ಬೆಂಗಳೂರು: “ಬರಗಾಲದ ಪರಿಸ್ಥಿತಿಯಲ್ಲಿ ನಾವು ರೈತರನ್ನು ಬದುಕಿಸಬೇಕು. ಕೇಂದ್ರ ಸರ್ಕಾರ ಕೈಗಾರಿಕೋದ್ಯಮಿಗಳಿಗೆ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡಿದಂತೆ ರೈತರ ಸಾಲವನ್ನು ಮನ್ನಾ ಮಾಡಲಿ. ನಮ್ಮ ರಾಜ್ಯದ ಪಾಲನ್ನು ಭರಿಸಲು ಸಿದ್ಧರಿದ್ದೇವೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಘೋಷಿಸಿದರು.
ವಿಧಾನಮಂಡಲದ ಉಭಯ ಸದನಗಳಲ್ಲಿ ಬರದ ವಿಚಾರವಾಗಿ ನಡೆದ ವಿಶೇಷ ಚರ್ಚೆ ಬಳಿಕ ಸಿಎಂ ಡಿ ಕೆ ಶಿವಕುಮಾರ್ ಅವರು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರ ಮಾತುಗಳಿಗೆ ಉತ್ತರ ನೀಡಿದರು.
“ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ರೈತರ ಸಾಲಮನ್ನಾ ಬಗ್ಗೆ ಸದನದಲ್ಲಿ ಚರ್ಚೆ ನಡೆದಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಸಾಲ ಮನ್ನಾ ಮಾಡಿದ್ದಾರೆ. ನಮ್ಮ ಬೆಂಬಲಿತ ಸರ್ಕಾರದಲ್ಲಿ ಕುಮಾರಸ್ವಾಮಿ ಅವರು ಸಾಲ ಮನ್ನಾ ಮಾಡಿದ್ದಾರೆ. 80 ಶಾಸಕರ ಸಂಖ್ಯಾಬಲವಿದ್ದ ನಾವು ಬೆಂಬಲ ನೀಡದೇ ಇದ್ದಿದ್ದರೆ 38 ಶಾಸಕರ ಬೆಂಬಲವಿದ್ದ ಕುಮಾರಸ್ವಾಮಿ ಅವರು ಸಾಲ ಮನ್ನಾ ಮಾಡಲು ಆಗುತ್ತಿತ್ತೇ?” ಎಂದು ಪ್ರಶ್ನಿಸಿದರು.
ರೈತರಿಗಾಗಿ ಎಲ್ಲಾ ಕಾರ್ಯಕ್ರಮ ನಿಲ್ಲಿಸೋಣ
“ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅವರು ಸಾಲ ಮನ್ನಾ ಮಾಡಿದರು. ನೀವೆಲ್ಲರೂ ಸರ್ವಪಕ್ಷ ನಿಯೋಗದಲ್ಲಿ ಬರುವುದಾಗಿ ತಿಳಿಸಿದ್ದೀರಿ. ನಾವೆಲ್ಲರೂ ಒಟ್ಟಾಗಿ ಹೋಗೋಣ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಅವರನ್ನು ಬೇಡಿಕೊಳ್ಳೋಣ. ಕೇಂದ್ರ ಕೈಗಾರಿಕೋದ್ಯಮಿಗಳಿಗೆ ಲಕ್ಷಾಂತರ ಕೋಟಿ ಸಾಲ ಮಾಡಿದ್ದು, ರೈತರ ಸಾಲವನ್ನು ಮನ್ನಾ ಮಾಡಲಿ. ಬೇಕಿದ್ದರೆ ಎಲ್ಲಾ ಕಾರ್ಯಕ್ರಮ ನಿಲ್ಲಿಸಿ ರೈತರಿಗಾಗಿ ಈ ತೀರ್ಮಾನ ಮಾಡುತ್ತೇನೆ. 50:50, 60:40, 70:30 ಯಾವ ಸೂತ್ರಕ್ಕಾದರೂ ಸರಿ ನಮಗೆ ಕೇಂದ್ರ ಸರ್ಕಾರದಿಂದ ಏನಾದರೂ ಕೊಡಿಸಿ” ಎಂದು ವಿರೋಧ ಪಕ್ಷದ ನಾಯಕರಿಗೆ ಆಗ್ರಹಿಸಿದರು.
ಒಕ್ಕೂಟ ವ್ಯವಸ್ಥೆಯಲ್ಲಿ ಕೋರ್ಟ್ ಮೂಲಕ ಪರಿಹಾರ ಪಡೆದ ಇತಿಹಾಸ ಕರ್ನಾಟಕದ್ದು
“ಕಳೆದ ಬಾರಿ ನಾವು ಕೋರ್ಟ್ ಮೆಟ್ಟಿಲೇರಿ 3 ಸಾವಿರ ಕೋಟಿ ಪರಿಹಾರ ಪಡೆದಿದ್ದೇವೆ. ಒಕ್ಕೂಟ ವ್ಯವಸ್ಥೆಯಲ್ಲಿ ಒಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಪರಿಹಾರ ಪಡೆಸೇರುವುದು ಕೂಡ ಇತಿಹಾಸ. ಆ ಸಂದರ್ಭದಲ್ಲಿ ಒಬ್ಬ ಸಂಸದ ಪ್ರಧಾನಮಂತ್ರಿಗಳ ಮುಂದೆ ಹೋಗಿ ಬಾಯಿ ಬಿಡಲಿಲ್ಲ. ಈಗ ನಮ್ಮ ವಿರೋಧ ಪಕ್ಷದ ನಾಯಕರು ಪ್ರಧಾನಮಂತ್ರಿಗಳ ಭೇಟಿಗೆ ನಾನು ಬರುತ್ತೇನೆ ಎಂದು ಹೇಳಿದ್ದು, ಅವರಿಗೆ ಅಭಿನಂದನೆ, ನಮನ ಸಲ್ಲಿಸುತ್ತೇನೆ. ಅವರು ಈ ಮಾತು ಹೇಳಿದ ಕೂಡಲೇ ನಾನು ಪ್ರಧಾನಮಂತ್ರಿಗಳಿಗೆ ಸಮಯಾವಕಾಶ ಕೋರಿ ಪತ್ರ ಬರೆಯಲಿದ್ದೇನೆ. ನಾನು ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡುವೆ, ಅವರು ಅವರ ಸಂಬಂಧದಲ್ಲಿ ಕಾಲಾವಕಾಶ ಕೋರಲಿ. ಈ ವಿಚಾರದಲ್ಲಿ ನಾನು ರಾಜಕಾರಣ ಮಾಡುವುದಿಲ್ಲ. ಅವರಿಗೆ ಕೊಡಬೇಕಾದ ಗೌರವ ಕೊಡುತ್ತೇನೆ” ಎಂದು ಭರವಸೆ ನೀಡಿದರು.
ಅಭಿವೃದ್ಧಿ ಕೆಲಸಕ್ಕೂ ಮತಕ್ಕೂ ವ್ಯತ್ಯಾಸವಿದೆ
“ನಾವು ಕೆಲಸ ಮಾಡಿದವರೆಲ್ಲಾ ನಮಗೆ ಮತ ಹಾಕುವುದಿಲ್ಲ. 1.36 ಕೋಟಿ ಜನ ನಮಗೆ ಮತಹಾಕಿದ್ದಾರೆ, ನಾವು 1.60 ಕೋಟಿ ಮನೆಗಳಿಗೆ ಉಚಿತ ವಿದ್ಯುತ್, 4.40 ಕೋಟಿ ಜನರಿಗೆ 10 ಕೆ.ಜಿ ಅಕ್ಕಿ ನೀಡುತ್ತಿದ್ದೇವೆ. 1.21 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ನೀಡಿದ್ದೇವೆ. ಅವರೆಲ್ಲರೂ ನಮಗೆ ಮತ ಹಾಕುತ್ತಾರಾ? ಮಂಗಳೂರು, ಉಡುಪಿಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಲ್ಲ. ಆದರೂ ನಾವು ಈ ರಾಜ್ಯದ ಮಹಿಳೆಯರನ್ನು ನಮ್ಮ ತಾಯಂದಿರು ಎಂದು ಭಾವಿಸಿ ಎಲ್ಲರಿಗೂ ಯೋಜನೆ ನೀಡುತ್ತಿದ್ದೇವೆ. ಆದರೆ ಅಸ್ಸಾಂ ರಾಜ್ಯದಲ್ಲಿ ನೀವು ಆ ಪಕ್ಷಕ್ಕೆ ಮತ ಹಾಕಿದ್ದರೆ ಮಾತ್ರ ನಿಮಗೆ ಯೋಜನೆ. ನಾವು ಆ ರೀತಿ ಮಾಡುವುದಿಲ್ಲ. ಹೀಗಾಗಿ ಮತಕ್ಕೂ ಅಭಿವೃದ್ಧಿ ಕೆಲಸಕ್ಕೂ ವ್ಯತ್ಯಾಸವಿದೆ” ಎಂದು ವಿವರಿಸಿದರು.
- Centre State Debt Relief
- DK Shivakumar Assembly Speech
- Farm Loan Waiver
- Guarantee Schemes Karnataka
- Karnataka All Party Delegation
- Karnataka Drought Relief
- Karnataka Farmers Crisis
- R Ashoka
- ಆರ್ ಅಶೋಕ್
- ಕರ್ನಾಟಕ ಗ್ಯಾರಂಟಿ ಯೋಜನೆಗಳು
- ಕರ್ನಾಟಕ ಬರಗಾಲ
- ಕರ್ನಾಟಕ ಸುದ್ದಿಗಳು
- ಕೇಂದ್ರ ಸರ್ಕಾರ ಪರಿಹಾರ
- ಡಿ. ಕೆ. ಶಿವಕುಮಾರ್
- ದಸರಾ ಉದ್ಘಾಟನೆ
- ರೈತರ ಸಾಲ ಮನ್ನಾ
- ವಿಧಾನಸೌಧ ಚರ್ಚೆ
- ಸರ್ವಪಕ್ಷ ನಿಯೋಗ





Leave a comment