ನವದೆಹಲಿ: ಮತದಾರರ ಪಟ್ಟಿ ದುರ್ಬಳಕೆ ಹಾಗೂ ಅಕ್ರಮ ಆರೋಪಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಮತ್ತು ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA) ನೀಡಿರುವ ಜಂತರ್ ಮಂತರ್ ಚಲೋ ಕರೆ ಹಿನ್ನೆಲೆಯಲ್ಲಿ ರಾಜಧಾನಿ ದೆಹಲಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗೆ ಯತ್ನಿಸುತ್ತಿರುವ ಕಾರ್ಯಕರ್ತರನ್ನು ತಡೆಯಲು ದೆಹಲಿ ಪೊಲೀಸರು ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಕಳೆದ ಜುಲೈ 20ರಂದು ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ನಡೆದ ಪ್ರತಿಭಟನೆ ಹಾಗೂ ಹಿಂಸಾಚಾರದ ಬಳಿಕ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದ ಘಟನೆ ಇನ್ನೂ ಹಸಿಯಾಗಿರುವ ಬೆನ್ನಲ್ಲೇ, ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಕಾಪಾಡಲು ದೆಹಲಿ ಪೊಲೀಸರು ಹಾಗೂ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (CAPF) ಸೇರಿದಂತೆ 20,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಗರದಾದ್ಯಂತ ನಿಯೋಜಿಸಲಾಗಿದೆ.
ಬಿಗಿ ಭದ್ರತೆ ಹಾಗೂ ತಡೆ: ಜಂತರ್ ಮಂತರ್ ಹಾಗೂ ಅಶೋಕ ರಸ್ತೆ ವೃತ್ತದ ಬಳಿ ಜಮಾಯಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಬಸ್‌ಗಳಲ್ಲಿ ಕರೆದೊಯ್ದಿದ್ದಾರೆ. ಅಕ್ರಮ ತಡೆಯಲು ಪೊಲೀಸರಿಗೆ ಬಾಡಿ ಕ್ಯಾಮೆರಾಗಳನ್ನು ಒದಗಿಸಲಾಗಿದೆ.
ಸಾರಿಗೆ ನಿಯಂತ್ರಣ: ಪ್ರತಿಭಟನೆ ನಿಯಂತ್ರಿಸುವ ಉದ್ದೇಶದಿಂದ ದೆಹಲಿಯ 45 ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಬಂದ್ ಮಾಡಲಾಗಿದ್ದು, ದೆಹಲಿಯ ಎರಡು ಮುಖ್ಯ ರೈಲ್ವೆ ನಿಲ್ದಾಣಗಳಿಗೆ ಆಗಮಿಸುವ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.
ಸಿಜೆಪಿ ಸಂಸ್ಥಾಪಕರ ಪಟ್ಟು: ಸಿಜೆಪಿ ಸಂಸ್ಥಾಪಕ ಅಭೀಜಿತ್ ದೀಪ್ಕೆ ಮುಂಬೈಯಿಂದ ದೆಹಲಿಗೆ ಆಗಮಿಸುತ್ತಿದ್ದು, “ಬಂಧನ ಅಥವಾ ಬಂಧನದ ಬೆದರಿಕೆಗೆ ನಾವು ಹೆದರುವುದಿಲ್ಲ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಪೊಲೀಸ್ ಇಲಾಖೆಯಿಂದ ಪ್ರತಿಭಟನೆಗೆ ಅಧಿಕೃತ ಅನುಮತಿ ಸಿಗದಿದ್ದರೂ, ಸಾವಿರಾರು ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರು ಸ್ಥಳಕ್ಕೆ ಆಗಮಿಸುವ ಸಾಧ್ಯತೆಯಿರುವುದರಿಂದ ಇಡೀ ದೆಹಲಿ ನಗರದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.





Leave a comment