ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತೀವ್ರ ವಾಗ್ದಾಳಿ ನಡೆಸಿದ್ದು, ಇದು ಬೃಹತ್ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಆರ್‌ಎಸ್‌ಎಸ್ ಅನ್ನು “ಸಂವಿಧಾನ ವಿರೋಧಿ ಪುರುಷ ಪ್ರಧಾನ ಪಂಥ” ಎಂದು ಕರೆದಿರುವ ರಾಹುಲ್ ಗಾಂಧಿ, ಸಂಘಟನೆಯು ಮಹಿಳೆಯರನ್ನು ಪುರುಷರ ಆಸ್ತಿಯಂತೆ ಕಾಣುತ್ತದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಆರ್‌ಎಸ್‌ಎಸ್ ಎನ್ನುವುದು ಮಹಿಳೆಯರನ್ನು ಪುರುಷರ ಆಸ್ತಿ ಎಂದು ನಂಬುವ ಸಂವಿಧಾನ ವಿರೋಧಿ ಪುರುಷ ಪ್ರಧಾನ ಪಂಥವಾಗಿದೆ. ನಾನು ಶಿವ-ಶಕ್ತಿಯಲ್ಲಿ ನಂಬಿಕೆ ಹೊಂದಿದ್ದು, ಅವರ ವಿರುದ್ಧ ಹೋರಾಡುವುದು ನನಗೆ ಸಂತೋಷ ನೀಡುತ್ತದೆ. ವಿಶೇಷವೆಂದರೆ ಆರ್‌ಎಸ್‌ಎಸ್‌ನ ಹಲವು ಮಹಿಳೆಯರೂ ನನ್ನ ಪರವಾಗಿದ್ದಾರೆ” ಎಂದು ಪ್ರತಿಪಾದಿಸಿದ್ದಾರೆ.
ಆರ್‌ಎಸ್‌ಎಸ್ ಮಹಿಳಾ ಘಟಕ: ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿರುವ ಮಹಾರಾಷ್ಟ್ರ ಬಿಜೆಪಿ ಶಾಸಕ ರಾಮ್ ಕದಮ್, ಆರ್‌ಎಸ್‌ಎಸ್‌ಗೆ ರಾಷ್ಟ್ರವ್ಯಾಪಿ ಸಕ್ರಿಯ ಮಹಿಳಾ ಘಟಕವಿದೆ ಎಂಬ ಕನಿಷ್ಠ ಜ್ಞಾನವೂ ವಿಪಕ್ಷ ನಾಯಕರಿಗಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್‌ನಲ್ಲೇ ಮಹಿಳೆಯರಿಗೆ ಆದ್ಯತೆ ಇಲ್ಲ: ತೆಲಂಗಾಣ ಬಿಜೆಪಿ ಅಧ್ಯಕ್ಷ ಎನ್. ರಾಮಚಂದರ್ ರಾವ್ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲೇ ಮಹಿಳೆಯರಿಗೆ ಎಷ್ಟು ಪ್ರಮುಖ ಹುದ್ದೆ ನೀಡಲಾಗಿದೆ ಮತ್ತು ಎಷ್ಟು ಜನ ಮಹಿಳಾ ಮುಖ್ಯಮಂತ್ರಿಗಳಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಮಹಿಳಾ ಮೀಸಲಾತಿ ಹಾಗೂ ಲೈಂಗಿಕ ಕಿರುಕುಳ ಆರೋಪ: 33% ಮಹಿಳಾ ಮೀಸಲಾತಿ ಜಾರಿಗೆ ಬೆಂಬಲ ನೀಡದ ಕಾಂಗ್ರೆಸ್, ಜೆಎನ್‌ಯುನಲ್ಲಿ ಲೈಂಗಿಕ ಕಿರುಕುಳ ಆರೋಪದ ಮೇಲೆ ವಜಾಗೊಂಡ ತನ್ನದೇ ಎಂಪಿ ವಿರುದ್ಧ ಏನು ಕ್ರಮ ಕೈಗೊಂಡಿದೆ ಎಂದು ಬಿಜೆಪಿ ನಾಯಕರು ತಾರಾಟಕ್ಕೆ ತೆಗೆದುಕೊಂಡಿದ್ದಾರೆ.
ಈ ಹಿಂದೆ ಪುಣೆಯಲ್ಲಿ ನಡೆದ ಯುವ ಸಮಾವೇಶದಲ್ಲೂ ರಾಹುಲ್ ಗಾಂಧಿ ಮನುಸ್ಮೃತಿ ಹಾಗೂ ಪಿತೃಪ್ರಧಾನ ವ್ಯವಸ್ಥೆಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದರೆ, ರಾಹುಲ್ ಅವರ ಹೇಳಿಕೆಗಳನ್ನು ಬಾಲಿಶ ಹಾಗೂ ರಾಜಕೀಯ ಗಿಮಿಕ್ ಎಂದು ಬಿಜೆಪಿ ತಳ್ಳಿಹಾಕಿದೆ.





Leave a comment