ಬೆಂಗಳೂರು: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶದ ಸಂವಿಧಾನ, ಜಾತ್ಯಾತೀತ ತತ್ವ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದೊಂದೇ ಕಂಬಗಳನ್ನು ಕೆಡವಲು ಯತ್ನಿಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಬಿ. ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ‘ಭಾರತ ಜೋಡೋ’ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಮುಖ ರಾಜಕೀಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಲ್ಲೇಶ್ವರಂ ಕ್ಷೇತ್ರದ ನಾಯಕ ಹಾಗೂ ಪ್ರಸಿದ್ಧ ಸಿನಿಮಾ ನಿರ್ಮಾಪಕ ಡಿ. ಸುರೇಶ್ ಗೌಡ ಅವರು ತಮ್ಮ ಬೆಂಬಲಿಗರೊಂದಿಗೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಸಂದರ್ಭದಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
‘ದೇಶವನ್ನು ರಾಜಮಹಾರಾಜರ ಕಾಲಕ್ಕೆ ಕೊಂಡೊಯ್ಯುವ ಯತ್ನ’
ವೇದಿಕೆಯಲ್ಲಿ ಮಾತನಾಡಿದ ಬಿ.ಕೆ. ಹರಿಪ್ರಸಾದ್, “ನಾವೆಲ್ಲರೂ ಮೊದಲಿಗೆ ಭಾರತೀಯರು. ನಮ್ಮ ಮೂಲ ಧರ್ಮ ತ್ರಿವರ್ಣ ಧ್ವಜ ಮತ್ತು ನಮ್ಮ ಪವಿತ್ರ ಗ್ರಂಥವೇ ಭಾರತದ ಸಂವಿಧಾನ. ನಮಗೆ ಹಿರಿಯರು ತಂದುಕೊಟ್ಟ ಸ್ವತಂತ್ರ ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತ ಸಿದ್ಧಾಂತವೇ ಅಡಿಪಾಯವಾಗಿದೆ. ಆದರೆ, ಕೇಂದ್ರದಲ್ಲಿ ಬಿಜೆಪಿ ನಾಯಕರು ಅಧಿಕಾರಕ್ಕೆ ಬಂದ ಮೇಲೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ, ದೇಶವನ್ನು ಮತ್ತೆ ಹಳೆಯ ರಾಜಮಹಾರಾಜರ ಆಡಳಿತದ ಕಾಲಕ್ಕೆ ಕೊಂಡೊಯ್ಯಲು ಹುನ್ನಾರ ನಡೆಸುತ್ತಿದ್ದಾರೆ” ಎಂದು ಆರೋಪಿಸಿದರು.
‘ಮುಂದಿನ ಪೀಳಿಗೆಗಾಗಿ ಕಾಂಗ್ರೆಸ್ ಬೆಂಬಲಿಸಿ’
ಕಾಂಗ್ರೆಸ್ ಪಕ್ಷದ ಭವಿಷ್ಯದ ದೃಷ್ಟಿಕೋನವನ್ನು ಹಂಚಿಕೊಂಡ ಅವರು, “ನಮ್ಮ ಪೂರ್ವಜರು ರಕ್ತ ಚೆಲ್ಲಿ ತಂದುಕೊಟ್ಟ ಸ್ವಾತಂತ್ರ್ಯ, ಸಮಬಾಳು-ಸಮಪಾಲು ತತ್ವ ಹಾಗೂ ಸಂವಿಧಾನವನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಮುಂದಿನ ಪೀಳಿಗೆಗೆ ಉತ್ತಮ ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯ ನೀಡುವುದು ನಮ್ಮ ಗುರಿ. ಈ ಬದಲಾವಣೆ ತರುವ ಶಕ್ತಿ ಜನಸಾಮಾನ್ಯರ ಕೈಯಲ್ಲಿದೆ” ಎಂದರು.
ಕಾರ್ಯಕ್ರಮದಲ್ಲಿ ನೂತನವಾಗಿ ಪಕ್ಷ ಸೇರಿದ ಡಿ. ಸುರೇಶ್ ಗೌಡ ಹಾಗೂ ಅವರ ಬೆಂಬಲಿಗರನ್ನು ಪಕ್ಷದ ಶಾಲ ಹೊದಿಸಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಕಾಂಗ್ರೆಸ್ ಪಕ್ಷದಲ್ಲಿ ಪ್ರತಿಯೊಬ್ಬ ಕಾರ್ಯಕರ್ತನಿಗೂ ಸೂಕ್ತ ಅವಕಾಶ ಸಿಗಲಿದ್ದು, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಕರೆ ನೀಡಲಾಯಿತು.





Leave a comment