SUDDIKSHANA KANNADA NEWS/ DAVANAGERE/ DATE:21-09-2023
ದಾವಣಗೆರೆ: ಭದ್ರಾ ಡ್ಯಾಂ (Bhadra Dam)ನಿಂದ ಬಲದಂಡೆ ನಾಲೆಯಲ್ಲಿ ನೀರು ಹರಿಸಬೇಕು ಎಂದು ಒತ್ತಾಯಿಸಿ ಭಾರತೀಯ ರೈತ ಒಕ್ಕೂಟದ ನೇತೃತ್ವದಲ್ಲಿ ರೈತರು ರಾಷ್ಟ್ರೀಯ ಹೆದ್ದಾರಿಯ ಕುಂದುವಾಡ ಸಮೀಪ ಹೆದ್ದಾರಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿಯನ್ನೂಓದಿ:
Davanagere: ಡಿ. ಎಲ್. ಮಾಡಿಸ್ಬೇಕಾ… ಡಿ. ಎಲ್. ಸ್ಲಾಟ್ ಓಪನ್.. ಇಂದಿನಿಂದ ನಿಮಗೆ ಮೂರು ತಿಂಗಳ ಕಾಲ ಅವಕಾಶ…!
ರಾಜ್ಯ ಸರ್ಕಾರದ ವಿರುದ್ದ ರೊಚ್ಚಿಗೆದ್ದ ರೈತರು ರಾಷ್ಟ್ರೀಯ ಹೆದ್ದಾರಿ -48 ತಡೆದು ಬೃಹತ್ ಪ್ರತಿಭಟನೆ ನಡೆಸಿದರು. ಅರ್ಧ ಗಂಟೆಯವರೆಗೆ ಹೆದ್ದಾರಿ ಬಂದ್ ಆದ ಪರಿಣಾಮ ಟ್ರಾಫಿಕ್ ಜಾಮ್ ಸಹ ಉಂಟಾಗಿತ್ತು. ಭದ್ರಾ ನಾಲೆಯಲ್ಲಿ ನೂರು ದಿನಗಳ ಕಾಲ ನೀರು ಹರಿಸುವುದಾಗಿ ಭರವಸೆ ನೀಡಿದ್ದ ಸರ್ಕಾರ ಈಗ ನಿಲ್ಲಿಸಿದೆ. ಇದರಿಂದಾಗಿ ಭತ್ತ ಬೆಳೆದ ಬೆಳೆಗಾರರು ಅತಂತ್ರರಾಗಿದ್ದಾರೆ. ಕೂಡಲೇ ನೀರು ಹರಿಸಬೇಕು. ಸರ್ಕಾರ ಕೊಟ್ಟ ಮಾತಿನಂತೆ ನಡೆಯಬೇಕು. ಭದ್ರಾ ಜಲಾಶಯದಿಂದ 100ದಿನ ನೀರು ಹರಿಸಲು ಆದೇಶ ಮಾಡಿದ್ದ ನೀರಾವರಿ ಇಲಾಖೆಯು ಅದನ್ನೇ ಪಾಲನೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಭದ್ರಾ ನಾಲೆಯಲ್ಲಿ ನೀರು ಹರಿಸಿದ ಪರಿಣಾಮ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 62 ಸಾವಿರ ಹೆಕ್ಟೇರ್ ಭತ್ತ ನಾಟಿ ಮಾಡಲಾಗಿದೆ. ಈಗ ಏಕಾಏಕಿ ನೀರು ನಿಲ್ಲಿಸಿದ ನೀರಾವರಿ ಇಲಾಖೆಯು ಬೇರೆಯದ್ದೇ ಕಾರಣ ಹೇಳುತ್ತಿದೆ. ಎರಡು ಹಂತಗಳಲ್ಲಿ ನೀರು ನಿಲ್ಲಿಸಲು ಆದೇಶ ನೀಡಲಾಗಿದ್ದು, ಇದು ರೈತ ಸಮುದಾಯಕ್ಕೆ ಬರೆದ ಮರಣ ಶಾಸನವಾಗಿದೆ. ಕೂಡಲೇ ನಿರ್ಧಾರ ಹಿಂಪಡೆದು ಭದ್ರಾ ಬಲದಂಡೆ ನಾಲೆಯಲ್ಲಿ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ನೀರು ಬಂದ್ ಮಾಡಿರುವುದರಿಂದ ಭತ್ತ ಬೆಳೆಯು ಒಣಗುತ್ತಿದೆ. ಒಂದೆಡೆ ಮಳೆ ಇಲ್ಲ, ಮತ್ತೊಂದೆಡೆ ಬೆಳೆಯೂ ಇಲ್ಲ ಎನ್ನುವಂಥ ಸ್ಥಿತಿ ಸದ್ಯಕ್ಕೆ ನಿರ್ಮಾಣ ಆಗಿದೆ. ಭತ್ತ ನಾಟಿ ಮಾಡಿರುವ ರೈತರು ನೀರಿಗಾಗಿ ಏನು ಮಾಡಬೇಕು. ನಾಲೆ ನೀರು ನಂಬಿ ನಾಟಿ ಮಾಡಿದ್ದು, ನೀರು ಹರಿಸಲೇಬೇಕು. ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಎಸ್ ಎಸ್ ಮಲ್ಲಿಕಾರ್ಜುನ್ ಅವರು ನೀರು ಹರಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಮೊದಲು ನೀರು ಬಿಡುವುದಿಲ್ಲ ಎಂದಿದ್ದರೆ ನಾಟಿ ಮಾಡುತ್ತಿರಲಿಲ್ಲ. ರೈತರು ಸಾಲ ಸೋಲ ಮಾಡಿ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಈಗ ಅತಂತ್ರ ಸ್ಥಿತಿಯಲ್ಲಿದ್ದಾರೆ. ಭದ್ರಾ ಜಲಾಶಯದಲ್ಲಿ 161 ಅಡಿ ನೀರು ಸಂಗ್ರಹ ಇದೆ. ಈ ಕಾರಣಕ್ಕಾಗಿ ನೀರು ಹರಿಸಬೇಕು. ನೂರು ದಿನಗಳ ಕಾಲ ಹರಿಸಿದರೆ ಹೆಚ್ಚೇನೂ ನೀರು ಕಡಿಮೆಯಾಗುವುದಿಲ್ಲ. ಭದ್ರಾ ಡ್ಯಾಂ ನೀರು ಸಂಗ್ರಹ ಇದಕ್ಕಿಂತಲೂ ಕಡಿಮೆಯಾದ ಅನೇಕ ಉದಾಹರಣೆಗಳಿವೆ. ಆದ್ದರಿಂದ ಕೂಡಲೇ ನೀರು ಹರಿಸಲೇಬೇಕು. ಇಲ್ಲದಿದ್ದರೆ ಹೋರಾಟ ಹಿಂದಕ್ಕೆ ಪಡೆಯಲಾಗದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸ್ಥಳಕ್ಕೆ ಆಗಮಿಸಿ ರೈತರ ಮನವೊಲಿಸುವಲ್ಲಿ ಯಶಸ್ವಿಯಾದರು. ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ಮತ್ತು ರೈತರ ಸಭೆ ನಡೆಸಿ, ಸಮಸ್ಯೆ ಇತ್ಯರ್ಥ ಪಡಿಸಲಾಗುವುದು ಎಂದು ಭರವಸೆ ನೀಡಿದ ಕಾರಣಕ್ಕೆ ಹೆದ್ದಾರಿ ತಡೆ ಚಳುವಳಿ ಹಿಂಪಡೆಯಲಾಗಿದೆ.
ಪ್ರತಿಭಟನೆಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಬಿ. ಎಂ. ಸತೀಶ್ ಕೊಳೇನಹಳ್ಳಿ, ಶಾಮನೂರು ಲಿಂಗರಾಜು, ಮಹಾನಗರ ಪಾಲಿಕೆಯ ಮಾಜಿ ಮೇಯರ್ ಹೆಚ್. ಎನ್. ಗುರುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಕುಂದುವಾಡದ ಗಣೇಶಪ್ಪ, ಆರನೇಕಲ್ಲು ವಿಜಯಕುಮಾರ, ಶಾಗಲೆ ಕ್ಯಾಂಪ್ ಬೋಗೇಶ್ವರರಾವ್, ಬೆಳವನೂರು ನಾಗೇಶ್ವರರಾವ್ ಮತ್ತಿತರರು ಪಾಲ್ಗೊಂಡಿದ್ದರು.