Home ಕ್ರೈಂ ನ್ಯೂಸ್ ನ್ಯಾಯಾಲಯದಲ್ಲಿ ಪ್ರೇಮಿಯ ಪರ ನಿಂತ ಮಗಳು: ಆಕ್ರೋಶಗೊಂಡ ತಾಯಿಯಿಂದ ಯುವಕನ ತಂದೆಗೆ ಗೂಸಾ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ನ್ಯಾಯಾಲಯದಲ್ಲಿ ಪ್ರೇಮಿಯ ಪರ ನಿಂತ ಮಗಳು: ಆಕ್ರೋಶಗೊಂಡ ತಾಯಿಯಿಂದ ಯುವಕನ ತಂದೆಗೆ ಗೂಸಾ!

Share
ನ್ಯಾಯಾಲಯ
Share

ಹಮೀರ್‌ಪುರ (ಉತ್ತರ ಪ್ರದೇಶ): ಯುವಕನೊಂದಿಗೆ ಓಡಿಹೋಗಿದ್ದ ಯುವತಿಯೊಬ್ಬಳು ನ್ಯಾಯಾಲಯದಲ್ಲಿ ಆತನೊಂದಿಗೇ ವಾಸಿಸಲು ಇಚ್ಛಿಸುವುದಾಗಿ ಹೇಳಿದ ಬಳಿಕ, ಆಕ್ರೋಶಗೊಂಡ ಆಕೆಯ ತಾಯಿ ಯುವಕನ ತಂದೆಗೆ ಕಪಾಳಮೋಕ್ಷ ಮಾಡಿ, ಕಾಲಿನಿಂದ ಒದ್ದು, ಚಪ್ಪಲಿಯಿಂದ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಲಭ್ಯವಿರುವ ಮಾಹಿತಿಯ ಪ್ರಕಾರ, ಯುವತಿಯು ಸೆಪ್ಟೆಂಬರ್ 20 ರಂದು ಕಾನ್ಪುರದ ಬಿತ್ತೂರ್‌ನ ಯುವಕನೊಂದಿಗೆ ಮನೆ ಬಿಟ್ಟು ಹೋಗಿದ್ದಳು. ಪೊಲೀಸರು ಬುಧವಾರ ಯುವತಿಯನ್ನು ಪತ್ತೆಹಚ್ಚಿ, ಗುರುವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಈ ವೇಳೆ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ ಯುವತಿಯು, “ನಾನು ಆ ಯುವಕನ ಜೊತೆಯೇ ಜೀವಿಸಲು ಬಯಸುತ್ತೇನೆ” ಎಂದು ತನ್ನ ಒಲವು ವ್ಯಕ್ತಪಡಿಸಿದ್ದಾಳೆ.

ಮಗಳ ಈ ಹೇಳಿಕೆಯಿಂದ ತೀವ್ರ ಕೋಪಗೊಂಡ ಯುವತಿಯ ತಾಯಿ, ಕೋರ್ಟ್ ಆವರಣದಲ್ಲಿದ್ದ ಯುವಕನ ತಂದೆಯ ಮೇಲೆ ಏಕಾಏಕಿ ದಾಳಿ ಮಾಡಿ, ಮನಬಂದಂತೆ ಥಳಿಸಿದ್ದಾರೆ. ಹಲ್ಲೆಯ ನಂತರ ಮಹಿಳೆಯು ಬೊಲೆರೊ ವಾಹನದಲ್ಲಿ ಅಲ್ಲಿಂದ ಪರಾರಿಯಾಗಿದ್ದಾಳೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಸರ್ಕಲ್ ಆಫೀಸರ್ ಯಶ್‌ಪಾಲ್ ಸಿಂಗ್, “ಘಟನೆಯ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ಇರಲಿಲ್ಲ ಮತ್ತು ಎರಡೂ ಕಡೆಯಿಂದ ಯಾವುದೇ ದೂರು ಸಲ್ಲಿಕೆಯಾಗಿಲ್ಲ. ಲಿಖಿತ ದೂರು ನೀಡಿದರೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles