ದಾವಣಗೆರೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಕೈಗಾರಿಕಾ ಬೆಳವಣಿಗೆಗೆ ಪೂರಕವಾಗಿ ದಾವಣಗೆರೆಯಲ್ಲಿ ವಿಮಾನ ನಿಲ್ದಾಣ ಸ್ಥಾಪಿಸುವ ಸಾಧ್ಯತೆ ಮತ್ತು ಕಾರ್ಯಸಾಧ್ಯತೆಯನ್ನು ಪರಿಶೀಲಿಸಿ, ಮುಂದಿನ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಯಲ್ಲಿ ಜಿಲ್ಲೆಯನ್ನು ಪರಿಗಣಿಸುವಂತೆ ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವನ್ನು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕೇಂದ್ರ ಸರ್ಕಾರದ ಭರವಸೆಗಳ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಮುಂದಿನ 10 ವರ್ಷಗಳಲ್ಲಿ ದೇಶದಾದ್ಯಂತ ಸುಮಾರು 100 ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವ ಯೋಜನೆಯ ಹಿನ್ನೆಲೆಯಲ್ಲಿ ದಾವಣಗೆರೆಗೂ ಆದ್ಯತೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಶಿವಮೊಗ್ಗ ಹಾಗೂ ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣಗಳಿದ್ದರೂ, ದಾವಣಗೆರೆಯಂತಹ ನಗರಗಳಲ್ಲಿ ಐಟಿ ಕಾರಿಡಾರ್, ಹೊಸ ಕೈಗಾರಿಕೆಗಳು ಹಾಗೂ ಉದ್ಯೋಗಾವಕಾಶಗಳನ್ನು ಬೆಳೆಸಲು ನೇರ ವಿಮಾನ ಸಂಪರ್ಕ ಅತ್ಯಂತ ಅಗತ್ಯ. ದಾವಣಗೆರೆಗೆ ವಿಮಾನ ಸಂಪರ್ಕ ಕಲ್ಪಿಸುವುದು ನನ್ನ ಪ್ರಮುಖ ಕನಸುಗಳಲ್ಲಿ ಒಂದಾಗಿದೆ ಎಂದು ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ದಾವಣಗೆರೆ ರಾಜ್ಯದ ಪ್ರಮುಖ ಶೈಕ್ಷಣಿಕ ಮತ್ತು ವೈದ್ಯಕೀಯ ಕೇಂದ್ರಗಳಲ್ಲಿ ಒಂದಾಗಿದ್ದು, ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು, ರೋಗಿಗಳು, ಉದ್ಯಮಿಗಳು ಹಾಗೂ ವೃತ್ತಿಪರರು ಇಲ್ಲಿಗೆ ಆಗಮಿಸುತ್ತಾರೆ. ಆದ್ದರಿಂದ ವೇಗವಾದ ಮತ್ತು ಸುಗಮ ಪ್ರಯಾಣದ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ, ಜಿಲ್ಲೆಯ ಆರ್ಥಿಕ ಹಾಗೂ ಕೈಗಾರಿಕಾ ಬೆಳವಣಿಗೆಗೆ ವಿಮಾನ ಸಂಪರ್ಕ ಸಹಕಾರಿಯಾಗಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ವಿಮಾನ ಸಂಪರ್ಕ ದೊರೆತರೆ ದಾವಣಗೆರೆಯಲ್ಲಿ ಹೊಸ ಹೂಡಿಕೆಗಳನ್ನು ಆಕರ್ಷಿಸಲು, ಐಟಿ ಮತ್ತು ಕೈಗಾರಿಕಾ ವಲಯದ ಬೆಳವಣಿಗೆಗೆ ಉತ್ತೇಜನ ನೀಡಲು ಹಾಗೂ ಸ್ಥಳೀಯವಾಗಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಅನುಕೂಲವಾಗಲಿದೆ. ಆದ್ದರಿಂದ ದಾವಣಗೆರೆಯಲ್ಲಿ ವಿಮಾನ ನಿಲ್ದಾಣ ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸಿ, ಕೇಂದ್ರ ಸರ್ಕಾರದ ಮುಂದಿನ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಯಲ್ಲಿ ದಾವಣಗೆರೆಯನ್ನು ಸೇರಿಸಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಒತ್ತಾಯಿಸಿದ್ದಾರೆ.
ಈ ವೇಳೆ ನಾಗರಿಕ ವಿಮಾನಯಾನ ಸಚಿವಾಲಯ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಪ್ರತಿನಿಧಿಗಳು ಉಪಸ್ಥಿತರಿದ್ದರು.
- Airport Authority of India AAI
- Davanagere Airport
- Davanagere Industrial Growth
- Dr. Prabha Mallikarjun
- Government Assurances Committee
- Greenfield Airport Davanagere
- Ministry of Civil Aviation
- ಐಟಿ ಕಾರಿಡಾರ್ ದಾವಣಗೆರೆ
- ಕರ್ನಾಟಕ ವಿಮಾನ ನಿಲ್ದಾಣ ಯೋಜನೆ
- ಕೈಗಾರಿಕಾ ಅಭಿವೃದ್ಧಿ
- ಡಾ. ಪ್ರಭಾ ಮಲ್ಲಿಕಾರ್ಜುನ್
- ದಾವಣಗೆರೆ ವಿಮಾನ ನಿಲ್ದಾಣ
- ನಾಗರಿಕ ವಿಮಾನಯಾನ ಸಚಿವಾಲಯ
- ಭರವಸೆಗಳ ಸಮಿತಿ ಸಭೆ





Leave a comment