ಆಟಾವಾ/ಲಾಹೋರ್: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡು ನಕಲಿ ಪಾಸ್ಪೋರ್ಟ್ ಹಾಗೂ ಫೋಟೋಗಳನ್ನು ಸೃಷ್ಟಿಸಿ ಕೆನಡಾದ ಬ್ಯಾಂಕ್ಗಳಿಗೆ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಬೃಹತ್ ಅಂತರರಾಷ್ಟ್ರೀಯ ಜಾಲವನ್ನು ಪಾಕಿಸ್ತಾನದ ಸೈಬರ್ ಕ್ರೈಂ ಏಜೆನ್ಸಿ ಬಯಲಿಗೆಳೆದಿದೆ.
ಈ ಹೈಟೆಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾದಲ್ಲಿರುವ ನಾಲ್ವರು ಭಾರತೀಯರು ಮತ್ತು ಪಾಕಿಸ್ತಾನದ ಮೂವರು ಆರೋಪಿಗಳು ಕೈಜೋಡಿಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಪಾಕಿಸ್ತಾನದ ಲಾಹೋರ್ನಲ್ಲಿ ಕಾರ್ಯಾಚರಣೆ ನಡೆಸಿದ ನ್ಯಾಷನಲ್ ಸೈಬರ್ ಕ್ರೈಮ್ ಇನ್ವೆಸ್ಟಿಗೇಷನ್ ಏಜೆನ್ಸಿ (NCCIA) ಅಧಿಕಾರಿಗಳು ಸುಭಾನ್ ಭಟ್, ಗುಲ್ರೇಜ್ ಭಟ್ ಮತ್ತು ಮೊಹಮ್ಮದ್ ನೋಮನ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಕೆನಡಾದಲ್ಲಿ ನೆಲೆಸಿರುವ ದೀಪ್ ಸಿಂಗ್, ಪರ್ಜೀತ್ ಸಿಂಗ್, ಹರ್ಪ್ರೀತ್ ಸಿಂಗ್ ಹಾಗೂ ಗುರ್ಲೀನ್ ಸಿಂಗ್ ಎಂಬ ನಾಲ್ವರು ಭಾರತೀಯರು ಈ ಜಾಲದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.
ವಂಚನೆಯ ವಿಧಾನ: ನೈಜ ವ್ಯಕ್ತಿಗಳ ಆಧಾರ್, ಹುಟ್ಟಿದ ದಿನಾಂಕ ಹಾಗೂ ಗುರುತಿನ ಸಂಖ್ಯೆಗಳನ್ನು ಸಂಗ್ರಹಿಸಿ, AI ಮೂಲಕ ನಕಲಿ ಪಾಸ್ಪೋರ್ಟ್ ಮತ್ತು ಫೋಟೋಗಳನ್ನು ಸೃಷ್ಟಿಸಲಾಗುತ್ತಿತ್ತು.
ಕಾರ್ಯಾಚರಣೆ ತಂತ್ರ: ಪಾಕಿಸ್ತಾನದಲ್ಲಿದ್ದ ಆರೋಪಿಗಳು ಆನ್ಲೈನ್ ಮೂಲಕ ಕೆನಡಾ ಬ್ಯಾಂಕ್ಗಳಲ್ಲಿ ಖಾತೆ ತೆರೆಯುತ್ತಿದ್ದರು. ಕೆನಡಾದಲ್ಲಿದ್ದ ಭಾರತೀಯ ಆರೋಪಿಗಳು ಆ ಖಾತೆಗಳ ಕ್ರೆಡಿಟ್ ಕಾರ್ಡ್ಗಳನ್ನು ಪಡೆದು, ಕ್ರೆಡಿಟ್ ಲಿಮಿಟ್ ಮುಗಿಯುವವರೆಗೆ ಹಣ ಬಳಸಿ ನಂತರ ಕಾರ್ಡ್ ಎಸೆದು ತಲೆಮರೆಸಿಕೊಳ್ಳುತ್ತಿದ್ದರು.
ಬಯಲಾದ ಜಾಲ: ಅಕ್ಟೋಬರ್ 19 ರಂದು ಲಾಹೋರ್ನಲ್ಲಿ ಸುದ್ಧಿಗೋಷ್ಠಿ ನಡೆಸಿದ ಎನ್ಸಿಸಿಐಎ ಹೆಚ್ಚುವರಿ ನಿರ್ದೇಶಕ ಅತಿಫ್ ಅಮೀರ್, ಈ ಡಿಜಿಟಲ್ ಸಿಂಥೆಟಿಕ್ ಐಡೆಂಟಿಟಿ ಫ್ರಾಡ್ ಜಾಲವನ್ನು ಬಹಿರಂಗಪಡಿಸಿದ್ದಾರೆ.
ಈ ಪ್ರಕರಣವು ಬ್ಯಾಂಕಿಂಗ್ ಕ್ಷೇತ್ರದ ಡಿಜಿಟಲ್ ಭದ್ರತೆ ಮತ್ತು ಎಐ ಆಧಾರಿತ ಗುರುತಿನ ಪರಿಶೀಲನಾ ವ್ಯವಸ್ಥೆಗೆ ಹೊಸ ಸವಾಲಾಗಿ ಪರಿಣಮಿಸಿದೆ.





Leave a comment