ದಾವಣಗೆರೆ: ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಬ್ಬರನ್ನು ಬೆಂಗಳೂರಿನಿಂದ ಕರೆತಂದು, ಈಗ ಮದುವೆಯಾಗಲು ನಿರಾಕರಿಸಿ ವಂಚಿಸುತ್ತಿರುವುದಾಗಿ ತುರ್ತು ಸಹಾಯವಾಣಿ 112ಗೆ ದೂರು ಬಂದಿರುವ ಘಟನೆ ಸಂತೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಕೊಗಲೂರು ಗ್ರಾಮದಲ್ಲಿ ನಡೆದಿದೆ.
ದೂರು ಸಲ್ಲಿಕೆಯಾದ ತಕ್ಷಣವೇ ಕಾರ್ಯಪ್ರವೃತ್ತರಾದ 112 ಹೊಯ್ಸಳ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಚಾರಣೆಯ ವೇಳೆ, ದೂರುದಾರರನ್ನು ಕರೆತಂದಿದ್ದ ವ್ಯಕ್ತಿಗೆ ಈಗಾಗಲೇ ಮದುವೆಯಾಗಿದ್ದು, ಮೊದಲ ಪತ್ನಿಯಿಂದ ಕಾನೂನಾತ್ಮಕವಾಗಿ ವಿಚ್ಛೇದನ (ಡೈವೋರ್ಸ್) ಪಡೆದುಕೊಂಡಿಲ್ಲ ಎಂಬ ಸತ್ಯಾಂಶ ಬೆಳಕಿಗೆ ಬಂದಿದೆ.
ಸ್ಥಳದಲ್ಲಿಯೇ ಇದ್ದ ಇಬ್ಬರಿಗೂ ಘಟನೆಯ ಗಂಭೀರತೆ ಹಾಗೂ ಕಾನೂನು ಸ್ಥಿತಿಗತಿಗಳ ಬಗ್ಗೆ ಸೂಕ್ತ ತಿಳುವಳಿಕೆ ನೀಡಿದ 112 ಸಿಬ್ಬಂದಿ, ಮುಂದಿನ ಕಾನೂನು ಕ್ರಮಕ್ಕಾಗಿ ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ತೆರಳಿ ಅಧಿಕೃತ ದೂರು ನೀಡುವಂತೆ ಸೂಚನೆ ನೀಡಿದ್ದಾರೆ.





Leave a comment