ಕೋಟ್‌ದ್ವಾರ (ಉತ್ತರಾಖಂಡ್): ಉದ್ಯಮಿಯೊಬ್ಬರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಕೋಟ್‌ದ್ವಾರದ ಜಿಮ್ ಮಾಲೀಕ ದೀಪಕ್ ಕುಮಾರ್ (ಸಾಮಾಜಿಕ ಜಾಲತಾಣಗಳಲ್ಲಿ ‘ಮೊಹಮ್ಮದ್ ದೀಪಕ್’ ಎಂದೇ ಖ್ಯಾತ) ಅವರಿಗೆ ಸ್ಥಳೀಯ ಸಬ್-ಡಿವಿಷನಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ಆರೋಪಿಯು ತಲಾ ₹50,000 ಮೌಲ್ಯದ ಮೂರು ಶ್ಯೂರಿಟಿ ಬಾಂಡ್‌ಗಳನ್ನು ಸಲ್ಲಿಸಿದ ನಂತರ ಜಾಮೀನು ನೀಡಲಾಗಿದೆ. ಇದರೊಂದಿಗೆ, ಮುಂದಿನ ಆರು ತಿಂಗಳ ಕಾಲ ಯಾವುದೇ ಶಾಂತಿ ಭಂಗ ಉಂಟುಮಾಡದಂತೆ ಎಚ್ಚರಿಸಿದ್ದು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 130ರ ಅಡಿಯಲ್ಲಿ ನೋಟಿಸ್ ಜಾರಿಗೊಳಿಸಲಾಗಿದೆ.
ಪ್ರಕರಣದ ವಿವರ:
ಸ್ಥಳೀಯ ಉದ್ಯಮಿ ಸಂಜೀವ್ ಟೋಂಕ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಪೋಸ್ಟ್ ಒಂದರ ಕಮೆಂಟ್ ವಿಷಯಕ್ಕೆ ಸಂಬಂಧಿಸಿದಂತೆ ದೀಪಕ್ ಕುಮಾರ್, ಉದ್ಯಮಿಯ ಅಂಗಡಿಗೆ ತೆರಳಿ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿತ್ತು.
ಪ್ರಸಕ್ತ ವರ್ಷದ ಜನವರಿಯಲ್ಲಿ ಕೋಟ್‌ದ್ವಾರದ ವೃದ್ಧ ಮುಸ್ಲಿಂ ವ್ಯಾಪಾರಿಯೊಬ್ಬರ ಅಂಗಡಿಯ ಹೆಸರು ಬದಲಾಯಿಸುವಂತೆ ಸೃಷ್ಟಿಯಾಗಿದ್ದ ವಿವಾದದಲ್ಲಿ, ದೀಪಕ್ ಕುಮಾರ್ ಅವರು ವ್ಯಾಪಾರಿಯ ಪರವಾಗಿ ನಿಂತು ಪ್ರತಿಭಟನಾಕಾರರನ್ನು ಎದುರಿಸಿದ್ದರು. ಆ ವೇಳೆ ತಮ್ಮ ಹೆಸರನ್ನು ‘ಮೊಹಮ್ಮದ್ ದೀಪಕ್’ ಎಂದು ಕರೆದುಕೊಂಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.





Leave a comment