ನವದೆಹಲಿ: ಹಿರಿಯ ನಟ ನಾನಾ ಪಟೇಕರ್ ಅವರ ನಿಧನದ ನಂತರ, ನಟಿ ತನುಶ್ರೀ ದತ್ತಾ ಸಾಮಾಜಿಕ ಜಾಲತಾಣಗಳಲ್ಲಿ ನೀಡಿರುವ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಆಲ್ ಇಂಡಿಯಾ ಸಿನೆ ವರ್ಕರ್ಸ್ ಅಸೋಸಿಯೇಷನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನಾನಾ ಪಟೇಕರ್ ಅವರನ್ನು ‘ಈವಿಲ್ ಡೆಡ್’ (Evil Dead) ಮತ್ತು ‘ಶೈತಾನ್’ ಎಂದು ಕರೆದಿರುವ ತನುಶ್ರೀ ದತ್ತಾ ಅವರ ನಡೆ ಅತ್ಯಂತ ಸಂವೇದನಾರಹಿತ ಹಾಗೂ ಶೋಚನೀಯ ಎಂದು ಸಂಘಟನೆ ಖಂಡಿಸಿದೆ.
ನಾನಾ ಪಟೇಕರ್ ಅವರು ಭಾರತೀಯ ಸಿನಿಮಾರಂಗಕ್ಕೆ ನೀಡಿದ ಕೊಡುಗೆ, ಪದ್ಮಶ್ರೀ ಪ್ರಶಸ್ತಿ, ನಾಮ್ ಫೌಂಡೇಶನ್ ಮೂಲಕ ಸಂಕಷ್ಟದಲ್ಲಿರುವ ರೈತ ಕುಟುಂಬಗಳಿಗೆ ಮಾಡಿದ ಸೇವೆ ಹಾಗೂ ಕಾರ್ಗಿಲ್ ಯುದ್ಧದ ಸಮಯದಲ್ಲಿ ದೇಶಕ್ಕೆ ಸಲ್ಲಿಸಿದ ಸೇವೆಯನ್ನು AICWA ಈ ಸಂದರ್ಭದಲ್ಲಿ ಸ್ಮರಿಸಿದೆ.
ತನುಶ್ರೀ ದತ್ತಾ ಅವರ ವಿವಾದಾತ್ಮಕ ಹೇಳಿಕೆ:
ಮಾರ್ಗಮಧ್ಯದಲ್ಲಿ ಲಖನೌ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ವೀಡಿಯೋ ಹಂಚಿಕೊಂಡ ತನುಶ್ರೀ ದತ್ತಾ, “ನಾನಾ ಪಟೇಕರ್ ಅವರ ಸಾವು ದೇವರ ತೀರ್ಪು (Act of God)” ಎಂದು ಹೇಳಿದ್ದರು. 2018ರ #MeToo ಅಭಿಯಾನದ ಸಮಯದಲ್ಲಿ ತಾವು ನಾನಾ ಪಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದನ್ನು ಉಲ್ಲೇಖಿಸಿದ ಅವರು, ಪ್ರಕರಣ ಮುಕ್ತಾಯಗೊಂಡರೂ ತಾನು ಸರಿ ಎಂಬುದನ್ನು ಪ್ರತಿಪಾದಿಸಿದ್ದರು. ಅಲ್ಲದೆ, ತಮ್ಮ ವೈಯಕ್ತಿಕ ಕೆಲಸ ಮತ್ತು ಲಖನೌ ಕಾರ್ಯಕ್ರಮದ ಕುರಿತು ವೀಡಿಯೋದಲ್ಲಿ ಪ್ರಸ್ತಾಪಿಸಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಿನೆ ಕಾರ್ಮಿಕರ ಸಂಘ, “ರಾಷ್ಟ್ರವೇ ಒಬ್ಬ ಮಹಾನ್ ನಟನ ಅಗಲಿಕೆಗೆ ಕಂಬನಿ ಮಿಡಿಯುತ್ತಿರುವಾಗ, ನಿಮ್ಮ ವೈಯಕ್ತಿಕ ಕಾರ್ಯಕ್ರಮಗಳ ಬಗ್ಗೆ ಮಾತನಾಡುವುದು ನಿಮ್ಮ ಕ್ಷುದ್ರ ಮನಸ್ಥಿತಿಯನ್ನು ತೋರಿಸುತ್ತದೆ. ಇಂತಹ ಸಂದರ್ಭದಲ್ಲಿ ಏನು ಮಾತನಾಡಬೇಕು, ಎಲ್ಲಿ ಮೌನವಾಗಿರಬೇಕು ಎಂಬುದು ತಿಳಿದಿರಬೇಕು” ಎಂದು ತನುಶ್ರೀ ಅವರಿಗೆ ಖಾರವಾಗಿ ಬುದ್ಧಿ ಹೇಳಿದೆ.





Leave a comment