Home ಕ್ರೈಂ ನ್ಯೂಸ್ 9/11 ಕರಾಳ ಕೃತ್ಯಕ್ಕೂ ಮುನ್ನ ಒಸಾಮಾ ಬಿನ್ ಲಾಡೆನ್ ಹಿಟ್ ಲಿಸ್ಟ್‌ನಲ್ಲಿತ್ತು ಭಾರತ! CIA ರಹಸ್ಯ ದಾಖಲೆಗಳಿಂದ ಧ್ವಂಸ ಸಂಚು ಬಯಲು
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

9/11 ಕರಾಳ ಕೃತ್ಯಕ್ಕೂ ಮುನ್ನ ಒಸಾಮಾ ಬಿನ್ ಲಾಡೆನ್ ಹಿಟ್ ಲಿಸ್ಟ್‌ನಲ್ಲಿತ್ತು ಭಾರತ! CIA ರಹಸ್ಯ ದಾಖಲೆಗಳಿಂದ ಧ್ವಂಸ ಸಂಚು ಬಯಲು

Share
ಭಾರತ
Share

ವಾಷಿಂಗ್ಟನ್: ವಿಶ್ವವನ್ನೇ ಬೆಚ್ಚಿಬೀಳಿಸಿದ್ದ 2001ರ ಸೆಪ್ಟೆಂಬರ್ 11ರ (9/11) ಭಯೋತ್ಪಾದನಾ ದಾಳಿಗೂ ಮುನ್ನ, ಅಲ್-ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಭಾರತದ ಮೇಲೆಯೂ ದಾಳಿ ನಡೆಸಲು ಸಂಚು ರೂಪಿಸಿದ್ದ ಎಂಬ ಆಘಾತಕಾರಿ ಮಾಹಿತಿ ಈಗ ಹೊರಬಿದ್ದಿದೆ.

9/11 ಕರಾಳ ದಾಳಿಗೆ 25 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದ ಪ್ರಮುಖ ಗೂಢಚಾರ ಸಂಸ್ಥೆ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ (CIA) 70ಕ್ಕೂ ಹೆಚ್ಚು ರಹಸ್ಯ ‘ಪ್ರೆಸಿಡೆನ್ಶಿಯಲ್ ಇಂಟೆಲಿಜೆನ್ಸ್ ಬ್ರೀಫ್’ ದಾಖಲೆಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದೆ. ಈ ದಾಖಲೆಗಳಲ್ಲಿ ಲಾಡೆನ್ ಭಾರತ ಸೇರಿದಂತೆ ಹಲವು ದೇಶಗಳನ್ನು ತನ್ನ ದಾಳಿಯ ಹಿಟ್ ಲಿಸ್ಟ್‌ನಲ್ಲಿ ಇರಿಸಿಕೊಂಡಿದ್ದ ಸಂಗತಿ ಬಯಲಾಗಿದೆ.

1998ರ ಗೂಢಚಾರ ವರದಿಯಲ್ಲಿ ಏನಿದೆ?

ಆಗಸ್ಟ್ 28, 1998ರಂದು ಸಿದ್ಧಪಡಿಸಲಾಗಿದ್ದ “ಬಿನ್ ಲಾಡೆನ್ ಭಯೋತ್ಪಾದನಾ ಜಾಲ ಇನ್ನೂ ಅಪಾಯಕಾರಿ” ಎಂಬ ಶೀರ್ಷಿಕೆಯ ರಹಸ್ಯ ದಾಖಲೆಯಲ್ಲಿ, ಬಿನ್ ಲಾಡೆನ್ ಅಮೆರಿಕ ಮಾತ್ರವಲ್ಲದೆ ಭಾರತ, ಪಾಕಿಸ್ತಾನ, ಈಜಿಪ್ಟ್, ಕುವೈತ್, ಸೌದಿ ಅರೇಬಿಯಾ, ಯೆಮೆನ್, ಉಗಾಂಡ ಹಾಗೂ ನೈಜೀರಿಯಾ ದೇಶಗಳ ಮೇಲೆಯೂ ಭಯೋತ್ಪಾದಕ ದಾಳಿ ನಡೆಸಲು ಯೋಜಿಸಿದ್ದ ಎಂದು ಉಲ್ಲೇಖಿಸಲಾಗಿದೆ.

ಆದಾಗ್ಯೂ, ಈ ವರದಿಯಲ್ಲಿ ಭಾರತದ ನಿರ್ದಿಷ್ಟ ಸ್ಥಳ ಅಥವಾ ದಾಳಿಯ ದಿನಾಂಕದ ವಿವರವಾದ ಯೋಜನೆಯನ್ನು ನಮೂದಿಸಲಾಗಿರಲಿಲ್ಲ.

60ಕ್ಕೂ ಹೆಚ್ಚು ದೇಶಗಳಲ್ಲಿ ಲಾಡೆನ್ ಜಾಲ:

ಅಮೆರಿಕವು ಅಫ್ಘಾನಿಸ್ತಾನದಲ್ಲಿದ್ದ ಅಲ್-ಖೈದಾ ಶಿಬಿರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಹೊರತಾಗಿಯೂ, ಲಾಡೆನ್ ಮತ್ತು ಆತನ ಸಾರಥ್ಯದ ಉಗ್ರ ಜಾಲದ ಸಂವಹನ ವ್ಯವಸ್ಥೆ ಸುಸ್ಥಿತಿಯಲ್ಲಿದ್ದು, ಜಗತ್ತಿನ ಸುಮಾರು 60ಕ್ಕೂ ಹೆಚ್ಚು ದೇಶಗಳಲ್ಲಿ ಆತನ ಬೆಂಬಲಿಗರ ನೆಟ್‌ವರ್ಕ್ ಸಕ್ರಿಯವಾಗಿತ್ತು ಎಂದು ಸಿಐಎ ವರದಿ ಮಾಡಿದೆ.

1998ರಿಂದ 2001ರ ಅವಧಿಯಲ್ಲಿ ಬಿಲ್ ಕ್ಲಿಂಟನ್ ಹಾಗೂ ಜಾರ್ಜ್ ಡಬ್ಲ್ಯೂ. ಬುಷ್ ಅಮೆರಿಕ ಅಧ್ಯಕ್ಷರಾಗಿದ್ದ ಸಮಯದಲ್ಲಿ ಸಿಐಎ ಅಧಿಕಾರಿಗಳು ನೀಡಿರುವ ಎಚ್ಚರಿಕೆಯ ಸೂಕ್ಷ್ಮ ವರದಿಗಳನ್ನು ಈಗ ಬಹಿರಂಗಪಡಿಸಲಾಗಿದ್ದು, ಜಾಗತಿಕ ಭಯೋತ್ಪಾದನೆಯ ಕರಾಳ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಿದೆ.

Share

Leave a comment

Leave a Reply

Your email address will not be published. Required fields are marked *

Related Articles