ಚೆನ್ನೈ/ತಿರುಪತಿ: ದೇಶ-ವಿದೇಶಗಳಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದ ಪ್ರಸಿದ್ಧ ಆಧ್ಯಾತ್ಮಿಕ ಗುರು ಹಾಗೂ ‘ಒನ್‌ನೆಸ್’ (Oneness) ಸಂಸ್ಥೆಯ ಸಂಸ್ಥಾಪಕ ವಿಜಯ್ ಕುಮಾರ್ ನಾಯ್ಡು, ಜನಪ್ರಿಯವಾಗಿ ‘ಕಲ್ಕಿ ಭಗವಾನ್’ (77), ಮಂಗಳವಾರ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
೧೯೪೯ ಮಾರ್ಚ್ ೭ ರಂದು ತಮಿಳುನಾಡಿನಲ್ಲಿ ಜನಿಸಿದ ವಿಜಯ್ ಕುಮಾರ್ ನಾಯ್ಡು, ಚೆನ್ನೈನ ಡಿ.ಜಿ. ವೈಷ್ಣವ್ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದ್ದರು. ಆರಂಭದಲ್ಲಿ ಭಾರತೀಯ ಜೀವ ವಿಮಾ ನಿಗಮದಲ್ಲಿ (LIC) ಗುಮಾಸ್ತರಾಗಿ ವೃತ್ತಿಜೀವನ ಆರಂಭಿಸಿದ್ದ ಅವರು, ನಂತರ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿ ಆಧ್ಯಾತ್ಮಿಕ ಕ್ಷೇತ್ರದತ್ತ ಮುಖ ಮಾಡಿದರು. ಮುಂದೆ ‘ಒನ್‌ನೆಸ್’ ಚಳವಳಿಯನ್ನು ಸ್ಥಾಪಿಸಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡರು.
ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ವರದಯ್ಯಪಾಲೆಂನಲ್ಲಿರುವ ಅವರ ‘ಏಕಂ’ / ಒನ್‌ನೆಸ್ ಆಶ್ರಮವು ಜಾಗತಿಕ ಆಧ್ಯಾತ್ಮಿಕ ಕೇಂದ್ರವಾಗಿ ಬೆಳೆಯಿತು. ‘ದೀಕ್ಷಾ’ (Oneness Blessing) ಹಾಗೂ ಧ್ಯಾನ ಕಾರ್ಯಕ್ರಮಗಳ ಮೂಲಕ ಅವರು ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಅಪಾರ ಭಕ್ತವೃಂದವನ್ನು ಸಂಪಾದಿಸಿದ್ದರು.
ಆಧ್ಯಾತ್ಮಿಕ ಬೋಧನೆಗಳ ಜೊತೆಗೆ ಉಚಿತ ಕಣ್ಣಿನ ಚಿಕಿತ್ಸೆ, ಕುಡಿಯುವ ನೀರಿನ ಯೋಜನೆಗಳು ಮತ್ತು ಶಿಕ್ಷಣದಂತಹ ಸಾಮಾಜಿಕ ಸೇವೆಗಳನ್ನೂ ಅವರ ಸಂಸ್ಥೆ ನಡೆಸಿಕೊಂಡು ಬಂದಿತ್ತು. ಆದರೆ, ೨೦೧೯ ರಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ಬೃಹತ್ ದಾಳಿಯ ಸಂದರ್ಭದಲ್ಲಿ ಇವರ ಆಶ್ರಮ ಹಾಗೂ ಸಂಸ್ಥೆಗಳ ಮೇಲೆ ಆರ್ಥಿಕ ಅಕ್ರಮದ ಆರೋಪಗಳು ಕೇಳಿಬಂದಿದ್ದವು. ಸಾಲಸೋಲ, ಜಮೀನು ವಿವಾದ ಹಾಗೂ ವಾಣಿಜ್ಯೀಕರಣದ ವಿವಾದಗಳ ನಡುವೆಯೂ ಅವರು ಭಾರತದ ಆಧ್ಯಾತ್ಮಿಕ ರಂಗದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿ ಉಳಿದಿದ್ದರು.
ಅವರ ಭೌತಿಕ ಶರೀರವನ್ನು ತಿರುಪತಿ ಜಿಲ್ಲೆಯ ಏಕಂ ಕ್ಷೇತ್ರದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗುತ್ತಿದ್ದು, ವಿಶ್ವದಾದ್ಯಂತ ಇರುವ ಅವರ ಭಕ್ತರು ಕಂಬನಿ ಮಿಡಿಯುತ್ತಿದ್ದಾರೆ.





Leave a comment