ಪಾಮ್ ಬೀಚ್ ಕೌಂಟಿ: ಅಮೆರಿಕದ ಟೆಕ್ಸಾಸ್ನಿಂದ ಬಹಾಮಾಸ್ಗೆ ತೆರಳುತ್ತಿದ್ದ ಲಿಯರ್ಜೆಟ್ 60 ಖಾಸಗಿ ವಿಮಾನ ಫ್ಲೋರಿಡಾದ ವಸತಿ ಪ್ರದೇಶದಲ್ಲಿ ಭೀಕರವಾಗಿ ಪತನಗೊಂಡು, ವಿಮಾನದಲ್ಲಿದ್ದ ಎಲ್ಲಾ 9 ಮಂದಿ ದುರ್ಮರಣಕ್ಕೀಡಾದ ಘಟನೆಯ ಮತ್ತಷ್ಟು ಆಘಾತಕಾರಿ ವಿವರಗಳು ಹೊರಬಂದಿವೆ. ಟೆಕ್ ಲೀಡರ್ ಆಡಮ್ ರಾಬಿನ್ಸನ್ ಕುಟುಂಬ ಸೇರಿದಂತೆ ಒಟ್ಟು ಒಂಬತ್ತು ಜನರು ಈ ದುರಂತದಲ್ಲಿ ಜೀವ ಕಳೆದುಕೊಂಡಿದ್ದಾರೆ.
ವಿಮಾನವು ತೀವ್ರ ಹಿಮಪಾತ ಹಾಗೂ ಹವಾಮಾನ ವೈಪರೀತ್ಯಕ್ಕೆ ಸಿಲುಕಿದಾಗ, ಕ್ಯಾಪ್ಟನ್ ಜೆಫ್ ಗ್ರೆಗರಿ (55) ಅವರು ದೇವರ ಪ್ರಾರ್ಥನೆ ಮಾಡಿದ್ದರೆ, 20 ವರ್ಷದ ಸಹ-ಪೈಲಟ್ ನಥಾಲಿಯಾ ಫಿಲ್ಗುಎರಾಸ್ ತನ್ನ ಬಾಯ್ಫ್ರೆಂಡ್ಗೆ ಕೊನೆಯ ಸಂದೇಶ ಕಳುಹಿಸಿರುವುದು ವರದಿಯಾಗಿದೆ.
ದುರಂತಕ್ಕೂ ಕೆಲವೇ ನಿಮಿಷಗಳ ಮೊದಲು ಕಾಕ್ಪೇಟ್ನಲ್ಲಿದ್ದ ಸಂಭಾಷಣೆಯ ಆಡಿಯೋ ದಾಖಲಾಗಿದ್ದು, ವಿಮಾನವು ನಿಮಿಷಕ್ಕೆ 20,000ಕ್ಕೂ ಹೆಚ್ಚು ಅಡಿಗಳ ವೇಗದಲ್ಲಿ ಲಂಬವಾಗಿ ಕೆಳಗೆ ಕುಸಿದಿದೆ. ಹವಾಮಾನ ವೈಪರೀತ್ಯದ ಕಾರಣದಿಂದ 37,000 ಅಡಿ ಎತ್ತರಕ್ಕೆ ಹಾರಲು ಅನುಮತಿ ಕೋರಲಾಗಿತ್ತಾದರೂ, ಅತಿವೇಗದ ಕಾರಣದಿಂದ ವಿಮಾನ ನಿಯಂತ್ರಣ ತಪ್ಪಿದೆ. ಕೊನೆಯ ಕ್ಷಣದಲ್ಲಿ “ನಮ್ಮ ಬಳಿ ಸಮಯವಿಲ್ಲ” ಎಂದು ಕೂಗಿಕೊಳ್ಳುತ್ತಾ ವಿಮಾನವು ರಸ್ತೆಗೆ ಅಪ್ಪಳಿಸಿ ಬೃಹತ್ ಬೆಂಕಿಯ ಉಂಡೆಯಾಗಿ ಮಾರ್ಪಟ್ಟಿದೆ.
ಪ್ರಾರ್ಥನೆ ಮತ್ತು ಕೊನೆಯ ಸಂದೇಶ: ವಿಮಾನದ ಕ್ಯಾಪ್ಟನ್ ಜೆಫ್ ಗ್ರೆಗರಿ ಲಾರ್ಡ್ಸ್ ಪ್ರೇಯರ್ (ಪ್ರಾರ್ಥನೆ) ಮಾಡುತ್ತಿದ್ದರೆ, ಸಹ-ಪೈಲಟ್ ನಥಾಲಿಯಾ ತಮ್ಮ ಬಾಯ್ಫ್ರೆಂಡ್ಗೆ “ನನಗೆ ಟರ್ಬುಲೆನ್ಸ್ ಮತ್ತು ಐಸ್ ಸಿಕ್ಕಿದೆ” ಎಂದು ಮೆಸೇಜ್ ಕಳುಹಿಸಿದ್ದರು.
ಪ್ರಯಾಣಿಕರ ವಿವರ: ದುರಂತಕ್ಕೀಡಾದ ವಿಮಾನದಲ್ಲಿ ಟೆಕ್ ಮಿಲಿಯನೇರ್ ಆಡಮ್ ರಾಬಿನ್ಸನ್, ಅವರ ಪತ್ನಿ ಹೆಲೆನ್ ಶಾರ್ಪ್, ಇಬ್ಬರು ಪುಟ್ಟ ಮಕ್ಕಳು, ನಾನಿ ಹಾಗೂ ಇಬ್ಬರು ಕೌಟುಂಬಿಕ ಸ್ನೇಹಿತರು ಪ್ರಯಾಣಿಸುತ್ತಿದ್ದರು.
ಕಾಕ್ಪೇಟ್ ಆಡಿಯೋ ಮಾಹಿತಿ: ಲೈವ್ಎಟಿಸಿ ರೆಕಾರ್ಡಿಂಗ್ ಪ್ರಕಾರ, ವಿಮಾನವು ಓವರ್ಸ್ಪೀಡ್ನಲ್ಲಿದ್ದು, ನಿಮಿಷಕ್ಕೆ 20,000 ಅಡಿ ವೇಗದಲ್ಲಿ ಇಳಿಯುತ್ತಿದೆ ಎಂದು ಮೇಡೇ (Mayday) ತುರ್ತು ಸಂದೇಶ ರವಾನಿಸಲಾಗಿತ್ತು.
ತನಿಖೆ ಮುಂದುವರಿಕೆ: ರಾಷ್ಟ್ರೀಯ ಸಾರಿಗೆ ಭದ್ರತಾ ಮಂಡಳಿ (NTSB) ಹಾಗೂ ಎಫ್ಎಎ (FAA) ಈ ಭೀಕರ ಅಪಘಾತದ ಹಿಂದಿನ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆಯನ್ನು ತೀವ್ರಗೊಳಿಸಿವೆ.
ಈ ಭೀಕರ ಅಪಘಾತವು ಇಡೀ ವಿಮಾನಯಾನ ವಲಯವನ್ನು ಬೆಚ್ಚಿಬೀಳಿಸಿದ್ದು, ಮೃತರ ಕುಟುಂಬದವರ ಆಕ್ರೋಶ ಹಾಗೂ ಶೋಕ ಮಡುಗಟ್ಟಿದೆ.





Leave a comment