ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಐತಿಹಾಸಿಕ ಸಚಿವ ಸಂಪುಟ ಸಭೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತುಳು ಭಾಷೆಗೆ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ನೀಡಿರುವ ರಾಜ್ಯ ಸರ್ಕಾರದ ತೀರ್ಮಾನವನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ಇದು ಕೇವಲ ಒಂದು ಭಾಷೆಗೆ ಸಿಕ್ಕ ಮಾನ್ಯತೆಯಲ್ಲ; ತುಳುನಾಡಿನ ಭಾಷೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಮತ್ತು ಅಸ್ಮಿತೆಗೆ ಸಂದ ಗೌರವ ಎಂದು ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ಹೇಳಿದ್ದಾರೆ.
ತುಳು ನನ್ನ ಮಾತೃಭಾಷೆಯೂ ಕೂಡ. ತುಳು ಭಾಷೆಯೊಂದಿಗೆ ನನಗೆ ಕೇವಲ ಭಾವನಾತ್ಮಕ ಸಂಬಂಧವಲ್ಲ, ಅದರ ಸಾಂವಿಧಾನಿಕ ಹಕ್ಕಿಗಾಗಿ ನಡೆಸಿದ ಹೋರಾಟದ ನಂಟೂ ಇದೆ. ರಾಜ್ಯಸಭೆಯಲ್ಲಿ ಹಲವು ಬಾರಿ ತುಳು ಭಾಷೆಯ ಮಹತ್ವದ ಕುರಿತು ಧ್ವನಿ ಎತ್ತಿದ್ದೇನೆ. ತುಳು ಮತ್ತು ಕೊಡವ ಭಾಷೆಗಳನ್ನು ಸಂವಿಧಾನದ 8ನೇ ಅನುಸೂಚಿಗೆ ಸೇರಿಸಿ ಸಾಂವಿಧಾನಿಕ ಸ್ಥಾನಮಾನ ನೀಡಬೇಕೆಂದು ಖಾಸಗಿ ಮಸೂದೆಯನ್ನೂ ಮಂಡಿಸಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದೆ
ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ತುಳು ಭಾಷೆಗೆ ಆಡಳಿತಾತ್ಮಕ ಗೌರವ ನೀಡುವ ಮೂಲಕ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದೆ. ಕೂಡಲೇ ಕೇಂದ್ರ ಸರ್ಕಾರವೂ ದಶಕಗಳ ಬೇಡಿಕೆಗೆ ಸ್ಪಂದಿಸಬೇಕು. ತುಳು ಹಾಗೂ ನಮ್ಮ ಕರ್ನಾಟಕದ ಕೊಡವ ಭಾಷೆಗಳನ್ನು ಸಂವಿಧಾನದ 8ನೇ ಅನುಸೂಚಿಗೆ ಕೂಡಲೇ ಸೇರಿಸಿ ಸಂವಿಧಾನಾತ್ಮಕ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸುತ್ತೇನೆ ಎಂದಿದ್ದಾರೆ.
ಮಂಗಳೂರಿನಲ್ಲಿ ನಡೆದ ಈ ಐತಿಹಾಸಿಕ ಸಂಪುಟ ಸಭೆ ಕರಾವಳಿಯ ಸಮಗ್ರ ಅಭಿವೃದ್ಧಿಗೂ ಹೊಸ ದಿಕ್ಕು ನೀಡಿದೆ. ಕರಾವಳಿ–ಮಲೆನಾಡಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ, ಮೂಲಸೌಕರ್ಯ ಅಭಿವೃದ್ಧಿ, ಮೀನುಗಾರಿಕೆ ಹಾಗೂ ಆರೋಗ್ಯ–ಶಿಕ್ಷಣ ಸೇರಿದಂತೆ ಕರಾವಳಿಯ ಆರ್ಥಿಕ ಮತ್ತು ಪ್ರವಾಸೋದ್ಯಮ ಸಾಮರ್ಥ್ಯವನ್ನು ವಿಸ್ತರಿಸುವ ಮಹತ್ವದ ನಿರ್ಧಾರಗಳು ಸ್ವಾಗತಾರ್ಹ ಎಂದು ತಿಳಿಸಿದ್ದಾರೆ.
ವಿಶೇಷವಾಗಿ ಮಂಗಳೂರಿನಲ್ಲಿ ಡಿಸೆಂಬರ್ ನಲ್ಲಿ ಆಯೋಜಿಸಲಾಗಿದ್ದ ಗುರು–ಗಾಂಧಿ ಸಂವಾದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಶಿವಗಿರಿಯ ಶಾಖಾ ಮಠಕ್ಕೆ ಭೂಮಿ ನೀಡುವ ಕುರಿತು ಅಂದಿನ ಮುಖ್ಯಮಂತ್ರಿಯಾಗಿದ್ದ Siddaramaiah ಅವರು ನೀಡಿದ್ದ ಭರವಸೆಯಂತೆ, ಬಂಟ್ವಾಳ ತಾಲೂಕಿನ ನಾವೂರಿನಲ್ಲಿ ಶಿವಗಿರಿಯ ಶಾಖಾ ಮಠಕ್ಕೆ 6.51 ಎಕರೆ ಜಮೀನು ಮಂಜೂರು ಮಾಡಿರುವ ಮುಖ್ಯಮಂತ್ರಿ DK Shivakumar ಅವರ ನಿರ್ಧಾರ ಅತ್ಯಂತ ಸಂತಸದ ಸಂಗತಿ. ಶ್ರೀ ನಾರಾಯಣ ಗುರುಗಳ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶವನ್ನು ಮತ್ತಷ್ಟು ವಿಸ್ತರಿಸಲು ಈ ತೀರ್ಮಾನ ನೆರವಾಗಲಿದ್ದು, ಸರ್ಕಾರದ ನಿರ್ಧಾರಕ್ಕೆ ವಿಶೇಷವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.





Leave a comment