SUDDIKSHANA KANNADA NEWS/ DAVANAGERE
DATE: 29-03-2023
ದಾವಣಗೆರೆ: ಒಳಮೀಸಲಾತಿಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದು ಖಂಡನೀಯ. 101 ಪರಿಶಿಷ್ಟ ಜಾತಿಗಳಲ್ಲಿ ಒಡಕು ಹಾಗೂ ಗೊಂದಲ ಸೃಷ್ಟಿ ಮಾಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಿದಂತಾಗಿದೆ ಎಂದು ಜಿಲ್ಲಾ ಬಂಜಾರ (BANJARA) ಸೇವಾ ಸಂಘ ಆರೋಪಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ಎಸ್. ನಂಜಾನಾಯ್ಕ್ ಮಾತನಾಡಿ, ಲಂಬಾಣಿ, ಬೋವಿ, ಕೊರಚ, ಕೊರಮ ಪರಿಶಿಷ್ಟ ಜಾತಿಗಳಿಗೆ ವರ್ಗೀಕರಿಸಿ ನೀಡಲಾದ ಶೇಕಡಾ 4.5 ಮೀಸಲಾತಿ ಪ್ರಮಾಣದಿಂದ ಈ ಜಾತಿಗಳಲ್ಲಿ ಆತಂಕ ಮನೆ ಮಾಡಿದೆ. ಈ ಜಾತಿಗಳಿಗೆ ಸಾಮಾಜಿಕ ನ್ಯಾಯ ನೀಡುವಲ್ಲಿ ಕಾನೂನು ಬಾಹಿರ ಹೆಜ್ಜೆ ಇಟ್ಟು ವಿಫಲವಾಗಿರುವ ಸರ್ಕಾರದ ನಡೆಗೆ ನಮ್ಮ ತೀವ್ರ ವಿರೋಧ ಇದೆ ಎಂದು ಹೇಳಿದರು.
ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಬಗ್ಗೆ ಯಾವುದೇ ನಿರ್ಣಯ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಅನೇಕ ಪ್ರಕರಣಗಳಲ್ಲಿ ಹೇಳಿದೆ. ಆದರೂ ತರಾತುರಿಯಲ್ಲಿ ಸಚಿವ ಮಾಧುಸ್ವಾಮಿ (MADHUSWAMI)
ನೇತೃತ್ವದಲ್ಲಿ ಉಪಸಮಿತಿ ರಚಿಸಿ, ಕ್ಯಾಬಿನೆಟ್ ನಲ್ಲಿ ಒಪ್ಪಿಗೆ ಪಡೆದು ರಾಜ್ಯ (STATE) ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿರುವುದನ್ನು ನೋಡಿದರೆ ಕೆಲ ಪರಿಶಿಷ್ಟ ಜಾತಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡೆ ಮೇಲೆ ಅನುಮಾನ
ಮೂಡುತ್ತಿದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ತರುವ ಬಗ್ಗೆ ಕಾನೂನು ತೊಡಕಿದ್ದರೂ ಉಪ ಸಮಿತಿ ರಚಿಸಿ ಮೀಸಲಾತಿಗಳ ಬಗ್ಗೆ ವಿಭಿನ್ನ ಗೊಂದಲ ಸೃಷ್ಟಿಸಲು ಮುಂದಾಗಿರುವುದು ಸರಿಯಲ್ಲ. ಈ ವರದಿ ತಿರಸ್ಕರಿಸದಿದ್ದಲ್ಲಿ ರಾಜ್ಯಾದ್ಯಂತ ಉಗ್ರ
ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈಗಾಗಲೇ ರಾಜ್ಯಾದ್ಯಂತ ಹೋರಾಟ ಪ್ರಾರಂಭವಾಗಿದೆ. ಹೋರಾಟ ಹತ್ತಿಕ್ಕುವ ನೆಪದಲ್ಲಿ ಬಂಜಾರ, ಮಹಿಳೆ, ಮಕ್ಕಳು ಸೇರಿದಂತೆ ಹಲವರ ಮೇಲೆ ಲಾಠಿ ಪ್ರಹಾರ ನಡೆಸಲಾಗಿದೆ. ಕ್ರಿಮಿನಲ್ ಪ್ರಕರಣ ದಾಖಲಿಸಿ (CRIMINAL CASE) ಜೈಲಿಗೆ ಕಳುಹಿಸಲಾಗುತ್ತಿದೆ. ಈ ಬಗ್ಗೆಮಾನವ ಹಕ್ಕುಗಳ ಆಯೋಗಕ್ಕೆ ಮಾಹಿತಿ ನೀಡಲಾಗುವುದು ಎಂದರು.
ಶಿಕಾರಿಪುರದಲ್ಲಿ ನಡೆದ ಪ್ರತಿಭಟನೆ ವೇಳೆ ನಡೆದ ಲಾಠಿ ಚಾರ್ಜ್ ಬಗ್ಗೆ ತನಿಖೆ ನಡೆಸಬೇಕು. ಕ್ರಿಮಿನಲ್ ಕೇಸ್ ಹಾಕಿ ಜೈಲಿಗೆ ಕಳುಹಿಸಿರುವವರ ಮೇಲೆ ದಾಖಲಿಸಿರುವ ಪ್ರಕರಣ ಕೂಡಲೇ ವಾಪಸ್ ಪಡೆದು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ವಕೀಲ ಕೆ. ಆರ್. ಮಲ್ಲೇಶನಾಯ್ಕ, ಕರುನಾಡ ಬಂಜಾರ ಸೇವಾ ಸೇನೆಯ ಅಧ್ಯಕ್ಷ ಲಕ್ಷ್ಮಣ್ ರಾಮಾವತ್ ಮತ್ತಿತರರು ಹಾಜರಿದ್ದರು.