ದಾವಣಗೆರೆ: ‘ಪೌರಕಾರ್ಮಿಕರ ನೇಮಕಾತಿ ಪ್ರಕ್ರಿಯೆಯಲ್ಲಿ ವಂಚನೆ ನಡೆಯುತ್ತಿದೆ. ಈ ಕ್ಷಣದವರೆಗೂ ಅದು ನಡೆಯುತ್ತಿದೆ. ಈ ಬಗ್ಗೆ ನಿಮಗೆ ತಪ್ಪು ಮಾಹಿತಿ ನೀಡುವ ಮೂಲಕ ನಿಮಗೆ ಕೆಟ್ಟ ಹೆಸರು ತರುವ ಕೆಲಸ ನಡೆಯುತ್ತಿದೆ. ಈ ವಿಷಯದ ಬಗ್ಗೆ ಗಮನ ಹರಿಸಬೇಕು. ಬೇಕೆಂದರೆ ನಿಮ್ಮ ಕಾಲಿಗೆ ಬಿದ್ದು ಮನವಿ ಮಾಡುತ್ತೇನೆ’ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಬಸವಂತಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಮನವಿ ಮಾಡಿದರು.
ನಗರದ ಗಾಂಧಿನಗರದಲ್ಲಿ ಭಾನುವಾರ ಮಾದಿಗ ಸಮಾಜ ಹಾಗೂ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಹೃದಯಸ್ಪರ್ಶಿ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ದಾವಣಗೆರೆ ಮಹಾನಗರಪಾಲಿಕೆಯ ಪೌರಕಾರ್ಮಿಕರ ನೇಮಕಾತಿ ಪ್ರಕ್ರಿಯೆಯಲ್ಲಿ ವಂಚನೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ‘ಕೆಲವರು ನೀಡುವ ತಪ್ಪು ಮಾಹಿತಿಗಳಿಂದ ಗೊಂದಲಕ್ಕೆ ಒಳಗಾಗಬೇಡಿ. ನಾವೆಲ್ಲರೂ ನಿಮ್ಮೊಂದಿಗಿದ್ದೇವೆ. ಸಾಯುವವರೆಗೂ ನಿಮ್ಮ ಪರವಾಗಿಯೇ ಇರುತ್ತೇವೆ’. ನೊಂದ ಪೌರಕಾರ್ಮಿಕರಿಗೆ ನ್ಯಾಯ ಸಿಗಬೇಕು. ಈ ಕೆಲಸ ನೀವು ಮಾಡಬೇಕೆಂದು ಎಸ್.ಎಸ್.ಮಲ್ಲಿಕಾರ್ಜುನ್ ಅವರಲ್ಲಿ ಮನವಿ ಮಾಡಿದರು.
ಇತ್ತೀಚೆಗೆ ನಡೆದ ಪೌರಕಾರ್ಮಿಕರ ರಾಜ್ಯಮಟ್ಟದ ಸಮಾವೇಶದಲ್ಲಿ ಮುಖ್ಯಮಂತ್ರಿ ಉಪಸಮಿತಿ ರಚನೆಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದ ಬಸವಂತಪ್ಪ, ಪೌರಕಾರ್ಮಿಕರ ವ್ಯಾಪ್ತಿಗೆ ಚಾಲಕರು, ನೀರು ಸರಬರಾಜು ಸಿಬ್ಬಂದಿ, ಯುಜಿಡಿ ಕಾರ್ಮಿಕರು ಹಾಗೂ ಸ್ಮಶಾನ ಕಾಯುವವರನ್ನು ಸೇರಿಸುವ ನಿಟ್ಟಿನಲ್ಲಿ ತಾವು ಸಕ್ರಿಯವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.





Leave a comment