ಬೆಂಗಳೂರು: “ಗ್ಯಾರಂಟಿ ಯೋಜನೆಗಳನ್ನು ಉಳ್ಳವರಿಗೆ ಕೊಡಬೇಡಿ ಎಂದು ಹೇಳುತ್ತಿದ್ದೀರ. ಹಾಗಾದರೆ ನಿಮ್ಮ ಪ್ರಕಾರ, ಬಡವರು, ಉಳ್ಳವರು ಅಂದರೆ ಯಾರು, ಹೇಗೆ ವಿಂಗಡಿಸುತ್ತೀರಿ ಎನ್ನುವುದನ್ನು ವಿವರಿಸಿ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ವಿಧಾನಸಭೆಯಲ್ಲಿ ವಿಪಕ್ಷಗಳಿಗೆ ತಿರುಗೇಟು ನೀಡಿದರು.
ವಿಧಾನಸಭೆಯಲ್ಲಿ ಬುಧವಾರ ಬರ ಪರಿಸ್ಥಿತಿಯ ಚರ್ಚೆಯ ಸಂದರ್ಭದಲ್ಲಿ ಶಾಸಕ ಸಿದ್ದು ಸವದಿ ಅವರು, ರೈತರಿಗೆ ಗ್ಯಾರಂಟಿಗಳನ್ನು ನಿಲ್ಲಿಸಿ. ಆ ಹಣವನ್ನು ಬರಪರಿಹಾರಕ್ಕೆ ಬಳಸಿ ಎಂದು ಸಲಹೆ ನೀಡಿದರು. ಇದಕ್ಕೆ ದನಿಗೂಡಿಸಿದ ಬಿಜೆಪಿ ಶಾಸಕ ಸುರೇಶ್ ಗೌಡ, ಬರಗಾಲದಲ್ಲಿ ಗ್ಯಾರಂಟಿಗಳನ್ನು ಬಡವರಿಗೆ ಮಾತ್ರ ತಲುಪುವಂತೆ ಮಾಡಿ ಎಂದು ಆಗ್ರಹಿಸಿದರು. ಆಗ ಸಿಎಂ ಹೀಗೆ ಉತ್ತರಿಸಿದರು.
“ನಮ್ಮ ಶಕ್ತಿ ಯೋಜನೆ ಬಳಸಿ ರೈತ ಮಹಿಳೆಯರು ಓಡಾಡುತ್ತಿದ್ದಾರೆ. ರೈತನ ಮನೆಯ ಯಜಮಾನಿಗೆ ಗೃಹಲಕ್ಷ್ಮೀ ಯೋಜನೆ ತಲುಪುತ್ತಿದೆ. ರೈತರ ಮನೆಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ರೈತ ಕುಟುಂಬಕ್ಕೂ 10 ಕೆಜಿ ಅಕ್ಕಿಯನ್ನೂ ಕೊಡುತ್ತಿದ್ದೇವೆ. ಇವರಲ್ಲಿ ಯಾರಿಗೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕು ಅಂತ ಹೇಳಿ. ನಿಮ್ಮ ಸಲಹೆಯನ್ನು ಪರಿಗಣಿಸೋಣ” ಎಂದರು.
“ಸುರೇಶ್ ಅವರೇ, ನೀವು ಬಡವರು, ಉಳ್ಳವರು ಅಂತ ಹೇಗೆ ವಿಂಗಡಣೆ ಮಾಡ್ತೀರ? ಎನ್ನುವುದನ್ನು ವಿವರಿಸಿ” ಎಂದು ಸಿಎಂ ಕೇಳಿದಾಗ, ಸುರೇಶ್ ಗೌಡರು, ಬಿಪಿಎಲ್ ಕಾರ್ಡುದಾರರು ಮಾತ್ರ ಬಡವರು ಎಂದರು.
ಹಾಗಾದರೆ, ‘ಬಿಪಿಎಲ್ ಕಾರ್ಡ್ ದಾರರಿಗೆ ಮಾತ್ರ ಗ್ಯಾರಂಟಿಗಳನ್ನು ಕೊಟ್ಟು ಮಿಕ್ಕವರಿಗೆ ಗ್ಯಾರಂಟಿ ಯೋಜನೆಯನ್ನು ರದ್ದು ಮಾಡಬೇಕೆ, ಅದನ್ನು ಎದ್ದು ನಿಂತು ಸದನಕ್ಕೆ ಹೇಳಿ” ಎಂದು ಸಿಎಂ ಸೂಚಿಸಿದರು.
ಸುರೇಶ್ ಗೌಡರು, “ಹೌದು, ನಾನು ಧೈರ್ಯವಾಗಿ ಬಡವರಿಗೆ ಮಾತ್ರ ಗ್ಯಾರಂಟಿ ಯೋಜನೆಗಳನ್ನು ಕೊಡಿ ಎಂದು ಹೇಳುತ್ತಿದ್ದೇನೆ. ಬರಗಾಲದಲ್ಲಿ ಸರ್ಕಾರ ನಡೆಸುವುದು ಕಷ್ಟ ಆಗುತ್ತದೆ” ಎಂದರು.
ಹಾಗಾದರೆ, “ನಿಮ್ಮ ಪ್ರಕಾರ ಬಿಪಿಎಲ್ ಕಾರ್ಡು ಹೊಂದಿರುವವರಿಗೆ ಮಾತ್ರ ಗ್ಯಾರಂಟಿ ಯೋಜನೆ ನೀಡಬೇಕಾ’ ಅಂತ ಮತ್ತೆ ಸಿಎಂ ಮರುಪ್ರಶ್ನೆ ಮಾಡಿದರು.
ಮಧ್ಯೆ ಪ್ರವೇಶ ಮಾಡಿದ ಶಾಸಕ ವಿಜಯೇಂದ್ರ “ಸರ್ಕಾರದಲ್ಲಿ ಹಣ ಇಲ್ಲ ಅಂತ ಬಿಪಿಎಲ್ ಕಾರ್ಡ್ ಗಳನ್ನು ಸರ್ಕಾರವೇ ರದ್ದು ಮಾಡುತ್ತಿದೆ. ಈ ಬಗ್ಗೆ ನಾವ್ಯಾಕೆ ಮಾತನಾಡಬೇಕು” ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, “ವಿಜಯೇಂದ್ರ ಅವರೇ, ನೀವ್ಯಾಕೆ ಕಷ್ಟ ಪಡುತ್ತಿದ್ದೀರಿ. ನಿಮ್ಮ ಶಾಸಕರು ಅವರ ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ಅವಕಾಶ ಕೊಡಿ” ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ವಿಜಯೇಂದ್ರ, ನಿಮ್ಮ ಭಾವನೆಯನ್ನು ಅವರು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದರು. ವಿಜಯೇಂದ್ರ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ ಸಿಎಂ, “ನಿಮ್ಮ ಶಾಸಕರು ನನ್ನ ಭಾವನೆ ಅರ್ಥ ಮಾಡಿಕೊಂಡಿರುವುದಕ್ಕೆ ನನಗೂ ಅವರಿಗೂ ಮಾತಿನ ಸಂಪರ್ಕ ಏರ್ಪಟ್ಟಿರುವುದು” ಎಂದು ಛೇಡಿಸಿದರು.
- BPL Card Debate
- BY Vijayendra
- DK Shivakumar
- Gruha Lakshmi Scheme
- Karnataka Assembly Session
- Karnataka Guarantee Schemes
- Karnataka Politics News
- Shakti Scheme
- Suresh Gowda
- ಕರ್ನಾಟಕ ರಾಜಕೀಯ
- ಕರ್ನಾಟಕ ವಿಧಾನಸಭೆ
- ಗೃಹಲಕ್ಷ್ಮಿ ಯೋಜನೆ
- ಗ್ಯಾರಂಟಿ ಯೋಜನೆಗಳು
- ಡಿ. ಕೆ. ಶಿವಕುಮಾರ್
- ಬರ ಪರಿಹಾರ
- ಬಿ. ವೈ. ವಿಜಯೇಂದ್ರ
- ಬಿಪಿಎಲ್ ಕಾರ್ಡ್
- ಶಕ್ತಿ ಯೋಜನೆ
- ಸುರೇಶ್ ಗೌಡ





Leave a comment