ಮೀರತ್: ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದ್ದ ಅತ್ಯಂತ ಬೆಚ್ಚಿಬೀಳಿಸುವ ಹಾಗೂ ಅಪರೂಪದ ಕೊಲೆ ಪ್ರಕರಣವೊಂದರಲ್ಲಿ ನ್ಯಾಯಾಲಯವು ಮಹತ್ವದ ತೀರ್ಪು ಪ್ರಕಟಿಸಿದೆ.ತನ್ನ ಪತಿಯನ್ನು ಪ್ರೇಮಿಯೊಂದಿಗೆ ಸೇರಿ ಹತ್ಯೆಗೈದು, ಆ ಸಾವನ್ನು ಹಾವಿನ ಕಡಿತದಿಂದ ಸಂಭವಿಸಿದ ಸಾವು ಎಂದು ಬಿಂಬಿಸಲು ಯತ್ನಿಸಿದ್ದ ಪತ್ನಿ ಹಾಗೂ ಆಕೆಯ ಪ್ರೇಮಿಗೆ ಮೀರತ್ ನ್ಯಾಯಾಲಯವು ಮರಣದಂಡನೆ ವಿಧಿಸಿ ಆದೇಶಿಸಿದೆ.
ಈ ಪ್ರಕರಣವನ್ನು ನ್ಯಾಯಾಲಯವು ‘ಅಪರೂಪದಲ್ಲೇ ಅತ್ಯಂತ ಅಪರೂಪದ ಪ್ರಕರಣ’ಎಂದು ಬಣ್ಣಿಸಿದೆ.
ಮೃತ ಅಮಿತ್ ಕಶ್ಯಪ್ ಪತ್ನಿ ರವಿತಾ ಹಾಗೂ ಆಕೆಯ ನೆರೆಹರೆಯದ ಹಾಗೂ ಸ್ನೇಹಿತನಾಗಿರುವ ಅಮರ್ದೀಪ್ ನಡುವೆ ಅಕ್ರಮ ಸಂಬಂಧವಿತ್ತು. ಈ ಅನೈತಿಕ ಸಂಬಂಧಕ್ಕೆ ಪತಿ ಅಮಿತ್ ಅಡ್ಡಿಯಾಗಿದ್ದರಿಂದ ಇಬ್ಬರೂ ಸೇರಿ ಆತನನ್ನು ಅಮುಕಿ ಕೊಲೆ ಮಾಡಲು ಸಂಚು ರೂಪಿಸಿದ್ದರು. ಕೊಲೆ ಮಾಡಿದ ಬಳಿಕ ಪೊಲೀಸರನ್ನು ಹಾಗೂ ಕುಟುಂಬಸ್ಥರನ್ನು ದಾರಿ ತಪ್ಪಿಸಲು ಹಾವೊಂದನ್ನು ತಂದು ಮೃತದೇಹದ ಬಳಿ ಇರಿಸಿದ್ದರು. ತನಿಖೆ ವೇಳೆ ಆ ಹಾವಿನ ವಿಷದ ಚೀಲವನ್ನು (Venom Sac) ಮುಂಚಿತವಾಗಿ ತೆಗೆಯಲಾಗಿತ್ತು ಎಂಬ ಆಘಾತಕಾರಿ ಅಂಶ ಹೊರಬಂದಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜೈವೀರ್ ಸಿಂಗ್ ನಗರ್ ಅವರು ಅಕ್ಟೋಬರ್ 7 ರಂದೇ ರವಿತಾ ಮತ್ತು ಅಮರ್ದೀಪ್ ಅನ್ನು ದೋಷಿಗಳೆಂದು ತೀರ್ಪು ನೀಡಿದ್ದರು. ತನಿಖಾಧಿಕಾರಿಗಳು 500ಕ್ಕೂ ಅಧಿಕ ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದು, ಹತ್ತಕ್ಕೂ ಹೆಚ್ಚು ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು.





Leave a comment