SUDDIKSHANA KANNADA NEWS/ DAVANAGERE/ DATE:22-09-2023
ದಾವಣಗೆರೆ: ದಾವಣಗೆರೆ Davanagere) ಜಿಲ್ಲೆಯಲ್ಲಿ ಜನಸಂಖ್ಯೆ ಸುಮಾರು 19 ಲಕ್ಷದಷ್ಟಿದ್ದು ಜಾನುವಾರುಗಳ ಸಂಖ್ಯೆ ಹಸು, ಎಮ್ಮೆ, ಕುರಿ, ಮೇಕೆ ಸೇರಿದಂತೆ ಸುಮಾರು 7 ಲಕ್ಷದಷ್ಟಿದೆ. ಜಾನುವಾರುಗಳ ಸಂಖ್ಯೆ ಹೆಚ್ಚಾದಷ್ಟು ನಮ್ಮ ಮಣ್ಣಿನ ಫಲವತ್ತತೆ ಹೆಚ್ಚಿ ಗುಣಮಟ್ಟ ಹೆಚ್ಚಿ ಜನರ ಆರೋಗ್ಯವು ಉತ್ತಮವಾಗಿರುತ್ತದೆ. ಆದ್ದರಿಂದ ಜನಸಂಖ್ಯೆ ಎಷ್ಟಿರುತ್ತದೆ, ಅದಕ್ಕಿಂತಲೂ ಹೆಚ್ಚು ಜಾನುವಾರುಗಳಿದ್ದಲ್ಲಿ ಉತ್ತಮ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ತಿಳಿಸಿದರು.
ಈ ಸುದ್ದಿಯನ್ನೂ ಓದಿ:
ಭದ್ರಾಡ್ಯಾಂ (Bhadra Dam) ನೀರು ಹರಿಸುವಿಕೆಗೆ ಆಗ್ರಹಿಸಿ ಹೆದ್ದಾರಿ ತಡೆ ವೇಳೆ ಸಂಧಾನ, ಸಂಜೆ ಸಭೆಯಲ್ಲಿ ರೈತ ಮುಖಂಡರ ಅಸಮಾಧಾನ… ಡಿಸಿ, ಎಸ್ಪಿ ಯತ್ನ ವಿಫಲ.. ಬೆಣ್ಣೆನಗರಿಯಲ್ಲಿ ಮತ್ತೆ ಶುರುವಾಗಲಿದೆ ಹೋರಾಟ…!
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಾನುವಾರುಗಳಿಗೆ ಲಸಿಕಾ ಅಭಿಯಾನದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾನುವಾರು ಸಾಕಾಣಿಕೆ ಹೆಚ್ಚಾದಂತೆ ಜನರ ಆದಾಯ ಮಟ್ಟವು ಹೆಚ್ಚಲಿದೆ. ಜಾನುವಾರು ಸಾಕಾಣಿಕೆಯಿಂದ ಜನರ ಆದಾಯದಲ್ಲಿ ಖಾತರಿ ಇರುತ್ತದೆ. ಈ ನಿಟ್ಟಿನಲ್ಲಿ ಜನರು ಕುರಿ, ಮೇಕೆ ಸಾಕಾಣಿಕೆ, ಹಸು, ಎಮ್ಮೆ ಸಾಕಾಣಿಕೆ ಸೇರಿದಂತೆ ಹೈನುಗಾರಿಕೆಯಲ್ಲಿ ಹೆಚ್ಚು ತೊಡಗಿಸುವುದರಿಂದ ಅವರ ಆದಾಯ ಮಟ್ಟವನ್ನು ಹೆಚ್ಚಿಸಿ
ಜಿಲ್ಲೆಯ ಆರ್ಥಿಕಾಭಿವೃದ್ದಿಗೆ ಕೈಜೋಡಿಸಿದಂತಾಗುತ್ತದೆ ಎಂದು ತಿಳಿಸಿದರು.
ಗೊಬ್ಬರ ತಯಾರಿಕೆಗೆ ಮುಂದಾಗಿ:
ಜಾನುವಾರುಗಳ ಗಂಜಲು ಮತ್ತು ಸಗಣಿಯಿಂದ ಯೂರಿಯಾ ರೀತಿ ಗೊಬ್ಬರವನ್ನು ತಯಾರು ಮಾಡಿ ರೈತರಿಗೆ ನೀಡುವ ನಿಟ್ಟಿನಲ್ಲಿ ಸಂಶೋಧನೆ ಮಾಡಬೇಕು, ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಯೂರಿಯಾ ರೀತಿ ಉತ್ಪಾದನೆ ಮಾಡಿ ರೈತರು ಸುಲಭವಾಗಿ ಜಮೀನುಗಳಲ್ಲಿ ಹಾಕುವಂತಹ ಪದ್ದತಿಯಲ್ಲಿ ಉತ್ಪಾದನೆ ಮಾಡಿದಲ್ಲಿ ಹೆಚ್ಚು ಜನಪ್ರಿಯವಾಗಲಿದೆ ಎಂದು ತಿಳಿಸಿದರು.
ಕಾಲುಬಾಯಿ ರೋಗದ ವಿರುದ್ದ ಲಸಿಕೆ ಅಭಿಯಾನ:
ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 4 ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮವನ್ನು ಸೆಪ್ಟೆಂಬರ್ 26 ರಿಂದ ಬರುವ ಅಕ್ಟೋಬರ್ 25 ರವರೆಗೆ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದ್ದು ಯಾವುದೇ ಜಾನುವಾರು ಲಸಿಕೆಯಿಂದ ಬಿಟ್ಟು ಹೋಗದಂತೆ ಕ್ರಮ ವಹಿಸಬೇಕೆಂದು ಸೂಚಿಸಿದರು.
2019 ರ ಜಾನುವಾರು ಗಣತಿಯನ್ವಯ ಜಿಲ್ಲೆಯಲ್ಲಿ 3,29,700 ಜಾನುವಾರುಗಳಿವೆ. ಜಾನುವಾರುಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಲಸಿಕೆ ಬಹಳ ಪ್ರಮುಖವಾಗಿರುತ್ತದೆ. ಕಾಲಮಿತಿಯಲ್ಲಿ ಎಲ್ಲಾ ಜಾನುವಾರುಗಳಿಗೆ ಲಸಿಕೆ ಲಭ್ಯವಾಗುವುದರಿಂದ ಜಾನುವಾರುಗಳಿಗೆ ಹರಡುವ ರೋಗಗಳು ನಿಯಂತ್ರಣದಲ್ಲಿರುತ್ತವೆ. ನೊಂದಾಯಿತ ಮತ್ತು ನೊಂದಾಯಿತವಲ್ಲದ ಎಲ್ಲಾ ಜಾನುವಾರುಗಳಿಗೂ ಲಸಿಕೆಯನ್ನು ಹಾಕಬೇಕು, ಅನಧಿಕೃತವಾಗಿ ಸಾಗಿಸುವ ಜಾನುವಾರುಗಳನ್ನು ವಶಪಡಿಸಿಕೊಂಡಾಗ ಅಂತಹ ರಾಸುಗಳಿಗೂ ಲಸಿಕೆ ಸಿಗುವಂತೆ ಮಾಡಬೇಕು ಮತ್ತು ಲಸಿಕೆ ಹಾಕುವಾಗ ಎಲ್ಲಾ ರೈತರಿಗೆ ವಿಶ್ವಾಸ ಮೂಡಿಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಕಾಲುಬಾಯಿ ರೋಗದ ಕುರಿತಂತೆ ಮಾಹಿತಿಯುಳ್ಳ ಪೋಸ್ಟರ್ ಮತ್ತು ಕರಪತ್ತವನ್ನು ಬಿಡುಗಡೆ ಮಾಡಲಾಯಿತು. ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಚಂದ್ರಶೇಖರ್ ಸುಂಕದ್ ಹಾಗೂ ವಿವಿಧ ತಾಲ್ಲೂಕುಗಳ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕರು ಸಭೆಯಲ್ಲಿ ಉಪಸ್ಥಿತರಿದ್ದರು.