ಮೈಸೂರು: ಟಿ. ನರಸೀಪುರದಲ್ಲಿ ಗಣೇಶ ಮೂರ್ತಿ ವಿಸರ್ಜನಾ ಶೋಭಾಯಾತ್ರೆ ವೇಳೆ ಪ್ರಚೋದನಾತ್ಮಕ ಭಾಷಣ ಹಾಗೂ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ ಆರೋಪದಡಿ ತಮ್ಮ ವಿರುದ್ಧ ಪ್ರಕರಣ ದಾಖಲಾಗಿರುವುದಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, “ಪ್ರಚೋದನೆ ಕೊಟ್ಟಿದ್ದು ನಾನಲ್ಲ, ಸ್ಥಳದಲ್ಲಿದ್ದ ಇನ್ಸ್ಪೆಕ್ಟರ್ ಧನಂಜಯ. ಆತನ ಮೇಲೆ ಮೊದಲು ಎಫ್ಐಆರ್ ಆಗಬೇಕಿತ್ತು ಹಾಗೂ ಆತನನ್ನು ತಕ್ಷಣವೇ ವರ್ಗಾವಣೆ ಮಾಡಿ ಇಲಾಖಾ ಮಟ್ಟದ ಶಿಸ್ತುಕ್ರಮ ಕೈಗೊಳ್ಳಬೇಕಿತ್ತು. ಆತ ಮಸೀದಿ ಮುಂದೆ ನಿಂತು ಕೊಟ್ಟ ಚಿತಾವಣೆಗೆ ನಾವು ಸ್ಪಂದಿಸಿದ್ದೇವೆ ಅಷ್ಟೇ” ಎಂದು ಸಮರ್ಥಿಸಿಕೊಂಡಿದ್ದಾರೆ.
“ಮಸೀದಿ ಮುಂದೆ ಇನ್ಸ್ಪೆಕ್ಟರ್ ಆಡಿದ ಮಾತುಗಳನ್ನಷ್ಟೇ ನಾನು ಪ್ರಸ್ತಾಪ ಮಾಡಿದ್ದೇನೆ. ‘ಏನು ಹೇಳುತ್ತೀಯಾ, ಬಾ ನೋಡೋಣ’ ಎಂದು ಕರೆದಿದ್ದೆ. ಇದನ್ನು ಹೊರತುಪಡಿಸಿ ನಾನು ಬೇರೇನೂ ಕೇಳಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.
ಮುಂದುವರಿದು ಮಾತನಾಡಿದ ಅವರು, “ಪೊಲೀಸ್ ವ್ಯವಸ್ಥೆ ಮತ್ತು ಅಧಿಕಾರಿಗಳ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಒಬ್ಬ ತರ್ಲೆ ಇನ್ಸ್ಪೆಕ್ಟರ್ನಿಂದ ಇದೆಲ್ಲಾ ಗೊಂದಲ ಸೃಷ್ಟಿಯಾಗಿದೆ. ಅದನ್ನು ಬಿಟ್ಟು ನನ್ನ ಮೇಲೆ ಸುಳ್ಳು ಎಫ್ಐಆರ್ ದಾಖಲಿಸಿದ್ದಾರೆ. ರಾಜ್ಯದ ಗೃಹ ಸಚಿವರ ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸ್ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ” ಎಂದು ಆರೋಪಿಸಿದರು.
“ನಾನು ಯಾರ ಬಳಿಯೂ ಕಮಿಷನ್ ಹೊಡೆದಿಲ್ಲ, ಮುಡಾದಲ್ಲಿ ಅಕ್ರಮವಾಗಿ ಸೈಟ್ ಪಡೆದುಕೊಂಡಿಲ್ಲ. ಪೊಲೀಸರ ಈ ಕ್ರಮದ ವಿರುದ್ಧ ನಾನು ನ್ಯಾಯಾಲಯದ ಮೊರೆ ಹೋಗುತ್ತೇನೆ, ಅಲ್ಲಿಯೇ ನನಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಿದೆ” ಎಂದರು.
ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “ಐಜಿಪಿ, ಎಸ್ಪಿ ಹಾಗೂ ಡಿವೈಎಸ್ಪಿ ಅವರುಗಳು ಮೇಲಾಧಿಕಾರಿಗಳು ಹಾಗೂ ಸರ್ಕಾರದ ರಾಜಕೀಯ ಒತ್ತಡಕ್ಕೆ ಮಣಿದು ದೂರು ದಾಖಲಿಸಿಕೊಂಡಿದ್ದಾರೆ. ನಾನು ಅಪ್ಪನ ಹೆಸರು ಹೇಳಿಕೊಂಡು ರಾಜಕೀಯಕ್ಕೆ ಬಂದವನಲ್ಲ. ನನ್ನನ್ನು ಕೇವಲ ರಾಜಕಾರಣಿಯಂತೆ ನೋಡಬೇಡಿ, ನಾನೊಬ್ಬ ಪತ್ರಕರ್ತ. ಪತ್ರಕರ್ತರಿಗೆ ದೇಶದ ಸಂವಿಧಾನ ಮತ್ತು ಕಾನೂನುಗಳ ಬಗ್ಗೆ ಸರಿಯಾದ ಅರಿವಿರುತ್ತದೆ” ಎಂದು ಖಾರವಾಗಿ ತಿರುಗೇಟು ನೀಡಿದ್ದಾರೆ.





Leave a comment