ದಾವಣಗೆರೆ: ಗಣೇಶ ಹಬ್ಬದ ಆಚರಣೆಯ ಸಂದರ್ಭದಲ್ಲಿ ಅನಗತ್ಯ ಗಲಾಟೆ ಹಾಗೂ ರಾತ್ರಿ ವೇಳೆಯ ಅತಿಯಾದ ಶಬ್ದ ಸಂಸ್ಕೃತಿಯಲ್ಲ. ನಾಡಿನ ವೈಭವೋಪೇತ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕಲಾತಂಡಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ದಾವಣಗೆರೆ ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯ ‘ತುಂಗಭದ್ರಾ ಸಭಾಂಗಣ’ದಲ್ಲಿ ಗೌರಿ-ಗಣೇಶ ಹಬ್ಬದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ನಾಗರಿಕ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಬ್ಬದ ವೇಳೆ ಸ್ಥಳೀಯ ಕಲಾತಂಡಗಳಿಗೆ ಪ್ರೋತ್ಸಾಹ ನೀಡಲು ಆಯೋಜಕರು ಕನಿಷ್ಠ ಒಂದು ವಾರ ಮುಂಚಿತವಾಗಿ ಮನವಿ ಸಲ್ಲಿಸಿದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಸಾಂಸ್ಕೃತಿಕ ಕಲಾತಂಡಗಳ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು.
ಕೆರೆಗಳಲ್ಲಿ ಮೂರ್ತಿ ವಿಸರ್ಜನೆ ನಿಷೇಧ – ಪರ್ಯಾಯ ವ್ಯವಸ್ಥೆ:
ಈ ಬಾರಿ ಜಿಲ್ಲೆಯಲ್ಲಿ ತೀವ್ರ ಬರದ ಪರಿಸ್ಥಿತಿ ಇರುವುದರಿಂದ ನದಿ, ಕೆರೆ ಹಾಗೂ ಕಾಲುವೆಗಳಲ್ಲಿ ನೀರಿನ ಅಭಾವವಿದೆ. ವಿಶೇಷವಾಗಿ ಕುಡಿಯುವ ನೀರಿನ ಯೋಜನೆಗಾಗಿ ಬಳಸುವ ಕೆರೆಗಳಲ್ಲಿ ಮೂರ್ತಿ ವಿಸರ್ಜನೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆಯೋಜಕರು ಮುಂಚಿತವಾಗಿ ಪಾಲಿಕೆ ಅಥವಾ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿದರೆ, ಮೂರ್ತಿ ವಿಸರ್ಜನೆಗೆ ಪರ್ಯಾಯ ನೀರಿನ ತೊಟ್ಟಿಗಳು ಹಾಗೂ ವಾಹನಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸಾರಿಗೆ ಹಾಗೂ ಆರೋಗ್ಯ ಸೇವೆ ವಿಸ್ತರಣೆ:
ದೊಡ್ಡ ಗಣಪತಿ ವಿಸರ್ಜನೆ ಮತ್ತು ಮೆರವಣಿಗೆ ನಡೆಯುವ ದಿನಗಳಲ್ಲಿ ತುರ್ತು ಆರೋಗ್ಯ ಸೇವೆಗಾಗಿ ಜಿಲ್ಲಾ ಆರೋಗ್ಯಾಧಿಕಾರಿಗಳ (DHO) ನೇತೃತ್ವದಲ್ಲಿ ಆಂಬ್ಯುಲೆನ್ಸ್ ನಿಯೋಜಿಸಲಾಗುತ್ತದೆ. ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯವಿರುವ ಪ್ರಮುಖ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ (KSRTC) ನಗರ ಸಾರಿಗೆ ಬಸ್‌ಗಳ ಸೇವೆಯನ್ನು ರಾತ್ರಿ 12 ಗಂಟೆಯವರೆಗೂ ವಿಸ್ತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಭಯ ನೀಡಿದರು.
ಸಂಚಾರ ಸುಗಮತೆ ಹಾಗೂ ಫುಟ್‌ಪಾತ್ ತೆರವು:
ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ಫುಟ್‌ಪಾತ್ ಆಕ್ರಮಣಗಳನ್ನು ತಕ್ಷಣವೇ ತೆರವುಗೊಳಿಸಲು ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ. ಆಟೋ ಚಾಲಕರಿಗೆ ಅಗತ್ಯ ಸೂಚನೆಗಳನ್ನು ನೀಡಲಾಗುವುದು. ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ, ಸಾರ್ವಜನಿಕರು ಶ್ರದ್ಧೆ, ಭಕ್ತಿ ಮತ್ತು ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದರು.





Leave a comment