ನವದೆಹಲಿ: ದೆಹಲಿಯಲ್ಲಿ ಯುವ ಕಾಂಗ್ರೆಸ್, ಎನ್ಎಸ್ಯುಐ ಹಾಗೂ ಸೇವಾದಳದ ಕಾರ್ಯಕರ್ತರೊಂದಿಗೆ ನಡೆದ ಚಹಾ ಕೂಟ ಮತ್ತು ಸಂವಾದದ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಸದ ರಾಹುಲ್ ಗಾಂಧಿ ನಡುವೆ ಆಸಕ್ತಿಕರ ಮತ್ತು ಚುರುಕಾದ ಮಾತುಕತೆ ನಡೆದಿದೆ. ಕಾಂಗ್ರೆಸ್ ತೊರೆದ ನಾಯಕರ ಕುರಿತು ರಾಹುಲ್ ಗಾಂಧಿ ಆಡಿದ ಮಾತುಗಳಿಗೆ ಖರ್ಗೆ ಅವರು ತಕ್ಷಣವೇ ನೀಡಿದ ಹಾಸ್ಯಭರಿತ ಪ್ರತಿಕ್ರಿಯೆ ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸಂವಾದದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕೇಂದ್ರ ತನಿಖಾ ಸಂಸ್ಥೆಗಳಾದ ಇಡಿ ಮತ್ತು ಸಿಬಿಐ ಭಯದಿಂದ ಅಥವಾ ಅಧಿಕಾರ ಮತ್ತು ಸೌಲಭ್ಯಗಳ ಆಸೆಗೆ ಬಿದ್ದು ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಗುಲಾಂ ನಬಿ ಆಜಾದ್ ಅವರಂತಹ ನಾಯಕರು ಕಾಂಗ್ರೆಸ್ ತೊರೆದಿದ್ದಾರೆ ಎಂದು ದೂರಿದರು. ಸ್ವಾರ್ಥಿಗಳು ಮತ್ತು ಕಾವರರು ಪಕ್ಷದಿಂದ ಹೊರಬಂದ ಮೇಲೆ ಈಗ ಕಾಂಗ್ರೆಸ್ನಲ್ಲಿ ಕೇವಲ ಸಿದ್ಧಾಂತಕ್ಕೆ ಬದ್ಧರಾಗಿರುವ ‘ಸಿಂಹಗಳು’ ಮಾತ್ರ ಉಳಿದುಕೊಂಡಿವೆ ಎಂದು ರಾಹುಲ್ ಬಣ್ಣಿಸಿದರು.
ಖರ್ಗೆ ತಮಾಷೆಯ ಜಟಾಪಟಿ: ರಾಹುಲ್ ಹೇಳಿಕೆಗೆ ತಕ್ಷಣವೇ ಅಡ್ಡಬಂದ ಮಲ್ಲಿಕಾರ್ಜುನ ಖರ್ಗೆ, “ಅವರೆಲ್ಲರೂ ನಿಮ್ಮ ಆಪ್ತ ಸ್ನೇಹಿತರಾಗಿದ್ದವರೇ ಅಲ್ಲವೇ?” ಎಂದು ಹಗುರವಾದ ಧ್ವನಿಯಲ್ಲಿ ಕಾಲೆಳೆದರು.
ಪ್ರಿಯಾಂಕಾ ಹೆಸರೆತ್ತಿ ರಾಹುಲ್ ಸಮರ್ಥನೆ: ಖರ್ಗೆ ಅವರ ಈ ಮಾತು ಕೇಳಿ ತುಸು ಮುಜುಗರಕ್ಕೊಳಗಾದ ರಾಹುಲ್, “ಇಲ್ಲಿಯೇ ಕುಳಿತಿರುವ ನನ್ನ ಸಹೋದರಿ ಪ್ರಿಯಾಂಕಾಗೆ ಗೊತ್ತು, ಸಿಂಧಿಯಾ ಎಂದಿಗೂ ನನ್ನ ಸ್ನೇಹಿತನಾಗಿರಲಿಲ್ಲ” ಎಂದು ಸ್ಪಷ್ಟನೆ ನೀಡಿದರು.
ಇಂದಿರಾ ಗಾಂಧಿ ರಾಜಕೀಯ ಪಾಠ: ತಮ್ಮ ಅಜ್ಜಿ ಇಂದಿರಾ ಗಾಂಧಿ ನೀಡಿದ್ದ ಪಾಠವನ್ನು ಸ್ಮರಿಸಿದ ರಾಹುಲ್, ರಾಜಕೀಯದಲ್ಲಿ ಮೇಲ್ನೋಟಕ್ಕೆ ಸ್ನೇಹಿತರಂತೆ ಕಾಣುವವರು ನಿಜವಾದ ಸ್ನೇಹಿತರಾಗಿರುವುದಿಲ್ಲ ಮತ್ತು ಶತ್ರುಗಳಂತೆ ಕಾಣುವವರು ಶತ್ರುಗಳಾಗಿರುವುದಿಲ್ಲ ಎಂದು ರಾಜಕೀಯ ಸಂಬಂಧಗಳ ಸಂಕೀರ್ಣತೆಯನ್ನು ವಿವರಿಸಿದರು.
ಖರ್ಗೆ ನಿಷ್ಠೆಗೆ ಪ್ರಶಂಸೆ: ಎರಡು ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಕೈತಪ್ಪಿದರೂ ಯಾವುದೇ ಆಮಿಷಕ್ಕೆ ಒಳಗಾಗದೆ ಕಾಂಗ್ರೆಸ್ ಸಿದ್ಧಾಂತಕ್ಕೆ ನಿಷ್ಠರಾಗಿ ಉಳಿದ ಮಲ್ಲಿಕಾರ್ಜುನ ಖರ್ಗೆ ಅವರ ರಾಜಕೀಯ ಬದ್ಧತೆಯನ್ನು ರಾಹುಲ್ ಗಾಂಧಿ ಮುಕ್ತಕಂಠದಿಂದ ಶ್ಲಾಘಿಸಿದರು.
ಯುವ ಕಾರ್ಯಕರ್ತರು ನಿರಂತರವಾಗಿ ಬೀದಿಗಿಳಿದು ಹೋರಾಟ ನಡೆಸುವುದು ಅವರ ರಾಜಕೀಯ ತರಬೇತಿಯ ಪ್ರಮುಖ ಭಾಗವಾಗಿದೆ ಎಂದ ರಾಹುಲ್ ಗಾಂಧಿ, ನೂತನ ಮತ್ತು ಸೃಜನಶೀಲ ಮಾದರಿಯಲ್ಲಿ ಪ್ರತಿಭಟನೆಗಳನ್ನು ರೂಪಿಸುವಂತೆ ಯುವಜನತೆಗೆ ಕರೆ ನೀಡಿದರು.





Leave a comment