Home ದಾವಣಗೆರೆ ಕಾಂಗ್ರೆಸ್ ನವರು ಕಳ್ ನನ್ನ… ಏಕವಚನ ಪದಪ್ರಯೋಗದ ಬಗ್ಗೆ ಕ್ಷಮೆ ಕೇಳಲು ಕಾಂಗ್ರೆಸ್ ಗಡುವು ಬೆನ್ನಲ್ಲೇ ಬಹಿರಂಗ ಕ್ಷಮೆಯಾಚಿಸಿದ್ಯಾಕೆ ಬಿ. ವೈ. ವಿಜಯೇಂದ್ರ?
ದಾವಣಗೆರೆನವದೆಹಲಿಬೆಂಗಳೂರು

ಕಾಂಗ್ರೆಸ್ ನವರು ಕಳ್ ನನ್ನ… ಏಕವಚನ ಪದಪ್ರಯೋಗದ ಬಗ್ಗೆ ಕ್ಷಮೆ ಕೇಳಲು ಕಾಂಗ್ರೆಸ್ ಗಡುವು ಬೆನ್ನಲ್ಲೇ ಬಹಿರಂಗ ಕ್ಷಮೆಯಾಚಿಸಿದ್ಯಾಕೆ ಬಿ. ವೈ. ವಿಜಯೇಂದ್ರ?

Share
ವಿಜಯೇಂದ್ರ
Share

ಬೆಂಗಳೂರು: ದಾವಣಗೆರೆಯ ಸಾರ್ವಜನಿಕ ವೇದಿಕೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ಧ ಆಕ್ಷೇಪಾರ್ಹ ಹಾಗೂ ಏಕವಚನದ ಶಬ್ದಪ್ರಯೋಗ ಮಾಡಿ ಭಾರೀ ಟೀಕೆಗೆ ಗುರಿಯಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೊನೆಗೂ ತಮ್ಮ ಹೇಳಿಕೆಗೆ ಬಹಿರಂಗವಾಗಿ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿದ್ದಾರೆ. ಆದರೆ, ಕ್ಷಮೆ ಕೇಳುವ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರದ ವಿರುದ್ಧ ‘ಸ್ಟಿಂಗ್ ಕಾರ್ಯಾಚರಣೆ’ ಅಸ್ತ್ರ ಪ್ರಯೋಗಿಸಿ ಮತ್ತಷ್ಟು ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ತರಾಟೆಗೆ ತೆಗೆದುಕೊಂಡಿದ್ದ ಬಿ.ವೈ. ವಿಜಯೇಂದ್ರ, ಸಿದ್ದರಾಮಯ್ಯ ಸರ್ಕಾರದ ಮೀಸಲಾತಿ ಗೊಂದಲ, ಕೆಪಿಎಸ್‌ಸಿ ಪರೀಕ್ಷಾ ಅಕ್ರಮಗಳು, ನಿರುದ್ಯೋಗಿಗಳಿಗೆ ಉದ್ಯೋಗ ಭರ್ತಿ ವಿಳಂಬ ಹಾಗೂ ಹಾಲಿನ ದರ ಏರಿಕೆಯಂತಹ ಜನಸಾಮಾನ್ಯರ ಸಮಸ್ಯೆಗಳ ಕುರಿತು ಆವೇಶಭರಿತರಾಗಿ ಮಾತನಾಡಿದ್ದರು. ಈ ಭಾಷಣದ ಭರದಲ್ಲಿ ಅವರು, ಕಾಂಗ್ರೆಸ್ ಮುಖಂಡರನ್ನು ಉದ್ದೇಶಿಸಿ ಏಕವಚನದಲ್ಲಿ ನಿಂದಿಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ವಾಕ್ಸಮರ ತಾರಕಕ್ಕೇರಿತ್ತು.

ಕಾಂಗ್ರೆಸ್‌ನಿಂದ ಗಡುವು ಹಾಗೂ ಪ್ರತಿಭಟನೆ: ವಿಜಯೇಂದ್ರ ಅವರ ಹೇಳಿಕೆಯನ್ನು ಖಂಡಿಸಿದ್ದ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ ಮೂರು ದಿನಗಳೊಳಗೆ ಷರತ್ತಿಲ್ಲದೆ ಕ್ಷಮೆ ಕೋರುವಂತೆ ಗಡುವು ವಿಧಿಸಿದ್ದರು. ಬೆಂಗಳೂರಿನಲ್ಲಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ನಿವಾಸಕ್ಕೆ ಮುತ್ತಿಗೆ ಪ್ರಯತ್ನ ಮತ್ತು ಪೋಸ್ಟರ್ ಅಂಟಿಸಿ ಪ್ರತಿಭಟನೆ ನಡೆಸಲಾಗಿತ್ತು.

ವಿಜಯೇಂದ್ರ ಸ್ಪಷ್ಟನೆ ಮತ್ತು ಕ್ಷಮೆಯಾಚನೆ: ಯುವಜನರ ಭವಿಷ್ಯ ಹಾಗೂ ಮೀಸಲಾತಿ ಗೊಂದಲದ ಬಗ್ಗೆ ಮಾತನಾಡುವಾಗ ಭಾವೋದ್ವೇಗದಿಂದ ಆ ಪದ ಬಂದಿದೆ ವಿನಃ ಯಾರಿಗೂ ವೈಯಕ್ತಿಕ ಅವಮಾನ ಮಾಡುವ ಉದ್ದೇಶವಿರಲಿಲ್ಲ ಎಂದು ತಿಳಿಸಿ ವಿಜಯೇಂದ್ರ ಬಹಿರಂಗ ಕ್ಷಮೆ ಕೋರಿದರು.

ಸ್ಟಿಂಗ್ ವಿವಾದದ ಅಸ್ತ್ರ: ಕ್ಷಮೆ ಕೇಳಿದ ಬೆನ್ನಲ್ಲೇ ತಿರುಗೇಟು ನೀಡಿರುವ ವಿಜಯೇಂದ್ರ, ಸರ್ಕಾರ ಕುಮಾರಸ್ವಾಮಿಯವರನ್ನು ಗುರಿಯಾಗಿಸಿ ರಾಜಕೀಯ ದ್ವೇಷ ಸಾಧಿಸುತ್ತಿದೆಯೇ ಹೊರತು ರಹಸ್ಯ ಕಾರ್ಯಾಚರಣೆಯ ಹಿಂದಿನ ಷಡ್ಯಂತ್ರದ ಮೂಲ ಬೇರನ್ನು ಬಯಲಿಗೆಳೆಯಲು ಹಿಂದೇಟು ಹಾಕುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸರ್ಕಾರದ ರೈತವಿರೋಧಿ ಮತ್ತು ಜನವಿರೋಧಿ ನೀತಿಗಳ ವಿರುದ್ಧ ಇಂದು ಕೋಲಾರದಲ್ಲಿ ಬಿಜೆಪಿ ವತಿಯಿಂದ ಬೃಹತ್ ಜನಜಾಗೃತಿ ಅಭಿಯಾನ ಹಾಗೂ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles