SUDDIKSHANA KANNADA NEWS/ DAVANAGERE/ DATE-13-05-2025
ದಾವಣಗೆರೆ: ವಾಹನ ತಪಾಸಣೆ ವೇಳೆ ಲಾರಿ ಚಾಲಕನು ಡಿಎಆರ್ ಕಾನ್ಸ್ ಸ್ಟೇಬಲ್ ಮೇಲೆ ಹರಿಸಿದ್ದು, ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಪೊಲೀಸ್ ಸಿಬ್ಬಂದಿ ಮೃತಪಟ್ಟ ಘಟನೆ ದಾವಣಗೆರೆ ತಾಲೂಕಿನ ಹೆಬ್ಬಾಳ್ ಟೋಲ್ ಗೇಟ್ ಬಳಿ ನಡೆದಿದೆ. ಲಾರಿ ಚಾಲಕನನ್ನು ಪೊಲೀಸರು ಹಿಂಬಾಲಿಸಿಕೊಂಡು ಹೋಗಿ ಲಾರಿ ತಡೆದು ಬಂಧಿಸಿದ್ದಾರೆ.
ರಮೇಶ್ ಪೂಜಾರ್ ಸಾವು ಕಂಡ ಡಿಎಆರ್ ಕಾನ್ಸ್ ಸ್ಟೇಬಲ್. ಟ್ರಾಫಿಕ್ ಪೊಲೀಸ್ ಜೊತೆಗೆ ರಮೇಶ್ ಪೂಜಾರ್ ಇದ್ದರು. ಈ ವೇಳೆ ಟೋಲ್ ಬಳಿ ಲಾರಿ ನಿಲ್ಲಿಸುವಂತೆ ಸೂಚನೆ ನೀಡಿದ್ದರೂ ಕ್ಯಾರೇ ಎನ್ನದ ಲಾರಿ ಚಾಲಕನು ಮೈಮೇಲೆ ಹತ್ತಿಸಿದ್ದಾನೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡ ರಮೇಶ್ ಪೂಜಾರ್ ಅವರು ರಕ್ತಸಿಕ್ತವಾಗಿದ್ದರು. ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾದರೂ ಕೊನೆ ಉಸಿರು ಚೆಲ್ಲಿದರು.

ಬಳಿಕ ಟ್ರಾಫಿಕ್ ಪೊಲೀಸರು ಸುಮಾರು ಅರ್ಧ ಕಿಲೋಮೀಟರ್ ಗೂ ಹೆಚ್ಚು ದೂರ ಹಿಂಬಾಲಿಸಿಕೊಂಡು ಹೋಗಿ ಲಾರಿ ಅಡ್ಡ ಹಾಕಿ, ಲಾರಿ ಚಾಲಕನನ್ನು ಬಂಧಿಸಿದ್ದಾರೆ. ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ಚೆನ್ನೈ ಟು ಗೋವಾ ಎಕ್ಸ್ ಪ್ರೆಸ್ ಎಂಬ ಫಲಕವಿದ್ದ ಲಾರಿ ಇದಾಗಿದ್ದು, ಇದರಲ್ಲಿ ಶತ್ರುಗಳ ಆಶೀರ್ವಾದ ಎಂಬ ಬೋರ್ಡ್ ಇದೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನೆ ಸಂಬಂಧ ಪೊಲೀಸರು ಚಾಲಕನ ವಿಚಾರಣೆ ಮುಂದುವರಿಸಿದ್ದು, ಅಜಾಗರೂಕತೆಯಿಂದ ಆಗಿರುವ ಸಾಧ್ಯತೆ ಕಡಿಮೆ. ಅಡ್ಡ ಹಾಕಿದ್ದರಿಂದ ಸಿಟ್ಟಿಗೆದ್ದು ಲಾರಿ ಚಾಲಕನು ಡಿಎಆರ್ ಕಾನ್ಸ್ ಸ್ಟೇಬಲ್ ಮೇಲೆ ಹರಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.