SUDDIKSHANA KANNADA NEWS/ DAVANAGERE/ DATE:14-03-2025
ಮಂಗಳೂರು: ಈ ಅಪಘಾತ ಎದೆ ಝಲ್ ಎನಿಸುತ್ತದೆ. ಮಹಿಳೆಯು ಕಾಂಪೌಂಡ್ ನಲ್ಲಿ ನೇತಾಡಿದ್ದು ನೋಡಿದರೆ ಇದೊಂದು ಡೆಡ್ಲಿ ಆಕ್ಸಿಡೆಂಟ್ ಎಂಬುದರಲ್ಲಿ ಎರಡು ಮಾತಿಲ್ಲ.
ನೆರೆಮನೆ ವ್ಯಕ್ತಿಯನ್ನು ಕಾರು ಡಿಕ್ಕಿಪಡಿಸಿ ಕೊಲೆಗೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಬಿಜೈ ಕಾಪಿಕಾಡಿನಲ್ಲಿ ನಡೆದಿದೆ. ನಿವೃತ್ತ ಬಿಎಸ್ಸೆನ್ನೆಲ್ ಉದ್ಯೋಗಿ ಸತೀಶ್ ಕುಮಾರ್ ಕೃತ್ಯ ಎಸಗಿದ ಆರೋಪಿ.
ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಬೈಕಿನಲ್ಲಿ ಸಾಗುತ್ತಿದ್ದ ಮುರುಳಿ ಎಂಬಾತನಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ಎದುರುಗಡೆಯಿಂದ ನಡೆದುಕೊಂಡು ಬರುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಬೈಕ್ ಸವಾರ ಪಾರಾಗಿದ್ದರೆ, ಮಹಿಳೆಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕಾಂಪೌಂಡ್ ಗೋಡೆ ಮೇಲೆ ಎಸೆಯಲ್ಪಟ್ಟು ಮಹಿಳೆ ಸಿಕ್ಕಿಕೊಂಡು ಒದ್ದಾಡಿದ್ದಾರೆ.
ಇದನ್ನು ನೋಡುತ್ತಲೇ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ಕಾಂಪೌಂಡ್ ಗೆ ಸಿಲುಕಿಕೊಂಡಿದ್ದ ಮಹಿಳೆಯನ್ನು ಕೆಳಕ್ಕಿಳಿಸಿ ಸ್ಥಳೀಯರು ಉಪಚರಿಸಿದ್ದಾರೆ. ಕಾರು ಡಿಕ್ಕಿ ಹೊಡೆದು ಕೊಲೆ ಯತ್ನ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೈಕ್ ನಲ್ಲಿ ಬರುತ್ತಿದ್ದವನು ಅಪಾಯದಿಂದ ಪಾರಾದರೆ, ಮಹಿಳೆಗೆ ಹೊಡೆತ ಬಿದ್ದಿದ್ದು, ಕಾರು ಚಾಲಕನ ವಿರುದ್ಧ ಕೇಸ್ ದಾಖಲಾಗಿದೆ.