SUDDIKSHANA KANNADA NEWS/ DAVANAGERE/ DATE:23-09-2023
ದಾವಣಗೆರೆ: ಭದ್ರಾ ಜಲಾಶಯ (Bhadra Dam)ದಿಂದ ಬಲದಂಡೆ ನಾಲೆಯಲ್ಲಿ ನೀರು ಹರಿಸುವ ಸಂಬಂಧ ಭಾನುವಾರ ಸಂಜೆಯೊಳಗೆ ಲಿಖಿತ ಆದೇಶ ದೊರೆಯದಿದ್ದರೆ ಸೆ. 25ರ ಸೋಮವಾರದಂದು ದಾವಣಗೆರೆ ಬಂದ್ ನಡೆಸಲಾಗುವುದು. ನೀರಾವರಿ ಇಲಾಖೆ, ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರ ಭರವಸೆ ಬೇಕಿಲ್ಲ. ನಮಗೆ ಲಿಖಿತ ಆದೇಶ ಬೇಕು ಎಂದು ಭಾರತೀಯ ರೈತ ಒಕ್ಕೂಟವು ಒತ್ತಾಯಿಸಿದೆ.
ಈ ಸುದ್ದಿಯನ್ನೂ ಓದಿ:
Bhadra Dam: ಭದ್ರಾ ಡ್ಯಾಂನಿಂದ ಬಲದಂಡೆಯಲ್ಲಿ ನಾಲೆಯಲ್ಲಿ ನೀರು ಹರಿಯುತ್ತಾ? ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯುತ್ತಾ? ಸಚಿವ ಎಸ್. ಎಸ್. ಮಲ್ಲಿಕಾರ್ಜನ್ ಹೇಳಿದ್ದೇನು…?
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಬಿ. ಎಂ. ಸತೀಶ್ ಕೊಳೆನಹಳ್ಳಿ, ನಾಗೇಶ್ವರ ರಾವ್ ಹಾಗೂ ಶಾಮನೂರು ಲಿಂಗರಾಜ್ ಅವರು, ರೈತ ಮುಖಂಡರಾದ ಪ್ರೊ. ನರಸಿಂಹಪ್ಪ ಅವರು ಇಂದು ಬೆಳಿಗ್ಗೆ ಸಚಿವ ಡಿ. ಕೆ. ಶಿವಕುಮಾರ್ ಜೊತೆ ಮಾತನಾಡಿದ್ದಾರೆ. ಈ ವೇಳೆ ಭರವಸೆ ಮಾತು ಆಡಿದ್ದಾರೆ. ನಮಗೆ ಭರವಸೆ ಬೇಕಿಲ್ಲ. ನೀರು ಹರಿಸಬೇಕು ಎಂಬುದಷ್ಟೇ ನಮ್ಮ ಬೇಡಿಕೆ. ಪರಿಹಾರ ಬೇಕಿಲ್ಲ. ನೀರು ಬೇಕು ಎಂದರು.
ಭದ್ರಾ ಡ್ಯಾಂ (Bhadra Dam) ನೀರು ಹರಿಸಲೇಬೇಕು:
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ನಿನ್ನೆ ಹೇಳಿದ್ದಾರೆ. ಹಾಗಾಗಿ, ನಾಳೆ ಸಂಜೆಯವರೆಗೆ ಕಾದು ನೋಡುತ್ತೇವೆ ಎಂದು ಹೇಳಿದರು.
ಭಾನುವಾರ ಸಂಜೆಯೊಳಗೆ ಲಿಖಿತ ಆದೇಶ ನೀಡಿದರೆ ಸರಿ. ಇಲ್ಲದಿದ್ದರೆ ಸೋಮವಾರ ದಾವಣಗೆರೆ ಬಂದ್ ಮಾಡಲಾಗುವುದು. ಆಟೋ ಚಾಲಕರ ಸಂಘ, ವರ್ತಕರ ಸಂಘ, ಹೊಟೇಲ್ ಮಾಲೀಕರ ಸಂಘ, ಖಾಸಗಿ ಬಸ್ ಮಾಲೀಕರ ಸಂಘ, ಚೇಂಬರ್ ಆಫ್ ಕಾಮರ್ಸ್, ಬಟ್ಟೆ ಅಂಗಡಿ, ಕಿರಾಣಿ ಅಂಗಡಿ ಸೇರಿದಂತೆ ಎಲ್ಲಾ ಸಂಘಟನೆಗಳ ಬೆಂಬಲ ಕೋರಲಾಗುವುದು. ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಈ ನಿಟ್ಟಿನಲ್ಲಿ ಬಂದ್ ನಡೆಸಲಾಗುತ್ತಿದೆ. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರು ತಮ್ಮ ಜಿಲ್ಲೆಯ ರೈತರ ಹಿತ ಕಾಪಾಡಲು ಮುಂದಾಗಿದ್ದಾರೆ. ಇದೇ ರೀತಿಯಲ್ಲಿ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಜಿಲ್ಲೆಯ ರೈತರ ಹಿತಕಾಪಾಡಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗದ ಮಲವಗೊಪ್ಪದಲ್ಲಿ ನಡೆದ ಕಾಡಾ ಸಭೆಯಲ್ಲಿ ನೂರು ದಿನಗಳ ಕಾಲ ನೀರು ಹರಿಸುವುದಾಗಿ ತೀರ್ಮಾನಿಸಲಾಗಿತ್ತು. ಆಗಸ್ಟ್ 10ರಿಂದ ಭದ್ರಾ ಬಲದಂಡೆ ನಾಲೆಯಲ್ಲಿ ನೀರು ಹರಿಸಲಾಗುತಿತ್ತು. ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿದ್ದೇ ಅಂತಿಮ. ಇದು ಭದ್ರಾ ಡ್ಯಾಂ (Bhadra Dam)ನಿರ್ಮಾಣ ಆದಾಗಿನಿಂದಲೂ ನಡೆದುಕೊಂಡು ಬಂದಿರುವ ಪದ್ದತಿ. ಆದ್ರೆ, ಆನ್ ಅಂಡ್ ಆಫ್ ಮಾಡುವ ಮೂಲಕ ನೀರು ಸ್ಥಗಿತಗೊಳಿಸಲಾಗಿದೆ. ಇದು ನಮಗೇ ಬೇಡವೇ ಬೇಡ. ನೀರಾವರಿ ಸಲಹಾ ಸಮಿತಿಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ನೀರು ಹರಿಸಬೇಕು. ಇಲ್ಲದಿದ್ದರೆ ಹೋರಾಟ ಉಗ್ರ ಸ್ವರೂಪ ಪಡೆಯುವುದು ಖಚಿತ ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡ ಬೆಳವನಹಳ್ಳಿ ನಾಗೇಶ್ವರ ರಾವ್ ಮಾತನಾಡಿ, ರೈತರ ಸಹನೆ ಕೆಣಕಬೇಡಿ. ರೈತರನ್ನು ಎದುರು ಹಾಕಿಕೊಂಡ, ಕೋಪಕ್ಕೆ ಗುರಿಯಾದ ಯಾವ ಸರ್ಕಾರಗಳೂ ಉಳಿದಿಲ್ಲ, ಉಳಿಯುವುದೂ ಇಲ್ಲ. ರೈತರ ಹಿತ ಕಾಪಾಡಲೇಬೇಕು. ಈಗಾಗಲೇ 40 ದಿನಗಳ ಕಾಲ ನೀರು ಹರಿಸಲಾಗಿದೆ. ಅದೇ ರೀತಿಯಲ್ಲಿ ಇನ್ನು ಉಳಿದ 60 ದಿನಗಳ ಕಾಲ ನೀರನ್ನು ಭದ್ರಾ ಬಲದಂಡೆ ನಾಲೆಯಲ್ಲಿ ಹರಿಸಬೇಕು. ಇಲ್ಲದಿದ್ದರೆ ಹೋರಾಟ ಎದುರಿಸಿ ಎಂದು ಹೇಳಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕೊಳೇನಹಳ್ಳಿ ಸತೀಶ್ ಮಾತನಾಡಿ, ಭದ್ರಾ ನಾಲೆಯಲ್ಲಿ ನೀರು ಹರಿಸಬೇಕು ಎಂದು ಒತ್ತಾಯಿಸಿ ಬೀರಲಿಂಗೇಶ್ವರ ದೇವಸ್ಥಾನದಿಂದ ಶುಕ್ರವಾರ ಟ್ರ್ಯಾಕ್ಟರ್ ಜಾಥಾ ಹಮ್ಮಿಕೊಂಡಿದ್ದೆವು. ಆದ್ರೆ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಜನುಮದಿನಕ್ಕೆ ವಿರೋಧ ವ್ಯಕ್ತಪಡಿಸುವ ಉದ್ದೇಶ ನಮ್ಮದಾಗಿರಲಿಲ್ಲ.
ಪೊಲೀಸರು ಹೋರಾಟ ಹತ್ತಿಕ್ಕುವ ಕೆಲಸ ಮಾಡಿದರು. ತುಘಲಕ್ ಸರ್ಕಾರದಂತೆ ವರ್ತಿಸಿದರು. ಗ್ರಾಮೀಣ ಭಾಗದಿಂದ 500 ಕ್ಕೂ ಹೆಚ್ಚು ಟ್ರ್ಯಾಕ್ಟರ್ ಮೂಲಕ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ರು. ಆದ್ರೆ, ಪೊಲೀಸರು ಅವರಿಗೆ ಚಾಲನಾ ಪರವಾನಗಿ ಪತ್ರ, ಇನ್ಶೂರೆನ್ಸ್, ಟ್ರ್ಯಾಕ್ಟರ್ ದಾಖಲೆ ಕೇಳುವ ನೆಪದಲ್ಲಿ ಬರಲು ಬಿಡಲಿಲ್ಲ. ಒಂದು ವೇಳೆ ಹೋದರೆ ದಾಖಲಾತಿ ಇಲ್ಲದಿದ್ದರೆ ಸೀಜ್ ಮಾಡಲಾಗುವುದು, ದಂಡ ಹಾಕುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದರು.
ಭದ್ರಾ ಡ್ಯಾಂ(Bhadra Dam)ನಿಂದ ನೀರು ಹರಿಸಬೇಕೆಂದು ಒತ್ತಾಯಿಸಿ ಕಳೆದೊಂದು ವಾರದಿಂದ ಭಾರತೀಯ ರೈತ ಒಕ್ಕೂಟ ಪ್ರತಿಭಟನೆ ನಡೆಸುತ್ತಿದೆ. ಭದ್ರಾ ನಾಲೆಯಲ್ಲಿ ನೂರು ದಿನಗಳ ಕಾಲ ನೀರು ಹರಿಸುವುದಾಗಿ ತೀರ್ಮಾನಿಸಿದಾಗ ನೀರಾವರಿ ಸಲಹಾ ಸಮಿತಿ ರಚನೆಯಾಗಿರಲಿಲ್ಲ. ಇತಿಹಾಸದಲ್ಲಿ ಮೊದಲ ಬಾರಿ ಈ ರೀತಿ ಆಗಿದೆ. ಮೊದಲು ನೂರು ದಿನಗಳ ಕಾಲ ಭದ್ರಾ ಬಲದಂಡೆ ನಾಲೆಯಲ್ಲಿ 2650 ಕ್ಯೂಸೆಕ್ ಹರಿಸಲು ತೀರ್ಮಾನಿಸಲಾಗಿತ್ತು. 500 ಕ್ಯೂಸೆಕ್ ಕಡಿಮೆ ಮಾಡಿ 2150 ಕ್ಯೂಸೆಕ್ ನೀರು ಹರಿಸುವುದಾಗಿ ಹೇಳಲಾಗಿತ್ತು. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತನ್ನ ಸಹೋದರಿ ಗೀತಾ ಶಿವರಾಜ್ ಕುಮಾರ್ ಸ್ಪರ್ಧೆ ಮಾಡುವುದರಿಂದ ಪಕ್ಷಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ನೀರು ಸ್ಥಗಿತಗೊಳಿಸಲು ಆದೇಶಿಸಿದ್ದಾರೆ. ಈ ಮೂಲಕ ರಾಜಕೀಯ ಮಾಡಲು ಹೊರಟಿದ್ದಾರೆ. ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಜಿಲ್ಲೆಯ ರೈತರಪರ ನಿಲ್ಲಬೇಕು. ನಾಲೆಯಲ್ಲಿ ನೀರು ಹರಿಸಬೇಕು ಎಂದು ಒತ್ತಾಯಿಸಬೇಕು ಎಂದರು.
ರೈತ ಮುಖಂಡರು, ಹರಿಹರ ಶಾಸಕ ಬಿ. ಪಿ. ಹರೀಶ್, ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ, ಭಾರತೀಯ ರೈತ ಒಕ್ಕೂಟದವರು ಸಚಿವ ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ಎಸ್ ಎಸ್ ಮಲ್ಲಿಕಾರ್ಜುನ್ ಅವರು ಡಿ. ಕೆ. ಶಿವಕುಮಾರ್, ಮಧು ಬಂಗಾರಪ್ಪರ ಜೊತೆ ಫೋನ್ ನಲ್ಲಿ ಮಾತನಾಡಿದ್ದೇನೆ. ನೀರು ಹರಿಯುತ್ತದೆ ಎಂದು ಹೇಳಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭದ್ರಾ ಅಚ್ಚುಕಟ್ಟುದಾರ ಪ್ರದೇಶದಲ್ಲಿ 1 ಲಕ್ಷದ 40 ಸಾವಿರ ಎಕರೆ ಬರುತ್ತದೆ. 4 ಲಕ್ಷ ಮೆಟ್ರಿಕ್ ಟನ್ ಭತ್ತ ಬೆಳೆಯಲಾಗುತ್ತದೆ. 2 ಲಕ್ಷದ 55 ಸಾವಿರ ಮೆಟ್ರಿಕ್ ಟನ್ ಅಕ್ಕಿ ಬರುತ್ತದೆ. ಒಂದು ಕೆಜಿಗೆ 40 ರೂಪಾಯಿ ಅಂತಾದರೂ ಸಾವಿರಾರು ಕೋಟಿ ರೂಪಾಯಿ ನಷ್ಟ ಉಂಟಾಗುತ್ತದೆ. ಇದನ್ನು ಸರ್ಕಾರ ಭರಿಸುವುದು ಅಸಾಧ್ಯ. ಕೊಡುವ ಸ್ವಲ್ಪ ಪ್ರಮಾಣದ ಪರಿಹರಾವೂ ಬೇಡ. ನಮಗೆ ಮೊದಲೇ ಹೇಳಿದಂತೆ ನೂರು ದಿನಗಳ ಕಾಲ ನೀರು ಹರಿಸಲೇಬೇಕು. ಇಲ್ಲದಿದ್ದರೆ ರೈತರ ಬದುಕು ಮೂರಾಬಟ್ಟೆಯಾಗುತ್ತಿದೆ. ಈಗಾಗಲೇ ಭತ್ತ ನಾಟಿ ಮಾಡಿದ್ದು, ಈಗಲೇ ನೀರು ಬೇಕಾಗಿದೆ. ಮಳೆ ಬಾರದಿದ್ದರೆ, ನಾಲೆಯಿಂದ
ನೀರು ಹರಿಸದಿದ್ದರೆ ಹಾಕಿರುವ ಭತ್ತ ಸಂಪೂರ್ಣ ನಾಶವಾಗುತ್ತದೆ. ಈಗಾಗಲೇ ಸುಮಾರು 40 ಸಾವಿರ ರೂಪಾಯಿಯನ್ನು ಎಕರೆಗೆ ಖರ್ಚು ಮಾಡಿರುವ ಭತ್ತ ಬೆಳೆಗಾರರ ಸ್ಥಿತಿಯಂತೂ ಹೇಳತೀರದ್ದಾಗಿದೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಹೆಚ್. ಎನ್. ಗುರುನಾಥ್, ಕುಂದುವಾಡದ ಗಣೇಶಪ್ಪ, ಕಕ್ಕರಗೊಳ್ಳದ ಕಲ್ಲಿಂಗಪ್ಪ, ಬಸಪ್ಪ, ಶಿರಮಗೊಂಡನಹಳ್ಳಿ ಮಂಜುನಾಥ್, ಎ. ಪ್ರಕಾಶ್, ಜಿಮ್ಮಿ ಹನುಮಂತಪ್ಪ, ಕುಂದುವಾಡದ ಪುನೀತ್, ಹರಪನಹಳ್ಳಿ ಉಜ್ಜಣ್ಣ, ಅನೇಕಲ್ಲು ಮಂಜುನಾಥ್, ಕುಂದುವಾಡದ ಚಂದ್ರಪ್ಪ, ಕುಂದುವಾಡದ
ಅಣ್ಣಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.