರೇಗೌಡ, ಕನಗೊಂಡನಹಳ್ಳಿ ವೈ.ಬಿ.ಚನ್ನಪ್ಪ, ಎಸ್.ನಿಂಗಪ್ಪ, ವೈ. ಎನ್.ತಿಪ್ಪೇಸ್ವಾಮಿ ಮತ್ತಿತರರು ಹಾಜರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment