ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಾಲ್ಯವಿವಾಹ ಮತ್ತು ಅಪ್ರಾಪ್ತ ವಯಸ್ಸಿನ ಗರ್ಭಧಾರಣೆ ಪ್ರಕರಣಗಳನ್ನು ಸಂಪೂರ್ಣವಾಗಿ ಮಟ್ಟಹಾಕಲು ರಾಜ್ಯ ಸರ್ಕಾರವು ನಿರ್ಣಾಯಕ ಮತ್ತು ಕಠಿಣ ಹೆಜ್ಜೆ ಇಟ್ಟಿದೆ. ಮುಖ್ಯಮಂತ್ರಿ ಸುಮೇಂದು ಅಧಿಕಾರಿ ಅವರು ಸೋಮವಾರ ಈ ಕುರಿತು ಪ್ರಮುಖ ಘೋಷಣೆ ಮಾಡಿದ್ದು, ರಾಜ್ಯದಲ್ಲಿ ಇನ್ನು ಮುಂದೆ ಬಾಲ್ಯವಿವಾಹ ಮಾಡುವವರಿಗೆ ಮತ್ತು ಇದಕ್ಕೆ ಕುಮ್ಮಕ್ಕು ನೀಡುವವರಿಗೆ ಕಠಿಣ ಕಾನೂನು ಶಿಕ್ಷೆ ಕಟ್ಟಿಟ್ಟಬುತ್ತಿ ಎಂದು ಎಚ್ಚರಿಸಿದ್ದಾರೆ.
ರಾಜ್ಯ ಆರೋಗ್ಯ ಇಲಾಖೆಯ ವರದಿಯ ಪ್ರಕಾರ, ಕೇವಲ ಆರು ತಿಂಗಳ ಅವಧಿಯಲ್ಲಿ (ಜನವರಿ 1 ರಿಂದ ಜೂನ್ 30ರವರೆಗೆ) 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 60,000 ಹೆಣ್ಣುಮಕ್ಕಳು ಮಕ್ಕಳನ್ನು ಪ್ರಸವಿಸಿರುವುದು ಬೆಳಕಿಗೆ ಬಂದಿದೆ. ಈ ಪೈಕಿ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 12,847 ಪ್ರಕರಣಗಳು ದಾಖಲಾಗಿದ್ದರೆ, ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ 4,178 ಪ್ರಕರಣಗಳು ವರದಿಯಾಗಿವೆ. ಈ ಅಂಕಿಅಂಶಗಳೊಂದಿಗೆ ದೇಶದಲ್ಲೇ ಪಶ್ಚಿಮ ಬಂಗಾಳವು ಬಾಲ್ಯವಿವಾಹ ಮತ್ತು ಅಪ್ರಾಪ್ತ ಗರ್ಭಧಾರಣೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಸಿಎಂ ಕಳವಳ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಪ್ರಮುಖ ಕಠಿಣ ಕ್ರಮಗಳು:
ಪೊಕ್ಸೋ ಕಾಯ್ದೆ ಹಾಗೂ ಸ್ವಯಂಪ್ರೇರಿತ ದೂರು: 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳು ಗರ್ಭಿಣಿಯಾದರೆ ಅಥವಾ ಮಗುವಿಗೆ ಜನ್ಮ ನೀಡಿದರೆ ಸರ್ಕಾರವು ಸ್ವಯಂಪ್ರೇರಿತ (Suo Motu) ಪ್ರಕರಣ ದಾಖಲಿಸಿಕೊಳ್ಳಲಿದೆ. ಅಪ್ರಾಪ್ತ ಬಾಲಕಿಯರ ಗಂಡಂದಿರ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಮೊಕದ್ದಮೆ ಹೂಡಲಾಗುವುದು.
ಶೋಕಾಸ್ ನೋಟಿಸ್ ಮತ್ತು ವಯಸ್ಸಿನ ದಾಖಲೆ: ಅಪ್ರಾಪ್ತ ವಯಸ್ಸಿನಲ್ಲಿ ಮದುವೆಯಾದ ಹೆಣ್ಣುಮಕ್ಕಳ ಪತಿಂದಿರಿಗೆ ಆರೋಗ್ಯ ಇಲಾಖೆಯಿಂದ ಶೋಕಾಸ್ ನೋಟಿಸ್ ಜಾರಿ ಮಾಡಲಾಗುತ್ತದೆ. ಪತ್ನಿಯ ವಯಸ್ಸು 18 ದಾಟಿರುವುದನ್ನು ಸಾಬೀತುಪಡಿಸಲು ವಿಫಲವಾದರೆ ಜೈಲು ಶಿಕ್ಷೆ ಖಚಿತ.
ಸಮಾಜದ ಇತರ ಪಾಲುದಾರರಿಗೂ ಶಿಕ್ಷೆ: ಕೇವಲ ಗಂಡಂದಿರಷ್ಟೇ ಅಲ್ಲದೆ, ಇಂತಹ ಮದುವೆಗಳನ್ನು ನೇರವೇರಿಸುವ ಪೂಜಾರಿಗಳು, ಕಾಜಿಗಳು ಮತ್ತು ಮದುವೆಗೆ ಕುಮ್ಮಕ್ಕು ನೀಡುವ ತಂದೆ-ತಾಯಿ ಹಾಗೂ ಪೋಷಕರನ್ನು ಸಹ ಕಾನೂನಿನ ಚೌಕಟ್ಟಿಗೆ ತರಲಾಗುವುದು.
ಸರ್ಕಾರಿ ಸೌಲಭ್ಯಗಳ ರದ್ದು: ಬಾಲ್ಯವಿವಾಹ ಅಥವಾ ಅಪ್ರಾಪ್ತ ಗರ್ಭಧಾರಣೆ ಪ್ರಕರಣಗಳಲ್ಲಿ ಭಾಗಿಯಾಗುವ ವ್ಯಕ್ತಿಗಳಿಗೆ ಸರ್ಕಾರದ ಪಿಂಚಣಿ ಹಾಗೂ ಇAತಹುದೇ ಇತರ ಸಾಮಾಜಿಕ ಕಲ್ಯಾಣ ಯೋಜನೆಗಳ ಪ್ರಯೋಜನಗಳು ಸಿಗದಂತೆ ರದ್ದುಗೊಳಿಸಲಾಗುತ್ತದೆ.
ಮತ ಅಥವಾ ಧರ್ಮವನ್ನು ನೋಡದೆ ಎಲ್ಲರ ಮೇಲೆಯೂ ಕಾನೂನು ಕಠಿಣವಾಗಿ ಜರುಗಲಿದೆ ಎಂದು ಸ್ಪಷ್ಟಪಡಿಸಿರುವ ಸರ್ಕಾರ, ರಾಜ್ಯಾದ್ಯಂತ ಮನೆ-ಮನೆಗೆ ತೆರಳಿ ಇಂತಹ ಅನಿಷ್ಟ ಪದ್ಧತಿಗಳನ್ನು ಪತ್ತೆಹಚ್ಚಲು ದೊಡ್ಡ ಮಟ್ಟದ ಅಭಿಯಾನವನ್ನು ಹಮ್ಮಿಕೊಳ್ಳಲು ಸಜ್ಜಾಗಿದೆ.





Leave a comment