ಪುಣೆ: ಉನ್ನತ ವ್ಯಾಸಂಗಕ್ಕಾಗಿ ಲಂಡನ್ಗೆ ತೆರಳಿದ್ದ 34 ವರ್ಷದ ಮುಗ್ಧಾ ಅವಿನಾಶ್ ದೇಶ್ಮುಖ್ ಎಂಬ ಯುವತಿ, ಕುಟುಂಬಸ್ಥರಿಗೆ ತಿಳಿಸದೇ ಭಾರತಕ್ಕೆ ಮರಳಿ, ಪುಣೆಯ ಬಾಡಿಗೆ ಫ್ಲ್ಯಾಟ್ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಪೋಷಕರು ಆಕೆ ಇನ್ನೂ ಯುಕೆನಲ್ಲಿದ್ದಾಳೆ ಎಂದೇ ಭಾವಿಸಿದ್ದರು. ಆದರೆ, ಆಕೆಯ ಬ್ಯಾಂಕ್ ಖಾತೆಯಲ್ಲಾದ ಫುಡ್ ಡೆಲಿವರಿ ವಹಿವಾಟುಗಳು ಆಕೆ ಭಾರತದಲ್ಲೇ ಇರುವುದನ್ನು ಖಚಿತಪಡಿಸಿ, ಆಕೆಯ ಮೃತದೇಹ ಪತ್ತೆಯಾಗಲು ಕಾರಣವಾಗಿವೆ.
ಛತ್ರಪತಿ ಸಂಭಾಜಿನಗರ (ಔರಂಗಾಬಾದ್) ಮೂಲದ ಮುಗ್ಧಾ, 2025 ರ ಜುಲೈನಲ್ಲಿ ಎಂಬಿಎ ವ್ಯಾಸಂಗಕ್ಕಾಗಿ ಲಂಡನ್ಗೆ ತೆರಳಿದ್ದರು. ನಿರಂತರವಾಗಿ ಪೋಷಕರ ಸಂಪರ್ಕದಲ್ಲಿದ್ದ ಆಕೆ, ಅಕ್ಟೋಬರ್ 24 ರಿಂದ ಫೋನ್ ಕರೆಗಳಿಗೆ ಸ್ಪಂದಿಸುವುದು ನಿಲ್ಲಿಸಿದ್ದರು. ಆತಂಕಗೊಂಡ ಕುಟುಂಬಸ್ಥರು ಲಂಡನ್ನಲ್ಲಿದ್ದ ಆಕೆಯ ಸ್ನೇಹಿತೆಯನ್ನು ಸಂಪರ್ಕಿಸಿದಾಗ, ಮುಗ್ಧಾ ಆಗಸ್ಟ್ ತಿಂಗಳಿನಲ್ಲೇ ಯುಕೆ ತೊರೆದು ಭಾರತಕ್ಕೆ ಮರಳಿರುವ ವಿಚಾರ ಲಂಡನ್ ಪೊಲೀಸರ ಮೂಲಕ ತಿಳಿದುಬಂದಿದೆ.
ಫುಡ್ ಡೆಲಿವರಿ ಸುಳಿವು: ಮಗಳು ಸಂಪರ್ಕಕ್ಕೆ ಸಿಗದಿದ್ದಾಗ ತಂದೆ ಬ್ಯಾಂಕ್ ಖಾತೆಯ ವಿವರ ಪರಿಶೀಲಿಸಿದ್ದಾರೆ. ಅಕ್ಟೋಬರ್ 8 ರಿಂದ 25 ರ ಅವಧಿಯಲ್ಲಿ ಭಾರತದ ಆನ್ಲೈನ್ ಫುಡ್ ಡೆಲಿವರಿ (Zomato) ಆಪ್ಗಳ ಮೂಲಕ ಹಣ ಪಾವತಿಯಾಗಿರುವುದು ಕಂಡುಬಂದಿದೆ.
ಪೋಲಿಸ್ ಕಾರ್ಯಾಚರಣೆ: ಝೊಮಾಟೋ ಡೆಲಿವರಿ ವಿಳಾಸವನ್ನು ಆಧರಿಸಿ ಪೊಲೀಸರು ತನಿಖೆ ನಡೆಸಿದಾಗ ಪುಣೆಯ ಗಹುಂಜೆ ಪ್ರದೇಶದಲ್ಲಿರುವ ‘ಲೋಧಾ ಬೆಲ್ಮೊಂಡೋ’ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ ಪತ್ತೆಯಾಗಿದೆ.
ಮೃತದೇಹ ಪತ್ತೆ: ಒಳಗಿನಿಂದ ಬಾಗಿಲು ಹಾಕಲಾಗಿದ್ದ ಫ್ಲ್ಯಾಟ್ ಬಾಗಿಲನ್ನು ಕೀ-ಮೇಕರ್ ಸಹಾಯದಿಂದ ತೆಗೆದು ಪರಿಶೀಲಿಸಿದಾಗ ಮುಗ್ಧಾ ಶವವಾಗಿ ಬಿದ್ದಿರುವುದು ಕಂಡುಬಂದಿದೆ.
ಕಾಯ್ದಿರಿಸಿದ ವಿಸೆರಾ ಮಾದರಿ: ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ, ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಶಿರಗಾಂವ್ ಪೊಲೀಸರು ವಿಸೆರಾ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.
ಆಕೆ ಏಪ್ರಿಲ್ ತಿಂಗಳಿನಲ್ಲೇ ಈ ಫ್ಲ್ಯಾಟ್ ಅನ್ನು ಬಾಡಿಗೆಗೆ ಪಡೆದಿದ್ದು, ಆಗಸ್ಟ್ನಿಂದ ಇಲ್ಲೇ ವಾಸಿಸುತ್ತಿದ್ದರು. ಅಲ್ಲದೆ ಆನ್ಲೈನ್ನಲ್ಲಿ ಎಂಬಿಎ ವಿದ್ಯಾರ್ಥಿಗಳಿಗೆ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು ಎಂಬ ಅಂಶ ತನಿಖೆಯಿಂದ ತಿಳಿದುಬಂದಿದೆ. ಕುಟುಂಬಕ್ಕೆ ತಿಳಿಸದೆ ಆಕೆ ಏಕೆ ರಹಸ್ಯವಾಗಿ ಮರಳಿದ್ದರು ಹಾಗೂ ಸಾವಿಗೆ ನಿಖರ ಕಾರಣವೇನು ಎಂಬ ಕುರಿತು ಪೊಲೀಸರು ಸುದೀರ್ಘ ತನಿಖೆ ಮುಂದುವರಿಸಿದ್ದಾರೆ.





Leave a comment