
SUDDIKSHANA KANNADA NEWS/ DAVANAGERE/ DATE:08-04-2025
ದಾವಣಗೆರೆ: ಸರ್ಕಾರಗಳೇ ಸರ್ಕಾರಿ ಶಾಲೆಗಳನ್ನು ಸಾಯಿಸುತ್ತಿವೆ. ಕಣ್ಮುಂದೆ ನಡೆಯುತ್ತಿರುವ ಕ್ರೈಂ ಹಾಗೂ ದುರಂತ. ವಿದ್ಯಾವಂತರು ರಾಜಕಾರಣಕ್ಕೆ ಬರಬೇಕು. ವಿದ್ಯಾವಂತರು, ಪ್ರಜ್ಞಾವಂತ ಯುವಕ, ಯುವತಿಯರು ರಾಜಕೀಯಕ್ಕೆ ಬನ್ನಿ. ಅವಕಾಶ ಸಿಗಲಿಲ್ಲ ಎಂದು ಕೊರಗುವುದು ಬೇಡ. ಅವಕಾಶ ಸಿಗದಿದ್ದರೆ ಹಿಂದೆ ಸರಿಯಬೇಡಿ. ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕು. ಇಲ್ಲದಿದ್ದರೆ ಸದಾ ಶೋಷಿತರಾಗುತ್ತವೆ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಕರೆ ನೀಡಿದರು.


ಹರಪನಹಳ್ಳಿ ತಾಲೂಕಿನ ರಾಗಿಮಸಲವಾಡ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ಸ್ನೇಹ ಬಳಗ ನವ ತರುಣ ನಾಟ್ಯ ಕಲಾ ಸಂಘವು ಆಂಜನೇಯ ಸ್ವಾಮಿ ರಥೋತ್ಸವದ ಪ್ರಯುಕ್ತ ಕಲಿಯುಗದಲ್ಲಿ ಘರ್ಜಿಸಿದ ಕರ್ಣಾಜುನ ನಾಟಕ ವೇದಿಕೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶಿಕ್ಷಣದ ಕ್ರಾಂತಿ ಆಗಬೇಕೆಂದು ರಾಜ್ಯಾದ್ಯಂತ ಓಡಾಡುತ್ತಿದ್ದೇನೆ. ಹಳ್ಳಿ ಮಕ್ಕಳು ಅಡ್ಡದಾರಿ ಹಿಡಿಯಬಾರದು. ಗ್ರಾಮೀಣ ಪ್ರದೇಶದ ಮಕ್ಕಳು ಐಎಎಸ್, ಐಪಿಎಸ್ ಅಧಿಕಾರಿಗಳು ಆಗಬೇಕು. ಸರ್ಕಾರಿ ಶಾಲೆಗಳು ಉದ್ದಾರ ಆಗಬೇಕು. ಇಲ್ಲಿ ಓದಿದವರು ಸಬ್ ಇನ್ ಸ್ಪೆಕ್ಟರ್, ತಹಶೀಲ್ದಾರ್, ಎಸಿ, ಐಎಎಸ್, ಕೆಎಎಸ್ ಅಧಿಕಾರಿಗಳಬೇಕು ಎಂಬ ಕನಸು ನನ್ನದು. ಸರ್ಕಾರಿ ಶಾಲೆಗಳು ಸತ್ತು ಹೋದರೆ ಕನ್ನಡವೇ ಸತ್ತು ಹೋಗುತ್ತವೆ. ಕನ್ನಡ ಭಾಷೆ ಸತ್ತು ಹೋದರೆ ಇಂಥ ನಾಟಕಗಳನ್ನು ನೋಡಲು ಸಾಧ್ಯವಿಲ್ಲ ಎಂದು ಹೇಳಿದರು.
ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಅನಿವಾರ್ಯ ಕಾರಣಗಳಿಂದ ಸ್ಪರ್ಧೆ ಮಾಡಿದ್ದೆ. ನೀವೆಲ್ಲರೂ ಸಹಕಾರ ನೀಡಿದ್ದೀರಿ. ಪ್ರೀತಿ, ವಿಶ್ವಾಸ ಕೊಟ್ಟಿದ್ದೀರಾ. ಅದನ್ನು ಮರೆಯಲು ಸಾಧ್ಯವೇ ಇಲ್ಲ. ನಾನು ಜಗಳೂರು
ಮತ್ತು ಹರಪನಹಳ್ಳಿಯಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಆದರೂ ಜನರು ಪ್ರೀತಿ ತೋರಿ ಆಹ್ವಾನ ನೀಡುತ್ತಿದ್ದಾರೆ. ಹಾಗಾಗಿ ಬಂದಿದ್ದೇನೆ. ಹೊನ್ನಾಳಿ ಮತ್ತು ಹರಿಹರದಲ್ಲಿ ಓಡಾಡುತ್ತಿದ್ದೇನೆ. ಆಂಜನೇಯ ಸ್ವಾಮಿ
ಆಶೀರ್ವಾದ ಏನು ಸಿಗುತ್ತೋ ಮುಂದಿನ ದಿನಗಳಲ್ಲಿ ನೋಡಬೇಕಿದೆ ಎಂದು ತಿಳಿಸಿದರು.
ಇನ್ ಸೈಟ್ಸ್ ಐಎಎಸ್ ಸಂಸ್ಥೆಯಲ್ಲಿ ಸುಮಾರು ಒಂದೂವರೆ ಸಾವಿರ ವಿದ್ಯಾರ್ಥಿಗಳು ಐಎಎಸ್ ಓದಿ ಈಗ ಉನ್ನತ ಅಧಿಕಾರಿಗಳಾಗಿದ್ದಾರೆ. ಇದು ಖುಷಿಯ ವಿಚಾರ. ನಿಮ್ಮ ಮಕ್ಕಳನ್ನೂ ಅಧಿಕಾರಿಗಳನ್ನಾಗಿಸಿ. ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಎಂದು ಸಲಹೆ ನೀಡಿದರು.
ವೇದಿಕೆ ನೀಡದಿದ್ದರೆ ಯಾರೂ ಪರಿಚಯವಾಗಲ್ಲ. ವೇದಿಕೆ ಸೃಷ್ಟಿಸಿದರೆ ಯುವಕರಿಗೆ ಅವಕಾಶ ಸಿಗುತ್ತದೆ. ಹರಪನಹಳ್ಳಿ ತಾಲೂಕಿನಲ್ಲಿ ಪ್ರಜ್ಞಾವಂತರು, ಹೋರಾಟಗಾರರಿಗೆ ಇದುವರೆಗೆ ಅವಕಾಶ ಸಿಕ್ಕಿಲ್ಲ. ಇಂಥವರಿಗೆ ಅವಕಾಶ ಕೊಟ್ಟರೆ ನಿಮಗೆ ಒಳ್ಳೆಯದು ಮಾಡುತ್ತಾರೆ ಎಂಬುದು ನನ್ನ ಅಭಿಪ್ರಾಯ ಎಂದು ತಿಳಿಸಿದರು.
ಈ ವೇಳೆ ರಾಗಿಮಸಲವಾಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ. ಶೇಖರ್ ಗೌಡ, ಸುರೇಶ್ ಸೊಕ್ಕೆ, ಶಂಭುಲಿಂಗಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಚ್. ಜಯಮ್ಮ, ಸದಸ್ಯ ಸೋಮಪ್ಪ, ಮಂಜುನಾಥ್, ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಕಾರ್ಯದರ್ಶಿ ಎನ್. ಎಸ್. ರವಿಕುಮಾರ್, ಗ್ರಾಮದ ಹಿರಿಯರಾದ ಮಲ್ಕಪ್ಪ, ಡಿ ಮೈಲಪ್ಪ, ಮಾಜಿ ಸೈನಿಕರು ನಿರಂಜನ್, ಸಿಜಿ ಚಿಕ್ಕಗೌಡ್ರು, ದೊಡ್ಡೇಶ್, ದೊಡ್ಮನಿ ಮಾಂತೇಶಪ್ಪ ಮತ್ತಿತರರು ಹಾಜರಿದ್ದರು.