
SUDDIKSHANA KANNADA NEWS/ DAVANAGERE/ DATE:18-04-2025
ಹೈದರಾಬಾದ್: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ಪೆದಪಾಡು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಅನೇಕ ಗ್ರಾಮಸ್ಥರ ಬಳಿ ಪಾದರಕ್ಷೆಗಳಿಲ್ಲ ಎಂದು ಗಮನಿಸಿದ್ದಾರೆ. ಬಳಿಕ 350 ಮಂದಿಗೆ ಚಪ್ಪಲಿಗಳನ್ನು ವ್ಯವಸ್ಥೆ ಮಾಡಿದ್ದು ಎಲ್ಲರ ಗಮನ ಸೆಳೆದಿದೆ.


ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ಜನ ಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್, ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಹಳ್ಳಿಯೊಂದರಲ್ಲಿ ವೃದ್ಧ ಮಹಿಳೆಯರು ಸೇರಿದಂತೆ ಅನೇಕ ಜನರು ಬರಿಗಾಲಿನಲ್ಲಿ ನಡೆಯುವುದನ್ನು ಗಮನಿಸಿದ ನಂತರ, ಆ ಹಳ್ಳಿಯ ಎಲ್ಲಾ ನಿವಾಸಿಗಳಿಗೆ ಚಪ್ಪಲಿಗಳನ್ನು ಕಳುಹಿಸುವ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಅರಕು ಮತ್ತು ಡುಂಬ್ರಿಗುಡ ಪ್ರದೇಶಗಳಲ್ಲಿ ಇತ್ತೀಚೆಗೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದ ಪವನ್ ಕಲ್ಯಾಣ್, ಸ್ಥಳೀಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಎಎಸ್ಆರ್ನ ಡುಂಬ್ರಿಗುಡ ಮಂಡಲದ ಪೆದಪಾಡು ಗ್ರಾಮಕ್ಕೆ ಭೇಟಿ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ನಿವಾಸಿಗಳೊಂದಿಗೆ ಮಾತುಕತೆ ನಡೆಸುವಾಗ ಪಂಗಿ ಮಿಥು ಎಂಬ ವೃದ್ಧ ಮಹಿಳೆಯನ್ನು ಭೇಟಿಯಾದರು. ಆಕೆ ಪಾದರಕ್ಷೆ ಧರಿಸಿರಲಿಲ್ಲ. ಗ್ರಾಮದಲ್ಲಿ ಇನ್ನೂ ಹಲವರು ಬರಿಗಾಲಿನಲ್ಲಿ ಇರುವುದನ್ನು ಗಮನಿಸಿದರು.
ತೀವ್ರ ಭಾವುಕರಾದ ಪವನ್ ಕಲ್ಯಾಣ್ ತಕ್ಷಣವೇ ಗ್ರಾಮದ ಜನಸಂಖ್ಯೆಯ ಬಗ್ಗೆ ವಿಚಾರಿಸಿದರು. ಅಲ್ಲಿ ಸುಮಾರು 350 ಜನರು ವಾಸಿಸುತ್ತಿದ್ದಾರೆಂದು ತಿಳಿದ ನಂತರ, ಎಲ್ಲರಿಗೂ ಚಪ್ಪಲಿ ವ್ಯವಸ್ಥೆ ಮಾಡುವಂತೆ ತಮ್ಮ ಕಚೇರಿ ಸಿಬ್ಬಂದಿಗೆ ಸೂಚಿಸಿದರು. ಶೀಘ್ರದಲ್ಲೇ ಪಾದರಕ್ಷೆಗಳನ್ನು ತಲುಪಿಸಲಾಯಿತು. ಗ್ರಾಮದ ಎಲ್ಲಾ ನಿವಾಸಿಗಳಿಗೆ ವಿತರಿಸಲಾಯಿತು.
“ನಮ್ಮ ಪವನ್ ಸರ್ ಬಂದು ನಮ್ಮ ಹೋರಾಟಗಳನ್ನು ಗುರುತಿಸಿದರು” ಎಂದು ಅವರಲ್ಲಿ ಒಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದರು, ಈ ಮೊದಲು ಬೇರೆ ಯಾವುದೇ ನಾಯಕರು ಅವರನ್ನು ಭೇಟಿ ಮಾಡಿಲ್ಲ ಅಥವಾ ಅವರ ಸಮಸ್ಯೆಗಳನ್ನು ಕೇಳುವ ಗೋಜಿಗೆ ಹೋಗಿರಲಿಲ್ಲ ಎಂದು ಹೇಳಿದರು. ಭೇಟಿಗಾಗಿ ಇಡೀ ಡುಂಬ್ರಿಗುಡ ಮಂಡಲವು ಉಪಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸಿತು.