Home ದಾವಣಗೆರೆ “ಅವರು ಬಿಜೆಪಿಯವರಲ್ಲ, ಕಾಂಗ್ರೆಸ್‌ನವರು!”: ಸ್ವಪಕ್ಷೀಯರ ವಿರುದ್ಧವೇ ಹರಿಹರ ಶಾಸಕ ಬಿ. ಪಿ. ಹರೀಶ್ ವಾಗ್ದಾಳಿ!
ದಾವಣಗೆರೆಬೆಂಗಳೂರು

“ಅವರು ಬಿಜೆಪಿಯವರಲ್ಲ, ಕಾಂಗ್ರೆಸ್‌ನವರು!”: ಸ್ವಪಕ್ಷೀಯರ ವಿರುದ್ಧವೇ ಹರಿಹರ ಶಾಸಕ ಬಿ. ಪಿ. ಹರೀಶ್ ವಾಗ್ದಾಳಿ!

Share
ಬಿ. ಪಿ. ಹರೀಶ್
Share

ದಾವಣಗೆರೆ: ಗಣಿ ಮತ್ತು ಭೂ ವಿಜ್ಞಾನ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ತಮ್ಮ ವಿರುದ್ಧ ಸಾರ್ವಜನಿಕವಾಗಿ ಅಸಂವಿಧಾನಿಕ ಹಾಗೂ ನಿಂದನೀಯ ಪದಗಳನ್ನು ಬಳಸಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ, ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಪಿ. ಹರೀಶ್ ಅವರು ಸ್ವಪಕ್ಷದ ಕೆಲ ನಾಯಕರ ನಡವಳಿಕೆಯ ವಿರುದ್ಧವೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿ ತಮ್ಮ ಅಸಮಾಧಾನ ಹೊರಹಾಕಿದ ಶಾಸಕ ಹರೀಶ್, “ಸಚಿವ ಮಲ್ಲಿಕಾರ್ಜುನ್ ಅವರು ನನ್ನ ವಿರುದ್ಧ ಬಳಸಿರುವ ಭಾಷೆಯನ್ನು ಮತ್ತು ನಡೆದುಕೊಂಡ ರೀತಿಯನ್ನು ಕೆಲವರು ಬಹಿರಂಗವಾಗಿ ಖಂಡಿಸಿದ್ದಾರೆ. ಆದರೆ, ಮತ್ತೆ ಕೆಲವರು ಸಚಿವರ ಹೇಳಿಕೆಯನ್ನು ಸಮರ್ಥಿಸಿಕೊಂಡು, ನನ್ನ ವಿರುದ್ಧವೇ ಮಾತನಾಡುತ್ತಿದ್ದಾರೆ,” ಎಂದು ಕಳವಳ ವ್ಯಕ್ತಪಡಿಸಿದರು.

“ನನ್ನ ವಿರುದ್ಧ ಮಾತನಾಡುತ್ತಿರುವ ಹಾಗೂ ಸಚಿವರ ನಡೆಯನ್ನು ಸ್ವಾಗತಿಸುತ್ತಿರುವವರು ಬಿಜೆಪಿಯವರು ಎಂದು ಹೇಳಿಕೊಳ್ಳಲು ಹೇಗೆ ಸಾಧ್ಯ? ಅವರು ನಿಜವಾದ ಬಿಜೆಪಿ ನಾಯಕರಲ್ಲ, ಅವರೆಲ್ಲವೂ ಮೂಲತಃ ಕಾಂಗ್ರೆಸ್ ಮನಸ್ಥಿತಿಯವರು ಅಥವಾ ಕಾಂಗ್ರೆಸ್‌ನವರೇ ಆಗಿದ್ದಾರೆ,” ಎಂದು ಸ್ವಪಕ್ಷದ ಕೆಲ ನಾಯಕರನ್ನೇ ತರಾಟೆಗೆ ತೆಗೆದುಕೊಂಡರು.

ಭದ್ರಾ ಜಲಾಶಯದ ನೀರು ಹಂಚಿಕೆ ವಿಚಾರವಾಗಿ ರೈತರು ಸಚಿವರನ್ನು ಭೇಟಿಯಾದ ಸಂದರ್ಭದಲ್ಲಿ, ಸಚಿವರು ಶಾಸಕ ಬಿ. ಪಿ. ಹರೀಶ್ ಅವರ ವಿರುದ್ಧ ಏಕವಚನ ಹಾಗೂ ಅಸಂವಿಧಾನಿಕ ಶಬ್ದಗಳನ್ನು ಬಳಸಿದ್ದರೆನ್ನಲಾದ ವೀಡಿಯೋ ವೈರಲ್ ಆಗಿತ್ತು. ಈ ನಿಂದನೆಯನ್ನು ಖಂಡಿಸಿ ಬಿಜೆಪಿಯ ನಿಜವಾದ ಕಾರ್ಯಕರ್ತರು ತಮ್ಮ ಬೆಂಬಲಕ್ಕೆ ನಿಂತಿದ್ದಾರೆ ಎಂದು ಪ್ರತಿಪಾದಿಸಿದ ಹರೀಶ್, ತಮ್ಮ ಪಕ್ಷದಲ್ಲಿದ್ದುಕೊಂಡೇ ವಿರೋಧಿಗಳ ಪರವಾಗಿ ಧ್ವನಿ ಎತ್ತುತ್ತಿರುವವರ ಬಣ್ಣ ಬಯಲಾಗಿದೆ ಎಂದು ಟೀಕಿಸಿದ್ದಾರೆ. ಈ ಘಟನೆಯು ದಾವಣಗೆರೆ ಹಾಗೂ ಹರಿಹರ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ.

Share

Leave a comment

Leave a Reply

Your email address will not be published. Required fields are marked *