ಬೆಂಗಳೂರು: “ಆಚಾರವಿಲ್ಲದ ನಾಲಿಗೆ, ವಿಚಾರವಿಲ್ಲದ ಮಾತು!”. ಇದು ಕೇಂದ್ರ ಸಚಿವ ಕುಮಾರಸ್ವಾಮಿಯವರನ್ನು ವಿವರಿಸಬಹುದಾದ ಅತ್ಯುತ್ತಮ ಸಾಲುಗಳು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅವರು, ನಿನ್ನೆ ಏನು ಮಾತನಾಡಿದ್ದೆ, ಮೊನ್ನೆ ಏನು ಮಾತನಾಡಿದ್ದೆ, ಇಂದು ಏನು ಮಾತನಾಡುತ್ತಿದ್ದೇನೆ, ನಾಳೆ ಏನು ಮಾತನಾಡುತ್ತೇನೆ ಎಂಬುದರ ಸ್ಪಷ್ಟತೆ ಸ್ವತಃ ಕುಮಾರಸ್ವಾಮಿಯವರಿಗೇ ಇಲ್ಲ ಎಂದು ಟೀಕಿಸಿದ್ದಾರೆ.
ಸಿದ್ದರಾಮಯ್ಯನವರ ವಿಷಯವನ್ನಿಟ್ಟುಕೊಂಡು ಒಮ್ಮೆ ಮುಖ್ಯಮಂತ್ರಿಗಳ ಕಡೆ ಬೆರಳು ತೋರಿಸುತ್ತಾರೆ, ಮತ್ತೊಮ್ಮೆ ಜಮೀರ್ ಅಹಮದ್ ಅವರ ಕಡೆ ಕೈ ತೋರಿಸುತ್ತಾರೆ, ಇನ್ನೊಮ್ಮೆ ಖರ್ಗೆ ಕುಟುಂಬದ ಕಡೆ ಕೈ ತೋರಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಂಡವರ ಮನೆಗೆ ಬೆಂಕಿ ಹಚ್ಚಿ ಬೇಳೆ ಬೇಯಿಸಿಕೊಳ್ಳುವುದನ್ನು ಮನೆಮುರುಕತನ ಎನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯನವರನ್ನು ಅತಿ ಹೆಚ್ಚು ಅವಮಾನಿಸಿದವರು ಮತ್ತು ಅವರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಿದವರು ಯಾರಾದರೂ ಇದ್ದರೆ, ಅದು ಕುಮಾರಸ್ವಾಮಿಯವರು ಮಾತ್ರ ಎಂದು ಇದು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಸ್ಪಷ್ಟವಾಗಿ ಗೋಚರಿಸುವ ಸತ್ಯ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸಿದ್ದರಾಮಯ್ಯನವರ ರಾಜಕೀಯ ಜೀವನದುದ್ದಕ್ಕೂ ಎಡೆಬಿಡದೆ ಕಾಡಿದವರು, ಇಂದು ಖರ್ಗೆ ಕುಟುಂಬದ ಕಡೆ ತಿರುಗಿದ್ದಾರೆ ಎಂದು ಆರೋಪಿಸಿದ್ದಾರೆ.
ಕುಮಾರಸ್ವಾಮಿಯವರೇ, ನಿಮ್ಮ ಐಟಿ ಸೆಲ್ನ ಹುಡುಗರು ವಿಚಾರಣೆಗೆ ಹಾಜರಾಗುತ್ತಿಲ್ಲವೇಕೆ? ಸ್ಟಿಂಗ್ ವಿಡಿಯೋ ಬಹಿರಂಗಪಡಿಸುವಲ್ಲಿ ನಮ್ಮವರ ಪಾತ್ರವಿಲ್ಲ ಎಂದು ಧೈರ್ಯವಾಗಿ ಹೇಳುವ ನೈತಿಕತೆಯನ್ನು ತೋರುತ್ತಿಲ್ಲವೇಕೆ? ವಿಡಿಯೋ ಅಪ್ಲೋಡ್ ಮಾಡಿದ್ದನ್ನು ವಿರೋಧಿಸುತ್ತಿಲ್ಲವೇಕೆ? ಅಕ್ಕ ಸಮ್ಮೇಳನದ ಹೆಸರಿನಲ್ಲಿ ಅಮೆರಿಕಕ್ಕೆ ಹೋಗಿ ನಡೆಸಿದ ಷಡ್ಯಂತ್ರವೇನು? ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಮಾತಿನಲ್ಲಿ ಸ್ಪಷ್ಟತೆ ಇಲ್ಲ: ಕುಮಾರಸ್ವಾಮಿಯವರ ಮಾತುಗಳಲ್ಲಿ ಯಾವುದೇ ಸ್ಪಷ್ಟತೆಯಿಲ್ಲದೆ, ದಿನಕ್ಕೊಂದು ಹೇಳಿಕೆ ನೀಡುತ್ತಾ ಗೊಂದಲ ಸೃಷ್ಟಿಸುತ್ತಿದ್ದಾರೆ.
ರಾಜಕೀಯ ಇತಿಹಾಸದ ನೆನಪು: ಸಿದ್ದರಾಮಯ್ಯನವರಿಗೆ ಸಿಎಂ ಹುದ್ದೆ ತಪ್ಪಿಸಿದವರು ಮತ್ತು ಹೆಚ್ಚು ಅವಮಾನಿಸಿದವರು ಕುಮಾರಸ್ವಾಮಿ ಅವರೇ ಎಂದು ಸಚಿವರು ಟೀಕಿಸಿದ್ದಾರೆ.
ಪ್ರಮುಖ ಪ್ರಶ್ನೆಗಳು ಮತ್ತು ಷಡ್ಯಂತ್ರದ ಆರೋಪ: ಐಟಿ ಸೆಲ್ ವಿಚಾರಣೆ, ಸ್ಟಿಂಗ್ ವಿಡಿಯೋ ಹಾಗೂ ಅಮೆರಿಕದ ಅಕ್ಕ ಸಮ್ಮೇಳನದ ಹೆಸರಿನಲ್ಲಿ ನಡೆದ ಷಡ್ಯಂತ್ರದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ಕೋರಿದ್ದಾರೆ.
ಸ್ವತಃ ತಮ್ಮ ಸಹೋದರನ ಕುಟುಂಬದ ಬೆಳವಣಿಗೆಯನ್ನೂ ಸಹಿಸದ ಕುಮಾರಸ್ವಾಮಿಯವರು ನಮ್ಮನ್ನು ಸಹಿಸಬಲ್ಲರೇ? ಎಂದು ಪ್ರಶ್ನಿಸಿರುವ ಅವರು, ಕುಮಾರಸ್ವಾಮಿಯವರೇ, ಕಿಂಚಿತ್ತಾದರೂ ಮಾತಿನಲ್ಲಿ ಘನತೆ ಬೆಳೆಸಿಕೊಳ್ಳಿ, ಸತ್ಯ ಹೇಳುವುದನ್ನು ರೂಢಿಸಿಕೊಳ್ಳಿ, ನಡತೆಯಲ್ಲಿ ತೂಕ ಹೆಚ್ಚಿಸಿಕೊಳ್ಳಿ ಎಂದು ಹರಿಹಾಯ್ದಿದ್ದಾರೆ.





Leave a comment