Home ಕ್ರೈಂ ನ್ಯೂಸ್ ಹತ್ಯೆ ಮಾಡಿ ಮಗು ಕೂರಿಸಿ ಹೋದ ಹಂತಕರು… ರಕ್ತದ ಮಡುವಿನಲ್ಲಿದ್ದ ತಾಯಿ ಅಪ್ಪಿ ರೋದಿಸಿದ ಕಂದಮ್ಮ: 25 ವರ್ಷದ ಮಹಿಳೆ ಕೊಂದ ಪತಿ ಹಾಗೂ ಪ್ರಿಯತಮ ಬಂಧನ!
ಕ್ರೈಂ ನ್ಯೂಸ್ಬೆಂಗಳೂರು

ಹತ್ಯೆ ಮಾಡಿ ಮಗು ಕೂರಿಸಿ ಹೋದ ಹಂತಕರು… ರಕ್ತದ ಮಡುವಿನಲ್ಲಿದ್ದ ತಾಯಿ ಅಪ್ಪಿ ರೋದಿಸಿದ ಕಂದಮ್ಮ: 25 ವರ್ಷದ ಮಹಿಳೆ ಕೊಂದ ಪತಿ ಹಾಗೂ ಪ್ರಿಯತಮ ಬಂಧನ!

Share
ತಾಯಿ
Share

ರಾಯಚೂರು: ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಆರ್‌ಹೆಚ್ ಕ್ಯಾಂಪ್-5ರ ಹೊರವಲಯದ ಜಮೀನಿನಲ್ಲಿ 25 ವರ್ಷದ ಮಹಿಳೆಯೊಬ್ಬರನ್ನು ಕಲ್ಲಿನಿಂದ ಜಜ್ಜಿ ಕ್ರೂರವಾಗಿ ಕೊಲೆ ಮಾಡಲಾಗಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ಕೊಲೆಗಡುಕರು ಹತ್ಯೆಯ ನಂತರ ಆಕೆಯ ಒಂದೂವರೆ ವರ್ಷದ ಹೆಣ್ಣುಮಗುವನ್ನು ತಾಯಿಯ ಶವದ ಮೇಲೆಯೇ ಕುಳ್ಳಿರಿಸಿ ಪರಾರಿಯಾಗಿದ್ದಾರೆ.

ಮೃತ ಮಹಿಳೆಯನ್ನು ಆರ್‌ಹೆಚ್ ಕ್ಯಾಂಪ್-4 ನಿವಾಸಿ ಸ್ನೇಹಾ (25) ಎಂದು ಗುರುತಿಸಲಾಗಿದೆ.

ಘಟನೆಯ ವಿವರ:

ಜಮೀನಿನಲ್ಲಿ ತೀವ್ರ ಗಾಯಗೊಂಡು ಬಿದ್ದಿದ್ದ ಸ್ನೇಹಾಳನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಆಕೆಯ ಒಂದೂವರೆ ವರ್ಷದ ಮಗು ತಾಯಿಯ ರಕ್ತಸಿಕ್ತ ದೇಹದ ಮೇಲೆ ಕುಳಿತು ಕಣ್ಣೀರು ಹಾಕುತ್ತಾ ಅಳುತ್ತಿದ್ದ ದೃಶ್ಯ ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು ತರಿಸುವಂತಿತ್ತು. ಸಿಂಧನೂರು ಗ್ರಾಮೀಣ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಸ್ನೇಹಾ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾಳೆ.

ಪತಿ ಮತ್ತು ಪ್ರಿಯತಮ ವಶಕ್ಕೆ:

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಳಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಸ್ನೇಹಾ ನಾಲ್ಕು ವರ್ಷಗಳ ಹಿಂದೆ ಅಮಿತ್ ಎಂಬಾತನೊಂದಿಗೆ ವಿವಾಹವಾಗಿದ್ದರು. ಕಳೆದ ನಾಲ್ಕು ತಿಂಗಳಿಂದ ಶೋಭಂ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರೆನ್ನಲಾಗಿದೆ.

ಸದ್ಯ ಪೊಲೀಸರು ಮೃತರ ಪತಿ ಅಮಿತ್ ಹಾಗೂ ಪ್ರಿಯತಮ ಶೋಭಂ ಇಬ್ಬರನ್ನೂ ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ. ಕೊಲೆಗೆ ನಿಖರವಾದ ಕಾರಣ ಹಾಗೂ ಕೃತ್ಯ ಎಸಗಿದವರು ಯಾರು ಎಂಬ ಬಗ್ಗೆ ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ತನಿಖೆ ಮುಂದುವರಿದಿದೆ ಎಂದು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಕ್ಷು ಗಿರಿ ತಿಳಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿಂಧನೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *