ದಾವಣಗೆರೆ: ಮಧ್ಯ ಕರ್ನಾಟಕದ ಪ್ರಮುಖ ನಗರವಾದ ದಾವಣಗೆರೆಯಲ್ಲಿ ಶ್ರೀ ಹಿಂದೂ ಮಹಾ ಗಣಪತಿಯ ಭವ್ಯ ವಿಸರ್ಜನಾ ಶೋಭಾಯಾತ್ರೆಯು ಶ್ರದ್ಧಾ-ಭಕ್ತಿ ಹಾಗೂ ಅದ್ಧೂರಿ ಉಲ್ಲಾಸದ ನಡುವೆ ವಿಜೃಂಭಣೆಯಿಂದ ನೆರವೇರಿತು.
ನಗರದ ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಮಹಾ ಗಣಪತಿಗೆ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ಸಲ್ಲಿಸಿದ ನಂತರ ವಿಸರ್ಜನಾ ಮೆರವಣಿಗೆಗೆ ಅಧಿಕೃತ ಚಾಲನೆ ನೀಡಲಾಯಿತು.
ಕೇಸರಿಮಯವಾದ ಪ್ರಮುಖ ರಸ್ತೆಗಳು
ಶೋಭಾಯಾತ್ರೆಯ ಹಾದಿಯುದ್ದಕ್ಕೂ ಲಕ್ಷಾಂತರ ಭಕ್ತರು ಭಾಗವಹಿಸಿದ್ದು, ನಗರದಾದ್ಯಂತ ಕೇಸರಿ ಧ್ವಜಗಳು, ವಿದ್ಯುತ್ ದೀಪಾಲಂಕಾರಗಳು ಹಾಗೂ ಬಂಟಿಂಗ್ಸ್‌ಗಳಿಂದ ರಸ್ತೆಗಳು ಕೇಸರಿಮಯವಾಗಿದ್ದವು.
ಶೋಭಾಯಾತ್ರೆಯಲ್ಲಿ ನಾಸಿಕ್ ಢೋಲ್, ಚಂಡೆ ವಾದ್ಯ ಹಾಗೂ ಮಂಗಳವಾದ್ಯಗಳ ನಾದಕ್ಕೆ ಯುವಕ-ಯುವತಿಯರು ಮತ್ತು ಸಾರ್ವಜನಿಕರು ಹುರುಪಿನಿಂದ ಹೆಜ್ಜೆ ಹಾಕಿದರು. ‘ಜೈ ಶ್ರೀರಾಮ್’ ಮತ್ತು ‘ಗಣಪತಿ ಬಪ್ಪ ಮೋರಯಾ’ ಎಂಬ ಜಯಘೋಷಗಳು ನಗರದೆಲ್ಲೆಡೆ ಪ್ರತಿಧ್ವನಿಸಿದವು.
ಬೇರೆ ಬೇರೆ ತಾಲೂಕುಗಳಿಂದ, ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಗಣಪತಿ ಮೆರವಣಿಗೆಯಲ್ಲಿ ಹುಚ್ಚೆದ್ದು ಕುಣಿದರು. ಎಲ್ಲೆಲ್ಲೂ ಕೇಸರಿಮಯವಾಗಿತ್ತು. ಡಿಜೆಗೆ ಅನುಮತಿ ನೀಡಿದ್ದರಿಂದ ಭಕ್ತರ ಜಯಘೋಷಗಳು ಮುಗಿಲು
ಮುಟ್ಟಿದವು.
ದಾವಣಗೆರೆಯಲ್ಲಿ ಕಳೆದ ಏಳು ವರ್ಷಗಳಿಂದ ಭರ್ಜರಿಯಾಗಿ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಮೆರವಣಿಗೆಯು ನಡೆಯುತ್ತದೆ. ಎವಿಕೆ ಕಾಲೇಜು, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಲಾಯರ್ ರಸ್ತೆ, ಪಿಬಿ ರಸ್ತೆಯಲ್ಲಿ ಜಯಘೋಷಗಳು ಮುಗಿಲು ಮುಟ್ಟಿದ್ದರೆ, ಡಿಜೆ ಶಬ್ಧಕ್ಕೆ ಯುವಕ, ಯುವತಿಯರು, ವಯಸ್ಸಾದವರು ಸಹ ಕುಣಿದು ಕುಪ್ಪಳಿಸಿದ್ದು ವಿಶೇಷವಾಗಿತ್ತು. ಶನಿವಾರವಾಗಿದ್ದರಿಂದ ಹಾಗೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಇದ್ದ ಕಾರಣ ಯುವಕ, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಹೈಸ್ಕೂಲ್ ಮೈದಾನದಿಂದ ಪ್ರಾರಂಭವಾದ ಈ ಭವ್ಯ ಶೋಭಾಯಾತ್ರೆಯು ಎವಿಕೆ ಮಹಿಳಾ ಕಾಲೇಜು ರಸ್ತೆ, ಚೇತನ ಹೋಟೆಲ್, ವಿದ್ಯಾರ್ಥಿ ಭವನ ವೃತ್ತ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಕುವೆಂಪು ರಸ್ತೆ, ಪಿ.ಬಿ. ರಸ್ತೆಯವರೆಗೆ ಮೆರವಣಿಗೆ ಕಲರ್ ಫುಲ್ ಆಗಿತ್ತು.
ಗಣ್ಯರು ಹಾಗೂ ಸಾರ್ವಜನಿಕರ ಉಪಸ್ಥಿತಿ
ಈ ಶುಭಸಂದರ್ಭದಲ್ಲಿ ಹಿಂದೂ ಮಹಾ ಗಣಪತಿ ಸಮಿತಿಯ ಪದಾಧಿಕಾರಿಗಳು, ವಿವಿಧ ಮಠಾಧೀಶರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ನಾಯಕರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದು, ವಿಘ್ನವಿನಾಶಕನ ಆಶೀರ್ವಾದ ಪಡೆದರು. ಸಾರ್ವಜನಿಕರ ಅನುಕೂಲಕ್ಕಾಗಿ ಮೆರವಣಿಗೆಯುದ್ದಕ್ಕೂ ಕುಡಿಯುವ ನೀರು, ಮಜ್ಜಿಗೆ ಹಾಗೂ ಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಲಾಗಿತ್ತು.
ಬಿಗಿ ಪೊಲೀಸ್ ಭದ್ರತೆ ಹಾಗೂ ಕಣ್ಗಾವಲು
ಶೋಭಾಯಾತ್ರೆಯ ಸುಗಮ ನಿರ್ವಹಣೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪ್ರಮುಖ ಸರ್ಕಲ್ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಡ್ರೋನ್ ಕ್ಯಾಮೆರಾಗಳು ಹಾಗೂ ಸಿಸಿಟಿವಿ ಕಣ್ಗಾವಲು ಇರಿಸಲಾಗಿತ್ತು.
ಟ್ರ್ಯಾಕ್ಟರ್ ಚಲಾಯಿಸಿದ ಸಮರ್ಥ್:
ದಾವಣಗೆರೆಯ ಹಿಂದೂ ಮಹಾ ಗಣಪತಿಯ ಭವ್ಯ ಶೋಭಾಯಾತ್ರೆಯಲ್ಲಿ ಭಾಗವಹಿಸಿ, ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಹಾಗೂ ಸಾರ್ವಜನಿಕರೊಂದಿಗೆ ಗಣೇಶೋತ್ಸವದ ಸಂಭ್ರಮದಲ್ಲಿ ಶಾಸಕ ಸಮರ್ಥ್ ಶಾಮನೂರು ಪಾಲ್ಗೊಂಡರು. ಮಂಗಳವಾದ್ಯಗಳ ನಾದ, ಭಕ್ತಿಯ ಘೋಷಣೆಗಳ ನಡುವೆ ಶ್ರೀ ಗಣೇಶನಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿ, ಶುಭಯಾತ್ರೆಯುದ್ದಕ್ಕೂ ಜನರೊಂದಿಗೆ ಬೆರೆತು ಸಂಭ್ರಮದ ಕ್ಷಣಗಳನ್ನು ಹಂಚಿಕೊಂಡೆ ಎಂದು ಸಮರ್ಥ್ ಶಾಮನೂರು ಹೇಳಿದರು.
ಈ ಸಂದರ್ಭದಲ್ಲಿ ಹಿಂದೂ ಮಹಾ ಗಣಪತಿ ಸಮಿತಿಯ ಪದಾಧಿಕಾರಿಗಳು, ವಿವಿಧ ಸಂಘ–ಸಂಸ್ಥೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು. ವಿಘ್ನವಿನಾಶಕ ಶ್ರೀ ಗಣೇಶನು ಎಲ್ಲರಿಗೂ ಸುಖ–ಶಾಂತಿ, ಆರೋಗ್ಯ ಹಾಗೂ ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದೆನು ಎಂದು ಸಮರ್ಥ್ ಶಾಮನೂರು ತಿಳಿಸಿದರು.





Leave a comment