Home ದಾವಣಗೆರೆ “ಜ್ಞಾನ, ಶಿಕ್ಷಣ, ಸಮಾಜ ಸೇವೆಯಲ್ಲಿ ತರಳಬಾಳು ಮಠ ಶ್ರೇಷ್ಠ”: ಸಿರಿಗೆರೆಯಲ್ಲಿ ಡಿ.ಕೆ. ಶಿವಕುಮಾರ್ ಪ್ರಶಂಸೆ
ದಾವಣಗೆರೆನವದೆಹಲಿಬೆಂಗಳೂರು

“ಜ್ಞಾನ, ಶಿಕ್ಷಣ, ಸಮಾಜ ಸೇವೆಯಲ್ಲಿ ತರಳಬಾಳು ಮಠ ಶ್ರೇಷ್ಠ”: ಸಿರಿಗೆರೆಯಲ್ಲಿ ಡಿ.ಕೆ. ಶಿವಕುಮಾರ್ ಪ್ರಶಂಸೆ

Share
ಸಿರಿಗೆರೆ
Share

ಚಿತ್ರದುರ್ಗ: “ಎಲ್ಲ ಮಠಗಳೂ ಶ್ರೇಷ್ಠವಾದವು. ಆದರೆ ಧರ್ಮದ ಜತೆಗೆ ಜ್ಞಾನ, ಶಿಕ್ಷಣ, ಸಮಾಜ ಸೇವೆಯ ಮೂಲಕ ತರಳಬಾಳು ಮಠ ವಿಶೇಷ ಸ್ಥಾನ ಪಡೆದಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಸಿರಿಗೆರೆಯ ಬೃಹನ್ಮಠದಲ್ಲಿ ಗುರುವಾರ ನಡೆದ ತರಳಬಾಳು ಜಗದ್ಗುರು ಶ್ರೀ 1108 ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 35ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಮಾತನಾಡಿದಲ್ಲಿ ಶಿವಕುಮಾರ್ ಅವರು ಮಾತನಾಡಿದರು.

“ಮಾನವಕುಲದ ಬದುಕಿಗೆ ಬೆಳಕು, ನ್ಯಾಯ ಮತ್ತು ನೀರು ಅತ್ಯಂತ ಅಗತ್ಯ. ಈ ಮೂರು ಅಂಶಗಳನ್ನೇ ತರಳಬಾಳು ಜಗದ್ಗುರುಗಳು ತಮ್ಮ ಮಾರ್ಗದರ್ಶನದ ಮೂಲಕ ಸಮಾಜಕ್ಕೆ ಸಾರಿದ್ದಾರೆ. ಬುದ್ಧ ಪ್ರೀತಿ ಮತ್ತು ಶಾಂತಿಯ ಸಂದೇಶ ನೀಡಿದರು. ಧರ್ಮರಾಯ ಧರ್ಮದ ಮಾರ್ಗ ತೋರಿಸಿದರು. ದುರ್ಯೋಧನ ಛಲದ ಮಹತ್ವ ಸಾರಿದರೆ, ಏಕಲವ್ಯ ಮತ್ತು ಅರ್ಜುನ ಗುರಿಯ ಮಹತ್ವದ ಅಂಶವನ್ನು ತೋರಿದರು. ಕೃಷ್ಣ ಸಮದರ್ಶನ ಹಾಗೂ ತಂತ್ರಗಾರಿಕೆಯ ಪಾಠ ಕಲಿಸಿದರು. ಭೀಷ್ಮ ಪ್ರತಿಜ್ಞೆಯ ಮಹತ್ವ ಸಾರಿದರು. ಶಬರಿ ಭಕ್ತಿಯ ಶಕ್ತಿಯನ್ನು ತೋರಿಸಿದರು. ಆದರೆ ತರಳಬಾಳು ಶ್ರೀಗಳು ಬೆಳಕು, ನ್ಯಾಯ ಮತ್ತು ನೀರು ಮಾನವಕುಲಕ್ಕೆ ಅಗತ್ಯವೆಂಬ ವಿಶಿಷ್ಟ ಸಂದೇಶ ನೀಡಿದ್ದಾರೆ” ಎಂದು ಹೇಳಿದರು.

ಮಾನವೀಯತೆ ಎಲ್ಲ ಧರ್ಮಗಳ ಸಾರ

“ಭದ್ರಾವತಿಯಲ್ಲಿ ನಡೆದ ಹುಣ್ಣಿಮೆ ಕಾರ್ಯಕ್ರಮದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ತರಳಬಾಳು ಜಗದ್ಗುರುಗಳ ಸರ್ವಧರ್ಮ ಸಮಭಾವದ ಸಂದೇಶವನ್ನು ಸ್ಮರಿಸಿದರು. ಇಸ್ಲಾಂ ಧರ್ಮದಿಂದ ಸಮಾನತೆಯ ಪಾಠ ಕಲಿಯಬೇಕು. ಮಸೀದಿಯಲ್ಲಿ ಪ್ರಾರ್ಥನೆ ಮಾಡುವಾಗ ರಾಜನಾಗಲಿ, ಭಿಕ್ಷುಕನಾಗಲಿ ಎಲ್ಲರೂ ಒಂದೇ ಎಂಬ ಸಂದೇಶವಿದೆ. ಕ್ರೈಸ್ತ ಧರ್ಮದಿಂದ ಶಿಸ್ತು ಕಲಿಯಬೇಕು. ಪ್ರಾರ್ಥನೆ, ಸಮಯ ಮತ್ತು ಆಚರಣೆಯಲ್ಲಿ ಶಿಸ್ತಿನ ಮಹತ್ವವಿದೆ. ಎಲ್ಲ ಧರ್ಮಗಳೂ ಅಂತಿಮವಾಗಿ ಮಾನವೀಯತೆಯ ಒಂದೇ ವಿಶ್ವಧರ್ಮದಲ್ಲಿ ಐಕ್ಯವಾಗಬೇಕು ಎಂಬ ಆಶಯವನ್ನು ಶ್ರೀಗಳು ವ್ಯಕ್ತಪಡಿಸಿದ್ದಾರೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂದು ಜಗದ್ಗುರು ಶ್ರೀ ವೀರಗಂಗಾಧರ ಅಜ್ಜಯ್ಯನವರು ಸಂದೇಶ ಸಾರಿದ್ದಾರೆ. ಇಂತಹ ಮಹನೀಯರ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ” ಎಂದರು.

ಧರ್ಮದಿಂದ ದೂರವಾಗಲು ಯಾರಿಗೂ ಸಾಧ್ಯವಿಲ್ಲ

“ಮಾನವನು ಹುಟ್ಟುವಾಗ ಯಾವ ಜಾತಿ, ಯಾವ ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟುವುದಿಲ್ಲ. ಆದರೆ ಹುಟ್ಟಿನಿಂದ ಸಾವಿನವರೆಗಿನ ಜೀವನದಲ್ಲಿ ಧರ್ಮ ಮತ್ತು ಸಂಸ್ಕೃತಿಯ ಆಚರಣೆಗಳು ಒಂದಲ್ಲ ಒಂದು ರೀತಿಯಲ್ಲಿ ಬೆಸೆದುಕೊಂಡಿರುತ್ತವೆ. ನಾಮಕರಣದಿಂದ ಆರಂಭವಾಗಿ ವಿವಿಧ ಸಂಸ್ಕಾರಗಳು, ವಿವಾಹದ ಆಚರಣೆಗಳು ಹಾಗೂ ಅಂತ್ಯಕ್ರಿಯೆಯವರೆಗೆ ಧರ್ಮದ ಆಚರಣೆಗಳು ಜೀವನದ ಭಾಗವಾಗಿವೆ. ಹೀಗಾಗಿ ಧರ್ಮವನ್ನು ಮನುಷ್ಯ ಬಿಟ್ಟರೂ, ಧರ್ಮ ಮನುಷ್ಯನನ್ನು ಬಿಡುವುದಿಲ್ಲ” ಎಂದರು.

ಜ್ಞಾನ–ಆಚಾರ–ಧರ್ಮದ ಸಂಬಂಧ

“ಲಿಂಗಕ್ಕೆ ಆಚಾರ ಆಶ್ರಯ, ಆಚಾರಕ್ಕೆ ಪ್ರಾಣ ಆಶ್ರಯ, ಪ್ರಾಣಕ್ಕೆ ಜ್ಞಾನ ಆಶ್ರಯ, ಜ್ಞಾನಕ್ಕೆ ಲಿಂಗ ಆಶ್ರಯ ಹಾಗೂ ಲಿಂಗಕ್ಕೆ ಜಂಗಮ ಆಶ್ರಯ ಎಂಬ ತತ್ವವನ್ನು ಜೀವನದಲ್ಲಿ ಮರೆಯಬಾರದು. ವಿಭೂತಿ ಬೂದಿಯಿಂದ, ತೀರ್ಥ ನೀರಿನಿಂದ, ಅಕ್ಷತೆ ಅಕ್ಕಿಯಿಂದ, ಪ್ರಸಾದ ಕೊಬ್ಬರಿಯಿಂದ ಹಾಗೂ ನೈವೇದ್ಯ ನಾವು ಬೆಳೆದ ಅನ್ನದಿಂದ ರೂಪುಗೊಳ್ಳುತ್ತದೆ. ಬದುಕಿನ ಸಾಮಾನ್ಯ ವಸ್ತುಗಳಿಗೂ ಆಧ್ಯಾತ್ಮಿಕ ಅರ್ಥ ನೀಡುವ ಸಂಸ್ಕೃತಿ ನಮ್ಮದು. ತರಳಬಾಳು ಮಠಕ್ಕೆ ಆಗಮಿಸುವುದರಿಂದ ಜೀವನ ಪಾವನವಾಗುತ್ತದೆ” ಎಂದರು.

“ಕೋಪಕ್ಕೆ ಕಾಯಕವಿರಬೇಕು. ಶ್ರೀಗಗಳಿಗೆ ವಿಶ್ವದೆಲ್ಲೆಡೆ ಭಕ್ತರಿದ್ದಾರೆ. ಸೇವೆ ಎನ್ನುವ ಮಾತು ಧರ್ಮಕ್ಕೆ ಹೆದ್ದಾರಿ ಎಂದು ಶ್ರೀಗಳು ಹೇಳಿದ್ದಾರೆ. ಲಿಂಗಕ್ಕೆ ಪೂಜಿಸುವ ಮೊದಲು ಕಾಯಕವನ್ನು ಪೂಜಿಸು ಎಂದೂ ಹೇಳಿದ್ದಾರೆ. ತರಳಬಾಳು ಮಠ ಮಗುವಿಗೆ ಬೆಳಕು ಕೊಡುವ ತತ್ವವನ್ನು ಇಟ್ಟುಕೊಂಡಿದೆ. ಮಠಕ್ಕೆ ಜನ ನಂಬಿಕೆ ದೇಶದಲ್ಲಿ ನ್ಯಾಯಾಲಯಗಳು ಇಲ್ಲದೆ ಹೋದಾಗ ಧರ್ಮದ ಪೀಠವು ನ್ಯಾಯಾಲಯವಾಗಿ ಸೇವೆ ಮಾಡುತ್ತಿದೆ. ಇದು ನಿಮ್ಮೆಲ್ಲರ ನಂಬಿಕೆಗೆ ಸಾಕ್ಷಿ. ಸರ್ಕಾರಗಳು ಮಾಡುತ್ತಿರುವ ಅನೇಕ ಸೇವೆಗಳನ್ನು ರಾಜ್ಯದಲ್ಲಿ ಮಠ ಮಾನ್ಯಗಳು ಮಾಡುತ್ತಿವೆ” ಎಂದರು.

“ರೈತರ ಬದುಕು, ಜ್ಞಾನ, ಶಿಕ್ಷಣ ಮತ್ತು ಧರ್ಮಕ್ಕಾಗಿ ತರಳಬಾಳು ಶ್ರೀಗಳು ಮಾಡುತ್ತಿರುವ ಕಾರ್ಯಗಳಿಗೆ ಸರ್ಕಾರದ ಪರವಾಗಿ ಹಾಗೂ ವೈಯಕ್ತಿಕವಾಗಿ ಸಂಪೂರ್ಣ ಬೆಂಬಲ ನೀಡುತ್ತೇವೆ” ಎಂದು ಭರವಸೆ ನೀಡಿದರು.

ಜಾತ್ಯಾತೀತ ತತ್ವಕ್ಕೆ ತರಳಬಾಳು ಮಠ ಸಂದೇಶ ನೀಡಿದೆ

“ಧಾರ್ಮಿಕ, ಶೈಕ್ಷಣಿಕ ಸಮಾಜಿಕ ಕಾರ್ಯಗಳನ್ನು ಕೈಗೊಂಡು ಮನುಕುಲದ ಉದ್ಧಾರಕ್ಕೆ ಮಠ ನಿಂತಿದೆ. ತರಳಬಾಳು ಮಠ ಜಾತ್ಯಾತೀತ ತತ್ವಕ್ಕೆ ದೊಡ್ಡ ಸಂದೇಶ ನೀಡಿದೆ. ಶ್ರೀಗಳ ಆಶೀರ್ವಾದ ಪಡೆದು ನಿಮ್ಮೆಲ್ಲರನ್ನು ಭೇಟಿ ಮಾಡುವ ಅವಕಾಶ ದೊರೆತಿರುವುದು ನನ್ನ ಭಾಗ್ಯ. ನುಡಿದಂತೆ ನಡೆವ ಶ್ರೀಗಳು ದ್ವೇಷ, ಅಸೂಯೆ ಎಂಬ ವಿಷದ ಮಧ್ಯೆ ಶಿಕ್ಷಣವೇ ಮುಖ್ಯ ಎಂಬ ಅಮೃತವನ್ನೇ ನೀಡಿದ್ದಾರೆ. ತರಳಬಾಳು ಮಠದ ಇತಿಹಾಸ ಮಹತ್ವದ್ದು. ಇಲ್ಲಿ ಕಲಿತ ವಿದ್ಯಾರ್ಥಿಗಳು ವಿಶ್ವದೆಲ್ಲೆಡೆ ಉನ್ನತ ಹುದ್ದೆಗಳಲ್ಲಿ ಇದ್ದಾರೆ”ಎಂದರು.

ಮಠದ ಸಿದ್ಧಾಂತ ಅನುಕರಣಿಯ

“ಚುನಾವಣಾ ಆಯೋಗ ಚುನಾವಣೆ ಘೋಷಿಸಿರುವುದರಿಂದ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದು ಮಾಡಿ ಶ್ರೀಗಳ ಆಶೀರ್ವಾದ ಪಡೆಯಲು ಮಠಕ್ಕೆ ಆಗಮಿಸಿದ್ದೇನೆ. ಈ ಮಠದ ಸಿದ್ಧಾಂತವನ್ನು ರಾಜ್ಯದ ಎಲ್ಲಾ ಮಠಗಳೂ ಅನುಸರಿಸಬೇಕು” ಎಂದರು.

ಭದ್ರೆಯ 30 ಟಿಎಂಸಿ ನೀರು ಉಳಿಸಿ ಸದ್ಬಳಕೆಗೆ ಕ್ರಮ

“ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀರಾವರಿಗೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡಿದ್ದು, ಎರಡು ಬಾರಿ ನೀರಾವರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ರಾಜ್ಯದ ನೆಲ, ಜಲದ ಬಗ್ಗೆ ಚರ್ಚಿಸಿದ್ದೇನೆ. ತುಂಗಭದ್ರಾ ನದಿಯಲ್ಲಿ ಹೂಳು ತುಂಬಿ ಪ್ರತಿ ವರ್ಷ ವ್ಯರ್ಥವಾಗುವ 30 ಟಿಎಂಸಿ ನೀರನ್ನು ಉಳಿಸಿ ಸದ್ಬಳಕೆ ಮಾಡಿಕೊಳ್ಳಲು ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಒಮ್ಮತದ ತೀರ್ಮಾನಕ್ಕೆ ಬಂದಿದ್ದು, ಕೇಂದ್ರ ಜಲ ಸಚಿವ ಸಿ.ಆರ್ ಪಾಟೀಲ್, ಆಂಧ್ರ ಪ್ರದೇಶ, ತೆಲಂಗಾಣ ಮುಖ್ಯಮಂತ್ರಿಗಳು ಮತ್ತು ನಾನು ಸೇರಿ ರಾಜ್ಯದ ಹಿತ ಮುಖ್ಯ ಎಂದು ತೀರ್ಮಾನಿಸಿ ಸಮಾನಮಾಂತರ ಜಲಾಶಯ ನಿರ್ಮಾಣಕ್ಕೆ ಮುಂದಾಗಿದ್ದೇವೆ” ಎಂದರು.

“ಕಾವೇರಿ ನೀರಿನ ವಿಚಾರದಲ್ಲಿ ಸುಪ್ರೀಂಕೋರ್ಟ್ ರಾಜ್ಯದ ಪರವಾಗಿ ನೀಡಿರುವ ತೀರ್ಪಿನ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರೆದಿದ್ದ ಸಭೆಯಲ್ಲಿ ಭಾಗವಹಿಸಿ ನಮ್ಮ ನೀರು ನಮ್ಮ ಹಕ್ಕು ಎಂದು ಪ್ರತಿಪಾದಿಸಲಾಗಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಶಕ್ತಿ ತುಂಬಲಾಗುವುದು” ಎಂದರು.

ರೈತರ ಬದುಕಿಗೆ ಮಠದ ಬೆಂಬಲ

“ಸಂಬಳ, ಪಿಂಚಣಿ, ನಿವೃತ್ತಿ ಇಲ್ಲದ ರೈತರ ಬದುಕಿಗೆ ಮಠ ಹೋರಾಟ ಮಾಡುತ್ತಿದೆ. ಸರ್ಕಾರ ರೈತರ ಪರವಾಗಿ ಆಲೋಚಿಸಿಯೇ ಕಸ್ತೂರಿ ರಂಗನ್ ವರದಿಯ ವಿಚಾರವಾಗಿ ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ತೊಂದರೆಗೊಳಗಾಗಿರುವ ರೈತರ ಸಮಸ್ಯೆಗಳನ್ನು ಚರ್ಚಿಸಲು ಮೂರು ದಿನಗಳ ವಿಶೇಷ ಅಧಿವೇಶನವನ್ನು ಕರೆದಿದೆ” ಎಂದರು.

ರೈತರ ರಕ್ಷಣೆ; ಕಾಡು ಉಳಿಸಲು ಐತಿಹಾಸಿಕ ತೀರ್ಮಾನ

“ಹಿಂದಿನ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಕೂಡ ವರದಿಯನ್ನು ವಿರೋಧಿಸಿದರೂ ಅದನ್ನು ಕೇಂದ್ರ ಸರ್ಕಾರ ವಾಪಸ್ಸು ಕಳಿಸಿದೆ. ವರದಿಯ ಬಗ್ಗೆ 27 ನೇ ತಾರೀಕಿನೊಳಗೆ ಸರ್ಕಾರದ ಸ್ಪಷ್ಟ ಅಭಿಪ್ರಾಯ ಕೊಡಬೇಕಾದ್ದರಿಂದ ಸದನದಲ್ಲಿ ಒಮ್ಮತದ ನಿರ್ಣಯ ಮಾಡಿ ಇದನ್ನು ಒಪ್ಪಿಸಲಾಗುವುದಿಲ್ಲ. ರೈತರ ಬದುಕು ಮುಖ್ಯ. ಅರಣ್ಯದ ಅಂಚಿನಲ್ಲಿ ಬದುಕುತ್ತಿರುವ ಎಲ್ಲಾ ರೈತರಿಗೆ ಶಕ್ತಿಯಾಗಿ ನಿಲ್ಲಬೇಕು. ತಲತಲಾಂತರದಿಂದ ಬದುಕುತ್ತಿರುವ ರೈತರ ರಕ್ಷಣೆಯಾಗಬೇಕು. ಕಾಡೂ ಉಳಿಯಬೇಕೆಂದು ಐತಿಹಾಸಿಕ ತೀರ್ಮಾನ ಮಾಡಿದೆ” ಎಂದರು.

ರೈತರನ್ನು ಕಾಪಾಡಲು ಸಕಲ ಪ್ರಯತ್ನ

“ರೈತರ ಬದುಕಿಗೆ ತೊಂದರೆ ಕೊಡಬಾರದೆಂದು ಸರ್ವ ಪಕ್ಷ ನಿಯೋಗ ಕೊಂಡೊಯ್ಯಲು ತೀರ್ಮಾನಿಸಿದೆ. ಬರಗಾಲದ ಬಗ್ಗೆಯೂ ಸದನದಲ್ಲಿ ಚರ್ಚೆ ಮಾಡಲಾಗುತ್ತಿದೆ. 200ಕ್ಕೂ ಹೆಚ್ಚು ತಾಲ್ಲೂಕುಗಳು ಬರಪೀಡಿತವಾಗಿವೆ. ಪ್ರಧಾನಿಗಳು ಮೂರು ತಿಂಗಳ ಮುನ್ನವೇ ಭೀಕರ ಬರಗಾಲಕ್ಕೆ ಸಿದ್ಧವಾಗುವಂತೆ ಎಚ್ಚರಿಕೆ ಕೊಟ್ಟಿದ್ದರು. ಇಂಥ ಸಂದರ್ಭದಲ್ಲಿ ರೈತರನ್ನು ಕಾಪಾಡಲು ಸಕಲ ಪ್ರಯತ್ನವನ್ನೂ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಮುಂದೆ ಒಟ್ಟಾಗಿ ತೆರಳಿ ಬೇಡಿಕೆಗಳನ್ನು ಇಡಲು ಸಿದ್ಧರಾಗಿದ್ದೇವೆ” ಎಂದರು.

ಕೃಷ್ಣ, ಕಾವೇರಿ ಮತ್ತು ಗೋದಾವರಿ ನದಿ ಜೋಡಣೆಗೆ ಒಪ್ಪಿಗೆ

“ಕೃಷ್ಣ, ಕಾವೇರಿ ಮತ್ತು ಗೋದಾವರಿ ನದಿ ಜೋಡಣೆಗಾಗಿ ಒಪ್ಪಂದ ಮಾಡಿಕೊಂಡು ಡಿಪಿಆರ್ ತಯಾರಿಸಿ ಕೇಂದ್ರ ಸರ್ಕಾರ 90% ರಾಜ್ಯ ಸರ್ಕಾರ 10% ರಷ್ಟು ವೆಚ್ಚ ಭರಿಸಲು ನಮ್ಮ ಸಂಸದರೇ ವಿರೋಧಿಸಿದರೂ ನಾನು ಒಪ್ಪಿದೆ” ಎಂದು ಸಿಎಂ ಹೇಳಿದರು.

“ಬಯಲುಸೀಮೆಗೆ ನೀರು ಹರಿಸಬೇಕೆನ್ನುವುದು ಶ್ರೀಗಳ ನಿಲುವು. ಅವರ ಬದುಕು ವೈಯಕ್ತಿಕವಾಗಿಲ್ಲ. ಜನ, ಸಾಮಾನ್ಯರಿಗೆ ಮಠಕ್ಕೆ ಮೀಸಲಿಟ್ಟಿದ್ದಾರೆ. ರಾಜನಹಳ್ಳಿ, ಭರಮಸಾಗರ, ರಾಣಿಕಟ್ಟೆ ಏತ ನೀರಾವರಿ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನವಾಗಿರುವುದರ ಹಿಂದೆ ಶ್ರೀಗಳು ಶಕ್ತಿಯಾಗಿ ನಿಂತಿದ್ದನ್ನು ಯಾರೂ ಮರೆಯಲು ಸಾಧ್ಯವಿಲ್ಲ” ಎಂದರು.

2028 ಕ್ಕೆ ಮೊದಲು ಬಯಲುಸೀಮೆಗೆ ಭದ್ರಾ ನೀರು ಹರಿಸಲು ಪ್ರಯತ್ನ

“ಚಿತ್ರದುರ್ಗದ ಭೂಮಿಗೆ ಭದ್ರಾ ನದಿ ನೀರು ಹರಿದಿದೆ. 2028 ಕ್ಕೆ ಮೊದಲು ಪೂರ್ತಿ ಬಯಲುಸೀಮೆಗೆ ಹರಿಸಲು ಪ್ರಯತ್ನ ಮಾಡಲಾಗುತ್ತಿದೆ. ಭದ್ರೆಯಿಂದ ಬದುಕು ಸುಭದ್ರವಾಗಿ ಇರಲಿ. ಶ್ರೀಗಳ ಆಶೀರ್ವಾದ ಸದಾ ಇರಲಿ” ಎಂದರು.

Share

Leave a comment

Leave a Reply

Your email address will not be published. Required fields are marked *