ನವದೆಹಲಿ: ಬೆಳೆಯುವ ಹಂತದಲ್ಲಿ ಕೆಲವು ಕ್ಷಣಗಳು ಮನುಷ್ಯನ ಜೀವನದ ದೊಡ್ಡ ಬದಲಾವಣೆಯನ್ನು ನಿಶ್ಯಬ್ದವಾಗಿ ನೆನಪಿಸುತ್ತವೆ. ಅಂತಹದ್ದೇ ಒಂದು ಭಾವುಕ ಹಾಗೂ ಹೃದಯಸ್ಪರ್ಶಿ ಕ್ಷಣವನ್ನು ಇನ್‌ಸ್ಟಾಗ್ರಾಮ್ ಬಳಕೆದಾರರಾದ ಸಾಕ್ಷಿ ಬೆಡ್ಮುಥಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸದ್ಯ ಈ ವೀಡಿಯೊ ನೆಟ್ಟಿಗರ ಮನ ಗೆದ್ದು ವೈರಲ್ ಆಗಿದೆ.
ಸಾಕ್ಷಿ ಅವರು ಹಂಚಿಕೊಂಡಿರುವ ವೀಡಿಯೊದಲ್ಲಿ ಅವರ ಪೋಷಕರು ಆಕೆಯ ವಿದೇಶ ಪ್ರಯಾಣಕ್ಕಾಗಿ ಬ್ಯಾಗ್ ಪ್ಯಾಕ್ ಮಾಡುತ್ತಿರುವುದನ್ನು ಕಾಣಬಹುದು. ಬಾಲ್ಯದಲ್ಲಿ ಶಾಲೆಗೆ ಬ್ಯಾಗ್ ಸಿದ್ಧಪಡಿಸಿಕೊಡುತ್ತಿದ್ದ ಪೋಷಕರು, ಇಂದು ಮಗಳ ಉನ್ನತ ಭವಿಷ್ಯ ಹಾಗೂ ಕನಸುಗಳಿಗಾಗಿ ವಿದೇಶಿ ಪಯಣಕ್ಕೆ ಲಗೇಜ್ ಪ್ಯಾಕ್ ಮಾಡುತ್ತಿರುವುದು ಅವರ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ.
“ಕನಸುಗಳನ್ನು ಬೆನ್ನಟ್ಟುವ ನಡುವೆ ಸೂಟ್‌ಕೇಸ್ ದೊಡ್ಡದಾಯಿತು”
ಈ ವೀಡಿಯೊಗೆ ಶೀರ್ಷಿಕೆ ಬರೆದಿರುವ ಸಾಕ್ಷಿ, “ನನ್ನ ಶಾಲಾ ಬ್ಯಾಗ್ ಪ್ಯಾಕ್ ಮಾಡುವುದರಿಂದ ಹಿಡಿದು ವಿದೇಶಕ್ಕೆ ಹೋಗಲು ಲಗೇಜ್ ಪ್ಯಾಕ್ ಮಾಡುವವರೆಗೆ…” ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, “ಬಾಲ್ಯ ಮತ್ತು ಕನಸುಗಳನ್ನು ಬೆನ್ನಟ್ಟುವ ಈ ನಡುವಿನ ಪಯಣದಲ್ಲಿ ಸೂಟ್‌ಕೇಸ್ ಗಾತ್ರ ದೊಡ್ಡದಾಯಿತು” ಎಂದು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಶಾಲಾ ದಿನಗಳ ಪುಟ್ಟ ಬ್ಯಾಗ್‌ನಿಂದ ಹಿಡಿದು ಇಂದು ಬದುಕಿನ ಹೊಸ ಅಧ್ಯಾಯಕ್ಕಾಗಿ ಹಿಡಿದ ಸೂಟ್‌ಕೇಸ್‌ವರೆಗೆ ಬೆಳೆದು ಬಂದ ಹಾದಿಯನ್ನು ಈ ಸಾಲುಗಳು ಅತ್ಯಂತ ಅರ್ಥಪೂರ್ಣವಾಗಿ ಬಿಂಬಿಸುತ್ತವೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಂದ ಪ್ರತಿಕ್ರಿಯೆಗಳು:
ಈ ವೀಡಿಯೊ ಇನ್‌ಸ್ಟಾಗ್ರಾಮ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದ್ದು, ಭಾವನಾತ್ಮಕ ಕಾಮೆಂಟ್‌ಗಳ ಮಹಾಪೂರವೇ ಹರಿದುಬರುತ್ತಿದೆ.
ಒಬ್ಬ ನೆಟ್ಟಿಗರು, “ಪೋಷಕರು ಪ್ರೀತಿಯಿಂದ ಪ್ಯಾಕ್ ಮಾಡುವ ಈ ಕ್ಷಣಗಳನ್ನು ಮಕ್ಕಳು ಜೀವನಪೂರ್ತಿ ನೆನಪಿಟ್ಟುಕೊಳ್ಳುತ್ತಾರೆ” ಎಂದು ಬರೆದಿದ್ದಾರೆ.
ಮತ್ತೊಬ್ಬರು, “ಈ ವೀಡಿಯೊ ಅತ್ಯಂತ ಅಮೂಲ್ಯವಾದದ್ದು” ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನೊಬ್ಬ ಬಳಕೆದಾರರು ತಮ್ಮ ಅನುಭವ ಹಂಚಿಕೊಳ್ಳುತ್ತಾ, “ನಾನು ಮೊದಲ ಬಾರಿಗೆ ಮನೆ ತೊರೆದು ಹೊರಟಾಗ, ನನ್ನ ಪೋಷಕರು ನನಗೆ ಅಗತ್ಯವಿರುವ ಪ್ರತಿಯೊಂದು ವಸ್ತುವನ್ನು ಪ್ರೀತಿಯಿಂದ ಜೋಡಿಸಿ ಕೊಟ್ಟಿದ್ದರು” ಎಂದು ನೆನಪಿಸಿಕೊಂಡಿದ್ದಾರೆ.
ಬಾಲ್ಯದ ನೆನಪುಗಳನ್ನು ಜೊತೆಯಲ್ಲಿಟ್ಟುಕೊಂಡು, ಭವಿಷ್ಯದ ಕನಸುಗಳನ್ನು ಬೆನ್ನಟ್ಟುವ ಈ ಭಾವನಾತ್ಮಕ ಪಯಣವು ಪ್ರತಿಯೊಬ್ಬ ವಿದೇಶಿ ವಿದ್ಯಾರ್ಥಿ ಹಾಗೂ ಅವರ ಪೋಷಕರ ಮನಸ್ಸಿಗೆ ತಟ್ಟುವಂತಿದೆ.





Leave a comment