ಬೆಂಗಳೂರು: ದೆಹಲಿಯ ರಸ್ತೆಗಳನ್ನು ಮುಚ್ಚಬಹುದು ಪ್ರಧಾನಿಗಳೇ, ಜನರ ಪ್ರಶ್ನೆಗಳಿಗೆ ಬೀಗ ಹಾಕಲು ಸಾಧ್ಯವಿಲ್ಲ! ಪ್ರಜಾಪ್ರಭುತ್ವದ ಧ್ವನಿಯನ್ನು ಹತ್ತಿಕ್ಕುವ ಪ್ರತಿಯೊಂದು ಪ್ರಯತ್ನವೂ ದೆಹಲಿಯ ಅಧಿಕಾರದ ಗದ್ದುಗೆಯನ್ನೇ ಅಲುಗಾಡಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ಗುಡುಗಿದ್ದಾರೆ.
ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ದೆಹಲಿಯಲ್ಲಿ ನಾಳೆ ನಡೆಯುವ ಪ್ರತಿಭಟನೆಗೆ ಕೇಂದ್ರ ಸರ್ಕಾರದ ಧೋರಣೆ ನೋಡಿದರೆ, SIR ರದ್ದಾಗುವುದು ಮತ್ತು ಗ್ಯಾನೇಶ್ ಕುಮಾರ್ ಬಂಧನವಾಗುವುದು ಖಚಿತವಾದಂತಿದೆ. ಈ ಹಿಂದೆ ರೈತರ ಪ್ರತಿಭಟನೆಯ ವೇಳೆಯೂ ಇದೇ ರೀತಿ ದೆಹಲಿ ಪ್ರವೇಶ ನಿರ್ಬಂಧಿಸುವ ಕೃತ್ಯವನ್ನು ಕೇಂದ್ರ ಸರ್ಕಾರ ಮಾಡಿತ್ತು. ಆ ಬಳಿಕ ಕೇಂದ್ರ ಸರ್ಕಾರ ಪ್ರತಿಭಟನಾ ನಿರತ ರೈತರ ಎದುರು ಮಂಡಿಯೂರಿ ಕಾಯ್ದೆಗಳನ್ನು ಹಿಂಪಡೆದಿತ್ತು. ಈಗ ಇತಿಹಾಸ ಮತ್ತೆ ಮರುಕಳಿಸುವ ದಿನ ಬಂದಿದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿ -ಯುವಜನ ನಾಯಕರ ಬಂಧನ, ರಾಜಕೀಯ ನಾಯಕರ ಗೃಹಬಂಧನ, ಸಾವಿರಾರು ಪೊಲೀಸರ ನಿಯೋಜನೆ, ದೆಹಲಿಯ ಪ್ರವೇಶ ಮಾರ್ಗಗಳಿಗೆ ನಿರ್ಬಂಧ, ಪ್ರತಿಭಟನೆಗೆ ಬೆಂಬಲ ನೀಡದಂತೆ ಧಾರ್ಮಿಕ ಸಂಸ್ಥೆಗಳ ಮೇಲೆ ಒತ್ತಡ ಹೇರಿರುವುದು ಹಾಗೂ ರೈಲುಗಳು ರಾಜಧಾನಿಯ ಪ್ರವೇಶ ಮಾರ್ಗಗಳಿಗೆ ನಿರ್ಬಂಧ ಹೇರುವುದು ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಜನರ ಮೇಲೆ ಒತ್ತಡ ಹೇರುತ್ತಿರುವ ಆರೋಪಗಳನ್ನು ದೇಶದ ಜನ ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ಹೇಳಿದ್ದಾರೆ.
ಈ ಹಿಂದೆಯೂ ರೈತರ ಪ್ರತಿಭಟನೆಯ ಸಂದರ್ಭದಲ್ಲಿಯೂ ದೆಹಲಿಯ ಪ್ರವೇಶ ಮಾರ್ಗಗಳನ್ನು ನಿರ್ಬಂಧಿಸಲಾಗಿತ್ತು. ಆದರೆ ರೈತರ ಸುದೀರ್ಘ ಹೋರಾಟದ ಎದುರು ನರೇಂದ್ರ ಮೋದಿ ಸರ್ಕಾರ ಮಂಡಿಯೂರಬೇಕಾಯಿತು, ಬಳಿಕ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕಾಯಿತು. ಆ ಐತಿಹಾಸಿಕ ಘಟನೆ ಸರ್ಕಾರಗಳಿಗೆ ಮಹತ್ವದ ಪಾಠವನ್ನು ಕಲಿಸಿರುವಾಗ, ದೇಶದ ನಾಗರಿಕರ ನ್ಯಾಯಯುತ ಪ್ರಶ್ನೆಗಳಿಗೆ ಪೊಲೀಸ್ ನಿರ್ಬಂಧಗಳು ಶಾಶ್ವತ ಉತ್ತರವಲ್ಲ ಎಂದಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ವ್ಯಕ್ತವಾಗಿರುವ ಆಕ್ಷೇಪಣೆಗಳು ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಸರ್ವಾಧಿಕಾರಿ, ಪಕ್ಷಪಾತಿತನ ಹಾಗೂ ದೇಶದ್ರೋಹಿತನದ ವಿರುದ್ಧ ಎದ್ದಿರುವ ಪ್ರಶ್ನೆಗಳಿಗೆ ಪಾರದರ್ಶಕ ಉತ್ತರ ದೊರೆಯಬೇಕು. ಚುನಾವಣಾ ಆಯೋಗದ ಸ್ವಾಯತ್ತತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡುವುದು ಸಾಂವಿಧಾನಿಕ ಹೊಣೆಗಾರಿಕೆ ಎಂದಿದ್ದಾರೆ.
ಪ್ರತಿಭಟನೆಗೆ ಅವಕಾಶ ನೀಡುವುದು ಸರ್ಕಾರದ ಔದಾರ್ಯವಲ್ಲ; ಅದು ಸಂವಿಧಾನ ಕಲ್ಪಿಸಿರುವ ನಾಗರಿಕ ಹಕ್ಕು. ಕಾನೂನುಬದ್ಧವಾಗಿ ಶಾಂತಿಯುತ ಪ್ರತಿಭಟನೆ ನಡೆಸುವ ಸ್ವಾತಂತ್ರ್ಯವನ್ನು ಅನಗತ್ಯ ನಿರ್ಬಂಧಗಳ ಮೂಲಕ ಕುಂಠಿತಗೊಳಿಸುವ ಯಾವುದೇ ಪ್ರಯತ್ನವೂ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಈ ನಿರ್ಬಂಧಗಳ ಅಗತ್ಯ ಮತ್ತು ಕಾನೂನುಬದ್ಧತೆಯ ಕುರಿತು ದೇಶಕ್ಕೆ ಉತ್ತರಿಸಬೇಕು. ಪ್ರಜಾಪ್ರಭುತ್ವದಲ್ಲಿ ಸರ್ಕಾರವು ಜನರನ್ನು ನಿಯಂತ್ರಿಸುವ ಅಧಿಕಾರ ಹೊಂದಿರುವುದಕ್ಕಿಂತಲೂ, ಜನರಿಗೆ ಉತ್ತರ ನೀಡುವ ಹೊಣೆಗಾರಿಕೆಯನ್ನು ಹೊಂದಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಮತ್ತು ಸಹಚರರು ಅರ್ಥ ಮಾಡಿಕೊಳ್ಳಬೇಕು ಎಂದು ಹರಿಪ್ರಸಾದ್ ಸಲಹೆ ನೀಡಿದ್ದಾರೆ.





Leave a comment