ನವದೆಹಲಿ: ಪ್ರತಿಪಕ್ಷಗಳ ‘ವೋಟ್ ಚೋರಿ’ ಹಾಗೂ ಚುನಾವಣಾ ಆಯೋಗದ ವಿರುದ್ಧದ ಪ್ರತಿಭಟನೆಗಳ ನಡುವೆಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿರುವುದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ಪಕ್ಷವು ಮುಂದಿನ 30 ವರ್ಷಗಳ ಕಾಲ ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ದೆಹಲಿಯಲ್ಲಿ ₹8,941 ಕೋಟಿ ವೆಚ್ಚದ ಯಮುನಾ ನದಿ ಸ್ವಚ್ಛತಾ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅಮಿತ್ ಶಾ, ರಾಹುಲ್ ಗಾಂಧಿ ಅವರ ವಿಯೆಟ್ನಾಂ ಪ್ರವಾಸವನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ವ್ಯಂಗ್ಯವಾಡಿದರು.
“ನೀವು ವಿದೇಶದಲ್ಲ ಎಲ್ಲೋ ಕುಳಿತಿದ್ದೀರಿ, ನನ್ನ ಮಾತು ನಿಮಗೆ ಕೇಳಿಸುವುದಿಲ್ಲ ಎಂಬುದು ಗೊತ್ತು. ಆದರೆ ನೀವು ದೆಹಲಿಗೆ ವಾಪಸ್ ಬಂದ ಮೇಲೆ ಇದನ್ನು ಕೇಳಿಸಿಕೊಳ್ಳಿ; ಮುಂದಿನ ಮೂವತ್ತು ವರ್ಷಗಳ ಕಾಲ ನಿಮ್ಮ ಸರದಿ ಬರುವುದಿಲ್ಲ,” ಎಂದು ಶಾ ತಿರುಗೇಟು ನೀಡಿದರು.
ಚುನಾವಣಾ ಅಕ್ರಮ ಹಾಗೂ ಎಸ್ಐಆರ್ (SIR) ಕವಾತು ಖಂಡಿಸಿ ಪ್ರತಿಪಕ್ಷ ಇಂಡಿಯಾ (INDIA) ಕೂಟ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ರಾಹುಲ್ ಗಾಂಧಿ ನಾಲ್ಕು ದಿನಗಳ ವಿಯೆಟ್ನಾಂ ಪ್ರವಾಸ ಕೈಗೊಂಡಿದ್ದಾರೆ. ಪ್ರತಿಭಟನೆ ನಡೆಸಿ ಸುಸ್ತಾದ ಮೇಲೆ ರಾಹುಲ್ ಗಾಂಧಿ ರಜೆಗೆ ತೆರಳಿದ್ದಾರೆ ಎಂದು ಬಿಜೆಪಿ ನಾಯಕರು ಲೇವಡಿ ಮಾಡಿದ್ದಾರೆ.
ಇದೇ ವೇಳೆ, ಬೀದಿಗಿಳಿದು ಪ್ರತಿಭಟನೆ ನಡೆಸುವುದರಿಂದ ಏನೂ ಸಿಗುವುದಿಲ್ಲ. ಜನರಿಂದ ಆಯ್ಕೆಯಾದ ಸ್ಥಳಗಳಲ್ಲಿ ಜನರಿಗಾಗಿ ಉತ್ತಮ ಯೋಜನೆಗಳನ್ನು ತಂದು ಕೆಲಸ ಮಾಡಿ ತೋರಿಸಿ ಎಂದು ಪ್ರತಿಪಕ್ಷಗಳಿಗೆ ಸಚಿವ ಅಮಿತ್ ಶಾ ಕಿವಿಮಾತು ಹೇಳಿದರು.





Leave a comment