ದಾವಣಗೆರೆ: ಮಹಾನಗರಪಾಲಿಕೆಯಲ್ಲಿ ಪೌರಕಾರ್ಮಿಕರು ಹಾಗೂ ಸಿಬ್ಬಂದಿಯ ನೇರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈಗಾಗಲೇ 210 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ಮತ್ತೊಂದು ಹಂತದಲ್ಲಿ 210 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದರು.
ನಗರದ ಗಾಂಧಿನಗರದಲ್ಲಿ ಭಾನುವಾರ ಮಾದಿಗ ಸಮಾಜ ಹಾಗೂ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಹೃದಯಸ್ಪರ್ಶಿ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾನಗರಪಾಲಿಕೆಯ ಸುಮಾರು ೮೦೦ಕ್ಕೂ ಹೆಚ್ಚು ಸಿಬ್ಬಂದಿಯ ಪೈಕಿ ೪೦೦ಕ್ಕೂ ಹೆಚ್ಚು ಮಂದಿಗೆ ಯಾವುದೇ ಲೋಪದೋಷವಿಲ್ಲದೆ, ಪಾರದರ್ಶಕವಾಗಿ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಪೌರಕಾರ್ಮಿಕರ ಹುದ್ದೆಗಳ ಕಾಯಂಗೊಳಿಸುವ ಪ್ರಕ್ರಿಯೆ ಈ ಹಿಂದೆ ವಿಳಂಬವಾಗಿತ್ತು. ನಿರಂತರ ಹೋರಾಟ ಹಾಗೂ ಬೇಡಿಕೆಗಳ ಹಿನ್ನೆಲೆಯಲ್ಲಿ ಸುಮಾರು ೨೧೦ ಪೌರಕಾರ್ಮಿಕರ ಹುದ್ದೆಗಳನ್ನು ಕಾಯಂಗೊಳಿಸಲು ಅನುಮತಿ ದೊರೆತಿದೆ ಎಂದು ಹೇಳಿದರು.
ಇನ್ನುಳಿದ ಅರ್ಹ ಹಾಗೂ ಬಡ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ, ಹಂತ ಹಂತವಾಗಿ ಅವರಿಗೆ ಉದ್ಯೋಗಾವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
10 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ:
ಗಾಂಧಿನಗರದಲ್ಲಿ ಸುಮಾರು 10 ಕೋಟಿ ಅಂದಾಜು ವೆಚ್ಚದಲ್ಲಿ ಅತ್ಯಾಧುನಿಕ ಅಂಬೇಡ್ಕರ್ ಭವನ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಸೆಲ್ಲರ್ ಹಾಗೂ ಮೊದಲ ಮಹಡಿಯ ಕಾಮಗಾರಿ ಪೂರ್ಣಗೊಂಡ ಬಳಿಕ ಅಗತ್ಯವಿದ್ದಲ್ಲಿ ಹೆಚ್ಚುವರಿ ೫ರಿಂದ ೬ ಕೋಟಿ ಅನುದಾನ ತಂದು ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.
ಅಂಬೇಡ್ಕರ್ ಭವನವು ಸಮುದಾಯದ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಮಾಣವಾಗಬೇಕು ಎಂಬ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ ಎಂದರು.
ಒಗ್ಗಟ್ಟಿನಿಂದ ಸಮಾಜದ ಏಳಿಗೆಗೆ ಶ್ರಮಿಸಿ:
ಗಾಂಧಿನಗರದ ಎಲ್ಲ ಮುಖಂಡರು ಹಾಗೂ ಜನರು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಅರ್ಹ ಬಡವರಿಗೆ ಸರ್ಕಾರದ ಸೌಲಭ್ಯಗಳು ತಲುಪುವಂತೆ ನೋಡಿಕೊಳ್ಳಬೇಕು
ಎಂದು ಕರೆ ನೀಡಿದರು.
ಯುವಕರು ದುರಭ್ಯಾಸಗಳಿಂದ ದೂರವಿದ್ದು, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಹೆತ್ತವರಿಗೆ ಹಾಗೂ ಮನೆತನಕ್ಕೆ ಒಳ್ಳೆಯ ಹೆಸರು ತರುವ ರೀತಿಯಲ್ಲಿ ಬದುಕಬೇಕು ಎಂದು ಕಿವಿಮಾತು ಹೇಳಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಮುದಾಯದ ಹಿತ ಹಾಗೂ ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದೆಯೂ ಸಂಘಟಿತವಾಗಿ ಹೋರಾಟ ನಡೆಸುವ ಮೂಲಕ ಸಮುದಾಯದ
ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದರು.
ನಗರದ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಿದ ಅವರು, ಹೊರಭಾಗದಿಂದ ದಾವಣಗೆರೆಗೆ ಬರುವವರು ನಗರದ ರಸ್ತೆಗಳು, ನೀರು ಹಾಗೂ ಮೂಲಸೌಕರ್ಯಗಳನ್ನು ಗಮನಿಸಿ ಮೆಚ್ಚುವ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಬಸವಂತಪ್ಪ ಸೇವೆಗೆ ಸಚಿವ ಸ್ಥಾನ: ಮೆಚ್ಚುಗೆ
ಸಚಿವ ಕೆ.ಎಸ್. ಬಸವಂತಪ್ಪ ಅವರು ಹಲವು ವರ್ಷಗಳಿಂದ ಸಮಾಜ ಹಾಗೂ ಪಕ್ಷಕ್ಕಾಗಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಸಚಿವ ಸ್ಥಾನ ದೊರೆತಿದೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಬಸವಂತಪ್ಪ ಅವರು ತೋರಿದ ಮಾನವೀಯ ಸೇವೆಯನ್ನು ಸ್ಮರಿಸಿದ ಎಸ್.ಎಸ್.ಮಲ್ಲಿಕಾರ್ಜುನ್, ಸೂಕ್ತ ಸೌಲಭ್ಯಗಳ ಕೊರತೆಯಿದ್ದ ಕಠಿಣ ಸಂದರ್ಭದಲ್ಲಿ ರಾತ್ರಿ ವೇಳೆಯಲ್ಲೂ ಜನರ ನೆರವಿಗೆ ಧಾವಿಸಿ ಬಡ ಕುಟುಂಬಗಳಿಗೆ ಸಹಾಯ ಮಾಡಿದ್ದರು ಎಂದು ಹೇಳಿದರು.
ಅವರ ಸೇವಾ ಮನೋಭಾವಕ್ಕೆ ಸಾರ್ವಜನಿಕರ ಆಶೀರ್ವಾದ ದೊರೆತಿದ್ದು, ಇದೀಗ ಶಾಸಕರಾಗಿ ಹಾಗೂ ಸಚಿವರಾಗಿ ಜನಸೇವೆ ಮಾಡುವ ಅವಕಾಶ ಸಿಕ್ಕಿದೆ. ಕ್ಷೇತ್ರದ ಜನರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಾ ಎಲ್ಲರನ್ನೂ ಜೊತೆಗೆ ಕರೆದೊಯ್ದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರದ ಹಿರಿಯರು ಹಾಗೂ ಸ್ಥಳೀಯ ನಾಯಕರ ಮಾರ್ಗದರ್ಶನ ಪಡೆದು ಇಲಾಖೆಯಲ್ಲೂ ಉತ್ತಮ ಕೆಲಸ ಮಾಡುವ ಮೂಲಕ ಸಾರ್ವಜನಿಕರ ವಿಶ್ವಾಸವನ್ನು ಉಳಿಸಿಕೊಳ್ಳಲಿ ಎಂದು ಹಾರೈಸಿದರು.





Leave a comment