ದಾವಣಗೆರೆ: ನಮನ ಅಕಾಡೆಮಿ, ದಾವಣಗೆರೆಯ ಭರತನಾಟ್ಯ ವಿದ್ಯಾರ್ಥಿನಿ ಕು. ಸಿಂಚನ. ಎಸ್. ಅವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ (ಭರತನಾಟ್ಯ ವಿಭಾಗ – 15ರಿಂದ 24 ವರ್ಷ ವಯೋಮಾನದ ವರ್ಗ) ಶಿಷ್ಯವೇತನಕ್ಕೆ ಆಯ್ಕೆಯಾಗಿದ್ದಾರೆ.
ನಮನ ಅಕಾಡೆಮಿಯ ನೃತ್ಯಗುರು ವಿದುಷಿ ಮಾಧವಿ ಡಿ. ಕೆ. ಅವರ ಮಾರ್ಗದರ್ಶನದಲ್ಲಿ ಕಳೆದ 11 ವರ್ಷಗಳಿಂದ ಭರತನಾಟ್ಯ ಅಭ್ಯಾಸ ಮಾಡುತ್ತಿರುವ ಸಿಂಚನ ಅವರು, ತಮ್ಮ ಪರಿಶ್ರಮ ಮತ್ತು ಶ್ರದ್ಧೆಯಿಂದ ಈ ಸಾಧನೆ ಮಾಡಿದ್ದಾರೆ. ಇವರು ದಾವಣಗೆರೆಯ ಆರ್. ಎಲ್. ಕಾನೂನು ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಲ್ಎಲ್.ಬಿ. ವ್ಯಾಸಂಗ ಮಾಡುತ್ತಿದ್ದಾರೆ.
ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ಮಂಡಳಿಯ ಪ್ರಾರಂಭಿಕ, ಪ್ರವೇಶಿಕಾ ಪ್ರಥಮ ಹಾಗೂ ಪ್ರವೇಶಿಕಾ ಪೂರ್ಣ ಪರೀಕ್ಷೆಗಳನ್ನು ಪೂರ್ಣಗೊಳಿಸಿರುವ ಇವರು, ಕರ್ನಾಟಕ ರಾಜ್ಯ ಮಂಡಳಿಯ ಭರತನಾಟ್ಯ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಗಳಲ್ಲಿಯೂ ಉತ್ತೀರ್ಣರಾಗಿದ್ದಾರೆ. ಪ್ರಸ್ತುತ ವಿದ್ವತ್ ಪೂರ್ವ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.
ಹಂಪಿ ಉತ್ಸವ, ತಿರುಪತಿ ಬ್ರಹ್ಮೋತ್ಸವ, ಮೈಸೂರು ದಸರಾ ಸೇರಿದಂತೆ ವಿವಿಧ ಪ್ರತಿಷ್ಠಿತ ಉತ್ಸವಗಳಲ್ಲಿ ನೃತ್ಯ ಪ್ರದರ್ಶನ ನೀಡಿರುವ ಸಿಂಚನ ಅವರ ಈ ಸಾಧನೆಗೆ ನೃತ್ಯಗುರು ವಿದುಷಿ ಶ್ರೀಮತಿ ಮಾಧವಿ ಡಿ. ಕೆ., ತಾಯಿ ಶ್ರೀಮತಿ ಭಾರತಿ, ಪೋಷಕ ಅನಿಲ್ ಬಾರಂಗಲ್ ಹಾಗೂ ಸಹೋದರ ಶ್ರೇಯಸ್ ಅವರ ಪ್ರೋತ್ಸಾಹ ಮತ್ತು ಬೆಂಬಲ ಮಹತ್ವದ್ದಾಗಿದೆ.
ಸಿಂಚನ ಅವರ ಸಾಧನೆಗೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ದಕ್ಷಿಣ ಕ್ಷೇತ್ರದ ಶಾಸಕ ಸಮರ್ಥ್ ಶಾಮನೂರು, ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಹಾಗೂ ನಮನ ಅಕಾಡೆಮಿಯ ಉಪಾಧ್ಯಕ್ಷ ದಿನೇಶ್ ಕೆ. ಶೆಟ್ಟಿ, ನಮನ ಅಕಾಡೆಮಿಯ ನಿರ್ದೇಶಕರು, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.





Leave a comment