ದಾವಣಗೆರೆ: ದಾವಣಗೆರೆ ಜಿಲ್ಲಾದ್ಯಂತ ಆಯುಧ ಪೂಜೆ, ವಿಜಯದಶಮಿ ಹಬ್ಬದ ಸಾರ್ವಜನಿಕ ಆಚರಣೆ ಹಾಗೂ ಮುಂಬರುವ ಕರ್ನಾಟಕ ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆ-2026ರ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಅಕ್ಟೋಬರ್ 21 ರಂದು ಹಾಗೂ ಚುನಾವಣೆ ಸಂದರ್ಭದಲ್ಲಿ ಮದ್ಯ ಮಾರಾಟ, ಸರಬರಾಜು ಮತ್ತು ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ದಿನದಂದು ಅಂದರೆ ಅಕ್ಟೋಬರ್ 21 ರ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಕರ್ನಾಟಕ ಅಬಕಾರಿ ಕಾಯ್ದೆ-1965ರ ಕಲಂ 21(1)ರಡಿ ಜಿಲ್ಲಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. (ಹರಿಹರ ನಗರ ವ್ಯಾಪ್ತಿಯ ಕೆ.ಎಸ್.ಬಿ.ಸಿ.ಎಲ್ ಡಿಪೋ ಹೊರತುಪಡಿಸಿ).
ಇದರೊಂದಿಗೆ, ಕರ್ನಾಟಕ ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆ-2026ರ ಸಂಬಂಧ ದಾವಣಗೆರೆ ಮಹಾನಗರ ಪಾಲಿಕೆ, ದಾವಣಗೆರೆ ತಾಲೂಕು, ಹರಿಹರ ತಾಲೂಕು (ಕೆ.ಎಸ್.ಆರ್.ಪಿ.ಎಲ್ ಪ್ರದೇಶ ಹೊರತುಪಡಿಸಿ) ಮತ್ತು ಜಗಳೂರು ತಾಲೂಕು ವ್ಯಾಪ್ತಿಯಲ್ಲಿ ಅಕ್ಟೋಬರ್ 21 ರ ಸಂಜೆ 6 ಗಂಟೆಯಿಂದ ಅಕ್ಟೋಬರ್ 23 ರ ಸಂಜೆ 7 ಗಂಟೆಯವರೆಗೆ ಮದ್ಯ ಮಾರಾಟ ಮತ್ತು ಸಾಗಾಣಿಕೆಯನ್ನು ನಿಷೇಧಿಸಲಾಗಿದೆ. ಮುಕ್ತ ಹಾಗೂ ನ್ಯಾಯಸಮ್ಮತ ಮತದಾನಕ್ಕಾಗಿ ಮತದಾನ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಕೂಡ ಜಾರಿಗೊಳಿಸಲಾಗಿದೆ.
ಹಬ್ಬದ ನಿಷೇಧಾಜ್ಞೆ: ಅಕ್ಟೋಬರ್ 21 ರ ಬೆಳಿಗ್ಗೆ 6.00 ರಿಂದ ರಾತ್ರಿ 12.00 ಗಂಟೆಯವರೆಗೆ ಮದ್ಯ ಮಾರಾಟ ಬಂದ್ (ಹರಿಹರ ಕೆ.ಎಸ್.ಬಿ.ಸಿ.ಎಲ್ ಡಿಪೋಗೆ ವಿನಾಯಿತಿ).
ಚುನಾವಣಾ ನಿಷೇಧ ಅವಧಿ: ಅಕ್ಟೋಬರ್ 21 ರ ಸಂಜೆ 6 ರಿಂದ ಅಕ್ಟೋಬರ್ 23 ರ ಸಂಜೆ 7 ರವರೆಗೆ ದಾವಣಗೆರೆ, ಹರಿಹರ ಹಾಗೂ ಜಗಳೂರು ತಾಲೂಕುಗಳಲ್ಲಿ ಲಿಕ್ಕರ್ ಬ್ಯಾನ್.
200 ಮೀಟರ್ ಸುತ್ತಳತೆ ನಿರ್ಬಂಧ: ಮತದಾನ ಕೇಂದ್ರಗಳ ಸುತ್ತಮುತ್ತ ಅಕ್ಟೋಬರ್ 21 ರ ಬೆಳಿಗ್ಗೆ 6ರಿಂದ ಮತದಾನ ಮುಕ್ತಾಯಗೊಳ್ಳುವವರೆಗೆ 200 ಮೀಟರ್ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ನಿಷೇಧಾಜ್ಞೆ.
ಅಧಿಕಾರಿಗಳ ಜವಾಬ್ದಾರಿ: ಅಬಕಾರಿ, ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಈ ಆದೇಶವನ್ನು ಯಾವುದೇಚ್ಯುತಿ ಬಾರದಂತೆ ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ.
ಸಾರ್ವಜನಿಕ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸಾರ್ವಜನಿಕರು ಹಾಗೂ ಪರವಾನಿದಾರರು ಜಿಲ್ಲಾಡಳಿತದ ಈ ಆದೇಶಕ್ಕೆ ಸಂಪೂರ್ಣ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.





Leave a comment