ಅಹಮದಾಬಾದ್: ಅಕ್ರಮ ಮಾರ್ಗದ ಮೂಲಕ ಅಮೆರಿಕಾಗೆ ತೆರಳುವ ಆಸೆಯಿಂದ ಹೊರಟು, ಇಥಿಯೋಪಿಯಾದಲ್ಲಿ ಅಪಹರಣಕಾರರ ವಶದಲ್ಲಿದ್ದ ಗುಜರಾತ್‌ನ ಮೂವರು ಕೇಂದ್ರ ಸರ್ಕಾರದ ತೀವ್ರ ರಾಯಭಾರ ಹಾಗೂ ಪೊಲೀಸ್ ಇಲಾಖೆಯ ಸಕಾಲಿಕ ಮಧ್ಯಪ್ರವೇಶದಿಂದಾಗಿ ಯಾವುದೇ ಹಣ ನೀಡದೆ ಕ್ಷೇಮವಾಗಿ ತಾಯ್ನಾಡಿಗೆ ಮರಳಿದ್ದಾರೆ.
ಉತ್ತರ ಗುಜರಾತ್‌ನ ಮಹೇಸಾಣ ಜಿಲ್ಲೆಯ ವಡ್ಸ್ಮಾ ಗ್ರಾಮದ ರಿತ್ವಿಕ್ ಜಾನ್ಸಾರಿ, ಗೋಜಾರಿಯ ಮಮತಾ ಚಾವ್ಡಾ ಮತ್ತು ಗಾಂಧಿನಗರದ ಮಯೂರಿ ಎಂಬ ಮೂವರು ಸ್ಥಳೀಯ ಏಜೆಂಟ್ ಮೂಲಕ ಅಮೆರಿಕ ತಲುಪಲು ಸೆಪ್ಟೆಂಬರ್ 20 ರಂದು ಜೈಪುರದಿಂದ ಅಬುಧಾಬಿ ಮಾರ್ಗವಾಗಿ ಹೊರಟಿದ್ದರು. ಆದರೆ, ಏಜೆಂಟ್ ಹೇಳಿದಂತೆ ಕೆನಡಾ ತಲುಪಿಸುವ ಬದಲು ಇವರನ್ನು ಇಥಿಯೋಪಿಯಾ ರಾಜಧಾನಿ ಅಡಿಸ್ ಅಬಾಬಾದಲ್ಲಿ ಬಂದಿಸಿಡಲಾಗಿತ್ತು.
1 ಕೋಟಿ ರೂಪಾಯಿ ಕಪ್ಪಕ್ಕೆ ಬೇಡಿಕೆ:
ಬಂಧನದಲ್ಲಿದ್ದ ಯುವಕರನ್ನು ಬಿಡುಗಡೆ ಮಾಡಲು ಅಪಹರಣಕಾರರು ಕುಟುಂಬಸ್ಥರಿಗೆ ಕರೆ ಮಾಡಿ 1 ಕೋಟಿ ರೂಪಾಯಿ ಹಣ ನೀಡುವಂತೆ ಬೆದರಿಕೆ ಹಾಕಿದ್ದರು. ಇದರಿಂದ ಆತಂಕಗೊಂಡ ಕುಟುಂಬಸ್ಥರು ಕೂಡಲೇ ಮಹೇಸಾಣ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದರು.
ವಿದೇಶಾಂಗ ಸಚಿವಾಲಯದ ಕಾರ್ಯಾಚರಣೆ:
ಪ್ರಕರಣದ ಗಂಭೀರತೆಯನ್ನು ಅರಿತ ಮಹೇಸಾಣ ಪೊಲೀಸರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಜೊತೆ ನಿರಂತರ ಸಂಪರ್ಕ ಸಾಧಿಸಿ ಮಾತುಕತೆ ನಡೆಸಿದರು. ಭಾರತೀಯ ಹಿರಿಯ ಅಧಿಕಾರಿಗಳು ಅಪಹರಣಕಾರರೊಂದಿಗೆ ನೇರವಾಗಿ ಮಾತುಕತೆ ನಡೆಸಿ, ಕುಟುಂಬಸ್ಥರ ಆರ್ಥಿಕ ಪರಿಸ್ಥಿತಿ ಹಾಗೂ ಕಾನೂನು ಕ್ರಮಗಳ ಕುರಿತು ಎಚ್ಚರಿಕೆ ನೀಡುವ ಮೂಲಕ ರಾಜತಾಂತ್ರಿಕ ಒತ್ತಡ ಹೇರಿದರು. ಇದರ ಪರಿಣಾಮವಾಗಿ ಅಪಹರಣಕಾರರು ಯಾವುದೇ ಹಣ ಪಡೆಯದೇ ಮೂವರನ್ನು ಬಿಡುಗಡೆ ಮಾಡಲು ಒಪ್ಪಿಕೊಂಡರು.
ಮುಂಬೈ ವಿಮಾನ ನಿಲ್ದಾಣಕ್ಕೆ ಬಂದು ಇಳಿದ ಮೂವರನ್ನು ಕುಟುಂಬಸ್ಥರು ಕಾರಿನಲ್ಲಿ ಸ್ವಗ್ರಾಮ ವಡ್ಸ್ಮಾಗೆ ಕರೆತಂದಿದ್ದು, ಗ್ರಾಮದಲ್ಲಿ ಸಂಭ್ರಮಾಚರಣೆ ಮುಗಿಲುಮುಟ್ಟಿದೆ. ಯುವಕರು ಸುರಕ್ಷಿತವಾಗಿ ಮರಳಿದ್ದಕ್ಕೆ ಮಾತಾಜಿ ಹಾಗೂ ಸಾಧಿ ಮಾತಾ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.





Leave a comment