SUDDIKSHANA KANNADA NEWS/ DAVANAGERE/ DATE-12-05-2025
ಪಾಕಿಸ್ತಾನದವರು ಗುಂಡು ಹಾರಿಸಿದರೆ ನಾವು ಫಿರಂಗಿ ಹಾರಿಸುತ್ತೇವೆ. ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟ ನಿರ್ಣಾಯಕ ಹಂತಕ್ಕೆ ಬಂದಿದೆ. ಯಾವುದೇ ಕಾರಣಕ್ಕೂ ಆಪರೇಷನ್ ಸಿಂದೂರ್ ನಿಲ್ಲುವುದಿಲ್ಲ. ಉಗ್ರರ ಮಟ್ಟಹಾಕುವ ಸಂಕಲ್ಪ ಮಾಡಿದ್ದು, ಯಶಸ್ವಿಯಾಗುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಶತ್ರುರಾಷ್ಟ್ರ ಪಾಕಿಸ್ತಾನಕ್ಕೆ ನೇರಾನೇರ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ವಾಹನ್ ಸೆ ಗೋಲಿ, ಯಹಾನ್ ಸೆ ಗೋಲಾ. ಇದು ನಮ್ಮ ನಿಲುವು. ಪಾಕ್ ಕುತಂತ್ರ ಮಾಡಿದರೆ ತಕ್ಕ ಪಾಠ ಕಲಿಸಿ ಎಂದು ಸಶಸ್ತ್ರ ಪಡೆಗಳಿಗೆ ಪ್ರಧಾನಿ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ.
‘ವಾಹನ್ ಸೆ ಗೋಲಿ ಚಲೇಗಿ, ತೋ ಯಹಾನ್ ಸೆ ಗೋಲಾ ಚಲೇಗಾ (ಅವರು ಗುಂಡು ಹಾರಿಸಿದರೆ, ನಾವು ಫಿರಂಗಿಗಳಿಂದ ಪ್ರತಿಕ್ರಿಯಿಸುತ್ತೇವೆ)’ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ “ಘರ್ ಮೇ ಘುಸ್ ಕೆ ಮರೇಂಗೆ” ಹೇಳಿಕೆಗೆ ಭಯೋತ್ಪಾದಕರು ತಮ್ಮ ಸ್ವಂತ ಹಿತ್ತಲಿನಲ್ಲಿಯೂ ಸುರಕ್ಷಿತವಾಗಿಲ್ಲ ಎಂಬ ಸಂದೇಶವನ್ನು ಭಾರತ ನೀಡಿದೆ. ಆಪರೇಷನ್ ಸಿಂಧೂರ್ ಪಾಕಿಸ್ತಾನದ ವಿರುದ್ಧ ಮಾನಸಿಕ ಗೆಲುವು ಸಾಧಿಸುವ ಉದ್ದೇಶವನ್ನು ಈಡೇರಿಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಒಪ್ಪಂದದಲ್ಲಿ ಅಮೆರಿಕದ ಪಾತ್ರದ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಭಾರತದ ನಿರ್ಧಾರಗಳು ಬೇರೆ ಯಾವುದೇ ದೇಶದಿಂದ ಪ್ರಭಾವಿತವಾಗುವುದಿಲ್ಲ ಎಂದು ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ಗೆ ತಿಳಿಸಿದ್ದಾರೆ. ನಮಗೆ ಯಾರ ಮಧ್ಯಸ್ಥಿಗೆ ಅವಶ್ಯಕತೆ ಇಲ್ಲ. ನಾವು ಪಾಕ್ ಆಕ್ರಮಿತ ಕಾಶ್ಮೀರ ವಶಪಡಿಸಿಕೊಳ್ಳುತ್ತೇವೆ. ಪಾಕಿಸ್ತಾನ ದಾಳಿ ಮಾಡಿದರೆ ಭಾರತ ಇನ್ನಷ್ಟು ಬಲವಾಗಿ ಪ್ರತಿಕ್ರಿಯಿಸುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಭಾರತ ಪ್ರತಿ ಸುತ್ತಿನಲ್ಲೂ ಪಾಕಿಸ್ತಾನವನ್ನು ಸೋಲಿಸಿತು. ಪಾಕಿಸ್ತಾನವು ಭಾರತದ ಕಾರ್ಯಾಚರಣೆಯ ಸಾಮರ್ಥ್ಯವನ್ನು ಯಾವುದೇ ಹಂತದಲ್ಲಿಯೂ ಹೊಂದಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದ್ದಾರೆ. ಅಲ್ಲದೇ “ಪ್ರತಿ ರಾತ್ರಿಯೂ ಪಾಕಿಸ್ತಾನಿಗಳಿಗೆ ದುಸ್ವಪ್ನವಾಗುತ್ತೆ. ಕನಸಿನಲ್ಲಿಯೂ ಬೆಚ್ಚಿಬೀಳಬೇಕಾಗುತ್ತದೆ. ಇಂಥ ತಿರುಗೇಟು ನಾವು ಕೊಡ್ತೇವೆ ಎಂದು ಗುಡುಗಿದ್ದಾರೆ.