Home ಕ್ರೈಂ ನ್ಯೂಸ್ ಗಣೇಶೋತ್ಸವ ಹಬ್ಬದ ದಿನವೇ ದುರಂತ: ಫ್ರಿಡ್ಜ್ ಸ್ಫೋಟಗೊಂಡು ಒಂದೇ ಕುಟುಂಬದ ನಾಲ್ವರು ಸಜೀವ ದಹನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಗಣೇಶೋತ್ಸವ ಹಬ್ಬದ ದಿನವೇ ದುರಂತ: ಫ್ರಿಡ್ಜ್ ಸ್ಫೋಟಗೊಂಡು ಒಂದೇ ಕುಟುಂಬದ ನಾಲ್ವರು ಸಜೀವ ದಹನ!

Share
ಕುಟುಂಬ
Share

ಬೆಳಗಾವಿ: ಇಲ್ಲಿನ ಸೆಂಟ್ರಲ್ ಬಸ್ ಸ್ಟ್ಯಾಂಡ್ ಬಳಿಯ ಚಾವಟ ಗಲ್ಲಿಯಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡಿದ್ದು, ಇಬ್ಬರು ಮಹಿಳೆಯರು ತೀವ್ರವಾಗಿ ಗಾಯಗೊಂಡಿದ್ದಾರೆ.

ಗಣೇಶ ಚತುರ್ಥಿ ಹಬ್ಬದ ಸಂಭ್ರಮದಲ್ಲಿದ್ದ ಡಮೋಣೆ ಕುಟುಂಬದ ಮನೆಯಲ್ಲಿ ತಡರಾತ್ರಿ ಇದ್ದಕ್ಕಿದ್ದಂತೆ ಫ್ರಿಡ್ಜ್ ಸ್ಫೋಟಗೊಂಡು ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಸದ್ದು ಕೇಳಿದರೂ ಗಣೇಶೋತ್ಸವದ ಪಟಾಕಿ ಶಬ್ದವಿರಬಹುದು ಎಂದು ಭಾವಿಸಿದ್ದ ಸುತ್ತಮುತ್ತಲಿನ ಜನರು, ಹೊಗೆ ದಟ್ಟವಾಗಿ ಆವರಿಸಿದ ಮೇಲಷ್ಟೇ ಬೆಂಕಿಯ ತೀವ್ರತೆಯನ್ನು ಅರಿತರು.

ಹಳೆಯ ಮಾದರಿಯ ಮನೆಯಾದ್ದರಿಂದ ಕ್ಷಣಾರ್ಧದಲ್ಲೇ ದಟ್ಟ ಹೊಗೆ ಮತ್ತು ಬೆಂಕಿಯ ಕೆನ್ನಾಲಿಗೆ ಇಡೀ ಮನೆಯನ್ನು ಆವರಿಸಿಕೊಂಡಿತು. ಇದರಿಂದಾಗಿ ಒಳಗಿದ್ದ ಕುಟುಂಬಸ್ಥರು ಹೊರಬರಲಾಗದೆ ಸಿಲುಕಿಕೊಂಡರು.

ಮೃತರನ್ನು ಗಜಾನನ ಡಮೋಣೆ (65), ಶಾರದಾ ಡಮೋಣೆ (45), ಭಾರತಿ ಡಮೋಣೆ (50) ಮತ್ತು ರೋಷನ್ ಡಮೋಣೆ (21) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಪ್ರಿಯಾ ಡಮೋಣೆ (28) ಹಾಗೂ ಗಂಗಾ ಡಮೋಣೆ (25) ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಮಾರ್ಕೆಟ್ ಪೊಲೀಸ್ ಠಾಣೆಯ ಅಧಿಕಾರಿಗಳು ಧಾವಿಸಿ ಬೆಂಕಿ ಶಮನಗೊಳಿಸಿ, ಮೃತದೇಹಗಳನ್ನು ಹೊರತೆಗೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸ್ಫೋಟದ ತೀವ್ರತೆಗೆ ಇಡೀ ಕೋಣೆಯಲ್ಲಿ ವಿದ್ಯುತ್ ತಂತಿಗಳು ಹಾಗೂ ಪ್ಲಾಸ್ಟಿಕ್ ವಸ್ತುಗಳು ಉರಿದು ಕಪ್ಪು ಹೊಗೆ ತುಂಬಿಕೊಂಡಿತು. ಉಸಿರುಗಟ್ಟಿಸುವ ವಾತಾವರಣದಿಂದಾಗಿ ನಿದ್ರೆಯಲ್ಲಿದ್ದ ಕುಟುಂಬದ ಸದಸ್ಯರು ಚೀರಿಡಲಾರಂಭಿಸಿದರೂ, ಮನೆಯ ಬಾಗಿಲು ಮತ್ತು ಕಿಟಕಿಗಳು ಬಂದ್ ಆಗಿದ್ದರಿಂದ ಹೊರಬರಲು ಸಾಧ್ಯವಾಗಲಿಲ್ಲ. ಬೆಂಕಿ ಹತ್ತಿ ಉರಿಯುತ್ತಿದ್ದರೂ ಹೊರಗಿದ್ದವರಿಗೆ ಪಟಾಕಿ ಸದ್ದಿನ ಭ್ರಮೆಯಲ್ಲಿದ್ದ ಕಾರಣ ತಕ್ಷಣಕ್ಕೆ ಸಹಾಯ ಸಿಗಲಿಲ್ಲ.

Share

Leave a comment

Leave a Reply

Your email address will not be published. Required fields are marked *

Related Articles