ದಾವಣಗೆರೆ: ಕಳೆದ ಚುನಾವಣೆಗಳಲ್ಲಿ ಕೆಲವು ಸಣ್ಣಪುಟ್ಟ ಲೋಪದೋಷಗಳು ಆಗಿವೆ. ನೀವು ನಮ್ಮನ್ನು ನಂಬಿ. ಗಾಂಧಿನಗರ ಭಾಗದಲ್ಲಿ ಮುಂಬರುವ ಚುನಾವಣೆಯಲ್ಲಿ ತಮಗೆ ಮತಗಳು ಕಡಿಮೆಯಾದರೆ ಅಂದೇ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಭಾವನಾತ್ಮಕವಾಗಿ ಸಚಿವ ಕೆ. ಎಸ್. ಬಸವಂತಪ್ಪ ಅವರು ಘೋಷಿಸಿದರು.
ನಗರದ ಗಾಂಧಿನಗರದಲ್ಲಿ ಭಾನುವಾರ ಮಾದಿಗ ಸಮಾಜ ಹಾಗೂ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಹೃದಯಸ್ಪರ್ಶಿ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಗಾಂಧಿನಗರದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಮುಖಂಡರು ಹಾಗೂ ಕಾರ್ಯಕರ್ತರು ಪರಸ್ಪರ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಚುನಾವಣಾ ಸಂದರ್ಭದಲ್ಲಿ ಹಿಂದೆ ಸಮುದಾಯ ಭವನ, ಶಾಲಾ ಆವರಣ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿರುವುದನ್ನು ನೆನಪಿಸಿಕೊಂಡ ಸಚಿವರು, ಮುಂದೆಯೂ ಅದೇ ಒಗ್ಗಟ್ಟು ಮುಂದುವರಿಯಬೇಕು ಎಂದು ಮನವಿ ಮಾಡಿದರು.
ಈ ಭಾಗದ ಮತ್ತು ನನ್ನ ಕರ್ಮಭೂಮಿ ಮಾಯಕೊಂಡ ಕ್ಷೇತದ ಜನರ ಪ್ರೀತಿ, ವಿಶ್ವಾಸ ಬೆಂಬಲದಿಂದಲೇ ನಾನು ಶಾಸಕನಾಗಿ ಈಗ ಸಚಿವನಾಗಲು ಸಾಧ್ಯವಾಗಿದೆ. ಇಲ್ಲಿನ ಜನರು ತಮ್ಮನ್ನು ಕುಟುಂಬದ ಸದಸ್ಯರಂತೆ ಪ್ರೀತಿಯಿಂದ ಕಂಡಿದ್ದಾರೆ. ‘ನನ್ನ ಸ್ವಂತ ಅಕ್ಕ-ತಂಗಿಯರಿಗಿಂತಲೂ ಹೆಚ್ಚಿನ ಪ್ರೀತಿಯನ್ನು ಗಾಂಧಿನಗರದ ಹೆಣ್ಣುಮಕ್ಕಳು ನೀಡಿದ್ದಾರೆ. ಈ ಪ್ರೀತಿ-ವಿಶ್ವಾಸವನ್ನು ಎಂದಿಗೂ ಮರೆಯುವುದಿಲ್ಲ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಈ ಹಿಂದೆ ಮಾಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಈಗ ಕೈಗೊಂಡಿರುವ ನೂರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗಳನ್ನು ಯಾರು ಮಾಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲೂ ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರ ಮಾರ್ಗದರ್ಶನದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿದ್ದಾರೆ. ಇದಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ ಎಂದು ತಿಳಿಸಿದರು.
ಗಾಂಧಿನಗರ ನನ್ನ ಜನ್ಮಭೂಮಿ, ಮಾಯಕೊಂಡ ನನ್ನ ಕರ್ಮಭೂಮಿ:
ಗಾಂಧಿನಗರದಲ್ಲಿ ಹುಟ್ಟಿ ಬೆಳೆದ ತಮಗೆ ಮಾಯಕೊಂಡ ಕ್ಷೇತ್ರ ಕರ್ಮಭೂಮಿಯಾಗಿದ್ದು, ಈ ಎರಡೂ ಪ್ರದೇಶಗಳ ಜನರ ಪ್ರೀತಿ, ವಿಶ್ವಾಸ ಹಾಗೂ ಸಹಕಾರವೇ ತಮ್ಮ ರಾಜಕೀಯ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ ಎಂದು ಭಾವನಾತ್ಮಕವಾಗಿ ಹೇಳಿದರು.
ತಮ್ಮ ರಾಜಕೀಯ ಜೀವನದಲ್ಲಿ ಮಾರ್ಗದರ್ಶನ ನೀಡಿದ ಹಿರಿಯರಾದ ಡಾ.ಶಾಮನೂರು ಶಿವಶಂಕರಪ್ಪ, ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಚ್.ಆಂಜನೇಯ ಅವರ ಮಾರ್ಗದರ್ಶನ ಮತ್ತು ಆಶೀರ್ವಾದಗಳನ್ನು ಸ್ಮರಿಸಿದ ಅವರು, ಹಿರಿಯರ ಪ್ರೋತ್ಸಾಹ ಹಾಗೂ ಜನರ ಬೆಂಬಲದಿಂದಲೇ ತಾವು ಈ ಹಂತಕ್ಕೆ ಬರಲು ಸಾಧ್ಯವಾಯಿತು ಎಂದರು.
ಆಸ್ತಿ, ಅಂತಸ್ತಿನಿಂದಲ್ಲ; ಜನರ ಪ್ರೀತಿಯಿಂದ ಬೆಂಬಲ
‘ನಾನು ಯಾವುದೇ ಆಸ್ತಿ-ಅಂತಸ್ತನ್ನು ನೀಡಿ ಜನರ ಬೆಂಬಲ ಪಡೆದುಕೊಂಡಿಲ್ಲ. ಜನರ ಸುಖ-ದುಃಖಗಳಲ್ಲಿ ಭಾಗಿಯಾಗಿ, ಅವರ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಇದೇ ಕಾರಣಕ್ಕೆ ಜನರು ನನ್ನ ಮೇಲೆ ಪ್ರೀತಿ ಮತ್ತು ವಿಶ್ವಾಸವಿಟ್ಟಿದ್ದಾರೆ’ ಎಂದು ಬಸವಂತಪ್ಪ ಹೇಳಿದರು.
ಚುನಾವಣಾ ಸಂದರ್ಭದಲ್ಲಿ ಎದುರಾದ ಸವಾಲುಗಳು, ಪಕ್ಷದ ಗೆಲುವಿಗಾಗಿ ಕಾರ್ಯಕರ್ತರೊಂದಿಗೆ ನಡೆಸಿದ ಹೋರಾಟ ಹಾಗೂ ಕ್ಷೇತ್ರದಲ್ಲಿ ಜನರಿಗಾಗಿ ದುಡಿದ ದಿನಗಳನ್ನು ಅವರು ನೆನಪಿಸಿಕೊಂಡರು.
ತಮಗೆ ದೊರೆತಿರುವ ಅಧಿಕಾರ ಮತ್ತು ಸ್ಥಾನಮಾನ ವೈಯಕ್ತಿಕ ಲಾಭಕ್ಕಾಗಿ ಅಲ್ಲ. ಮಾಯಕೊಂಡ ಕ್ಷೇತ್ರದ ಜನರ ಸೇವೆಗೆ ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದಾಗಿ ಅವರು ಭರವಸೆ ನೀಡಿದರು.
ಜನರ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದ ಸಚಿವರು, ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರ ಮಾರ್ಗದರ್ಶನದಲ್ಲಿ ಇನ್ನಷ್ಟು ಜನಪರ ಕೆಲಸಗಳನ್ನು ಕೈಗೊಳ್ಳುವುದಾಗಿ ಹೇಳಿದರು.
ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಉದ್ಘಾಟಿಸಿದರು. ಶಾಸಕರಾದ ಡಿ.ಜಿ.ಶಾಂತನಗೌಡ, ದೇವೇಂದ್ರಪ್ಪ, ಸಮರ್ಥ್ ಶಾಮನೂರು, ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇಬ್ರಾಹಿಂ ಕಲಿಲೂಲ್ಲಾ, ತೇಜಸ್ವಿ ಪಟೇಲ್, ಡಿ.ಬಸವರಾಜ್, ಅಯೂಬ್ ಪೈಲ್ವಾನ್, ಮುದೇಗೌಡ್ರು ಗಿರೀಶ್, ನಿಂಗಪ್ಪ, ಹನುಮಂತಪ್ಪ, ಎಲ್. ಡಿ. ಗೋಣೆಪ್ಪ, ಎಸ್.ಮಲ್ಲಿಕಾರ್ಜುನ್, ಎಚ್.ಸಿ.ಗುಡ್ಡಪ್ಪ, ಬಾತಿ ಶಿವಮೂರ್ತಿ, ಎಂ.ಹಾಲೇಶಪ್ಪ, ನಂದಿಗಾವಿ ಶ್ರೀನಿವಾಸ್ ಇನ್ನಿತರರಿದ್ದರು.





Leave a comment