ನವದೆಹಲಿ: ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ದೆಹಲಿಯ ಜಂತರ್ ಮಂತರ್ನಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಪ್ರತಿಭಟನೆಯನ್ನು ತಡೆಯಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ದೆಹಲಿ ಪೊಲೀಸರು ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ (ಸಿಎಪಿಎಫ್) 20,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ದೆಹಲಿಯಾದ್ಯಂತ ಈಗಾಗಲೇ 400ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
ಪೊಲೀಸರು ಈ ಪ್ರತಿಭಟನೆಗೆ ಅಧಿಕೃತ ಅನುಮತಿ ನೀಡಿಲ್ಲ. ಜಂತರ್ ಮಂತರ್, ಜನಪಥ್ ಮತ್ತು ಚುನಾವಣೆ ಆಯೋಗದ ಕಚೇರಿ ಸುತ್ತಮುತ್ತಲಿನ 1.5 ಕಿಲೋಮೀಟರ್ ವ್ಯಾಪ್ತಿಯನ್ನು ಅತ್ಯಂತ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದ್ದು, ಬ್ಯಾರಿಕೇಡ್ಗಳ ಏಳು ಹಂತದ ಭದ್ರತೆಯನ್ನು ಒದಗಿಸಲಾಗಿದೆ. ಜನ್ಪಥ್-ಕರ್ತವ್ಯ ಪಥ ಜಂಕ್ಷನ್ ಸುತ್ತಮುತ್ತಲಿನ 4 ಕಿಮೀ ವ್ಯಾಪ್ತಿಯಲ್ಲಿ ಇಂಟರ್ನೆಟ್ ಸೇವೆಯನ್ನು 24 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ.
ಮೆಟ್ರೋ ಹಾಗೂ ರೈಲು ಸೇವೆ ಬಂದ್: ರಾಜೀವ್ ಚೌಕ್, ನವದೆಹಲಿ ಮತ್ತು ಕಶ್ಮೀರಿ ಗೇಟ್ ಸೇರಿದಂತೆ 45 ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗಿದೆ. ಹಾಗೂ ದೆಹಲಿಗೆ ಆಗಮಿಸಬೇಕಿದ್ದ 250ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಲಾಗಿದೆ.
ಬಿಗಿ ಪೊಲೀಸ್ ಭದ್ರತೆ: 6,500ಕ್ಕೂ ಹೆಚ್ಚು ಸಿಬ್ಬಂದಿಯನ್ನು ಪ್ರಮುಖ ಪ್ರದೇಶದಲ್ಲಿ ನಿಯೋಜಿಸಲಾಗಿದ್ದು, 300ಕ್ಕೂ ಹೆಚ್ಚು ಆಡಿಯೋ ರೆಕಾರ್ಡಿಂಗ್ ವೈಶಿಷ್ಟ್ಯವುಳ್ಳ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಕಣ್ಗಾವಲು ವಹಿಸಲಾಗಿದೆ.
ಸಿಜೆಪಿ ಪಟ್ಟು: ನಿರ್ಬಂಧಗಳ ಹೊರತಾಗಿಯೂ ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ತಮ್ಮ ಬೆಂಬಲಿಗರೊಂದಿಗೆ ಜಂತರ್ ಮಂತರ್ನಲ್ಲಿ ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಪ್ರತಿಭಟನಾ ಸ್ಥಳ ಹಾಗೂ ಸುತ್ತಮುತ್ತಲಿನ ಹೋಟೆಲ್ಗಳು, ಲಾಡ್ಜ್ಗಳು ಮತ್ತು ಹೋಮ್ಸ್ಟೇಗಳ ಮೇಲೆಯೂ ಪೊಲೀಸರು ತೀವ್ರ ನಿಗಾ ವಹಿಸಿದ್ದು, ಪ್ರತಿಭಟನಾಕಾರರಿಗೆ ಆಶ್ರಯ ನೀಡದಂತೆ ಸೂಚಿಸಿದ್ದಾರೆ. ಹಾಗೆಯೇ ಪೊಲೀಸ್ ಕ್ರಮಗಳ ಕುರಿತು ಪಾರದರ್ಶಕತೆ ಕಾಯ್ದುಕೊಳ್ಳಲು ಹಿರಿಯ ಅಧಿಕಾರಿಗಳಿಗೆ ಬಾಡಿ ಕ್ಯಾಮೆರಾಗಳನ್ನು ಒದಗಿಸಲಾಗಿದೆ.





Leave a comment