ನವದೆಹಲಿ:ಭಾರತಕ್ಕೆ ದ್ರೋಹ ಬಗೆದ, ಪ್ರಜಾಪ್ರಭುತ್ವ ಹೈಜಾಕ್ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಜ್ಞಾನೇಶ್ ಕುಮಾರ್, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಸೇರಿ ಯಾರೂ ತಪ್ಪಿಸಿಕೊಳ್ಳಲು ಆಗಲ್ಲ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಮತ್ತು ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಖಂಡಿಸಿ ‘ಇಂಡಿಯಾ’ ಮೈತ್ರಿಕೂಟದ ಸಂಸದರು ಸಂಸತ್ತಿನಿಂದ ಚುನಾವಣಾ ಆಯೋಗದ ಕಚೇರಿಗೆ ನಡೆಸಿದ ಬೃಹತ್ ಪಾದಯಾತ್ರೆಯನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ರಾಹುಲ್ ಗಾಂಧಿ ಅವರು ಆಕ್ರೋಶದ ಮಾತುಗಳನ್ನಾಡಿದರು.
ಪೊಲೀಸರು ತಡೆದ ನಂತರ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವಾರು ಮಂದಿ ಸಂಸದರು ದೆಹಲಿಯ ಆಕಾಶವಾಣಿ ಭವನದ ಆವರಣದಲ್ಲಿ ಕುಳಿತು ಧರಣಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ರಾಹುಲ್ ಗಾಂಧಿ ಅವರ ಪ್ರಮುಖ ಹೇಳಿಕೆಗಳು:
300 ಸಂಸದರಿಗೆ ಸಿಗದ ಭೇಟಿಯ ಅವಕಾಶ: “ಮಹಾರಾಷ್ಟ್ರ, ಹರಿಯಾಣ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಚುನಾವಣಾ ಪ್ರಕ್ರಿಯೆ ಕುರಿತು ಪ್ರಶ್ನೆ ಕೇಳಲು ಸುಮಾರು ೩೦೦ ಪ್ರತಿಪಕ್ಷ ಸಂಸದರು ಬಂದಿದ್ದೇವೆ. ಕೋಟಿಗಟ್ಟಲೆ ಜನರ ಜನಾದೇಶ ಪಡೆದ ಜನಪ್ರತಿನಿಧಿಗಳನ್ನು ಸಿಇಸಿ ಗ್ಯಾನೇಶ್ ಕುಮಾರ್ ಭೇಟಿ ಮಾಡಲು ಏಕೆ ನಿರಾಕರಿಸುತ್ತಿದ್ದಾರೆ?” ಎಂದು ರಾಹುಲ್ ಪ್ರಶ್ನಿಸಿದರು.
ಚುನಾವಣಾ ವ್ಯವಸ್ಥೆ ಧ್ವಂಸದ ಆರೋಪ: ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಮೋಹನ್ ಭಾಗವತ್ ಮತ್ತು ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಸೇರಿ ದೇಶದ ಚುನಾವಣಾ ವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವವನ್ನು ಧ್ವಂಸಗೊಳಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ವೋಟ್ ಚೋರಿ (ಮತ ಕಳವು): ಮೋದಿ ಮತ್ತು ಅಮಿತ್ ಶಾ ಜೋಡಿ ದೇಶದ ಚುನಾವಣಾ ಪ್ರಕ್ರಿಯೆಯನ್ನು ಹೈಜಾಕ್ ಮಾಡಿದೆ. “ಅವರು ಮತಗಳನ್ನು ಕದಿಯದಿದ್ದರೆ, ನಮ್ಮನ್ನು ಭೇಟಿಯಾಗಲು ಒಂದು ನಿಮಿಷದಲ್ಲೇ ಸಿದ್ಧರಾಗುತ್ತಿದ್ದರು. ಕಳ್ಳತನ ಮಾಡಿರುವುದರಿಂದಲೇ ಅವರು ನಮ್ಮನ್ನು ಎದುರಿಸಲು ಹೆದರುತ್ತಿದ್ದಾರೆ” ಎಂದು ಆರೋಪಿಸಿದರು.
ಸಂವಿಧಾನ ರಕ್ಷಣೆ: ಈ ಹೋರಾಟ ಕೇವಲ ರಾಜಕೀಯ ವಿರೋಧಕ್ಕಾಗಿ ಅಲ್ಲ, ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ‘ಇಂಡಿಯಾ’ ಮೈತ್ರಿಕೂಟ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.





Leave a comment